ನಕಲಿ ಪಾಸ್ ಬಳಸಿ ಮರಳು ಸಾಗಣೆ: ಐವರ ಬಂಧನ

7

ನಕಲಿ ಪಾಸ್ ಬಳಸಿ ಮರಳು ಸಾಗಣೆ: ಐವರ ಬಂಧನ

Published:
Updated:

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ನಕಲಿ ಪಾಸ್‌ಗಳನ್ನು ಸಿದ್ಧಪಡಿಸಿ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ತಂಡವನ್ನು ಭೇದಿಸಿರುವ ಇಲ್ಲಿಯ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಸಾಫ್ಟ್‌ವೇರ್ ಎಂಜಿನಿಯರ್‌ ಸಹಿತ ಐವರನ್ನು ಗುರುವಾರ ಬಂಧಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಸುನೀಲ ತಿಪ್ಪಣ್ಣ ಉಪ್ಪಾರ, ಹೊನ್ನಪ್ಪ ರಾಮಾ ಗೌಡ, ಪ್ರಭಾಕರ ಗೌಡ, ಸಂತೋಷ ವೆಂಕಟರಾಯ ನಾಯಕ, ಸತೀಶ ಮೋಹನ ನಾಯಕ, ಬಂಧಿತರು. ಆರೋಪಿಗಳಿಂದ ಮರಳನ್ನು ಖರೀದಿಸಿ ಮಾರಾಟ ಮಾಡಿರುವ ಮುಂಡಗೋಡಿನ ನಜೀರ್‌ ಅಹ್ಮದ್‌ ನಂದಿಗಟ್ಟಿ ತಲೆಮರೆಸಿಕೊಂಡಿದ್ದಾರೆ.

ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ ನಂ.1ರ ಸಕ್ಯಾ ಮೊನೆಸ್ಟ್ರಿ ಹತ್ತಿರ ಬುಧವಾರ ಸಂಜೆ ಮರಳು ತುಂಬಿದ್ದ ಎರಡು ಟಿಪ್ಪರ್‌ಗಳನ್ನು ಸಿಪಿಐ ಕಿರಣಕುಮಾರ ನಾಯಕ ನೇತೃತ್ವದ ತಂಡವು ಪರಿಶೀಲನೆ ನಡೆಸಿದಾಗ, ಚಾಲಕರು ಪಾಸ್‌ ತೋರಿಸಿದ್ದಾರೆ. ಅನುಮಾನಗೊಂಡ ಪೊಲೀಸರು, ಆನ್‌ಲೈನ್‌ನಲ್ಲಿ ಪಾಸ್‌ ಅನ್ನು ಚೆಕ್‌ ಮಾಡಿದಾಗ, ಅವರ ಬಳಿಯಿದ್ದ ಪಾಸ್‌ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಪೊಲೀಸರು ಎರಡು ಟಿಪ್ಪರ್‌ಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಾಗ, ಅಂಕೋಲಾದಲ್ಲಿ ನಕಲಿ ಪಾಸ್‌ ತಯಾರಿಸಿ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

‘ಆರೋಪಿ ಸಂತೋಷ ನಾಯಕ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸುನೀಲ ಉಪ್ಪಾರನ ಸ್ನೇಹ ಬೆಳೆಸಿ, ನಕಲಿ ಪಾಸ್‌ಗಳನ್ನು ತಯಾರು ಮಾಡಿಕೊಡುವಂತೆ ಕೇಳಿದ್ದ. ಅದರಂತೆ, ಫೋಟೊಷಾಪ್‌ನಲ್ಲಿ ನಕಲಿ ಪಾಸ್‌ಗಳನ್ನು ತಯಾರು ಮಾಡಿ, ಈ ಹಿಂದೆ ಬಳಕೆಯಾಗಿದ್ದ ಅಸಲಿ ಪಾಸ್‌ಗಳ ಮೇಲಿರುವ ಹೋಲೊಗ್ರಾಮ್‌ ಮುದ್ರೆಯನ್ನು ಕಿತ್ತು ನಕಲಿ ಪಾಸ್‌ಗೆ ಅಂಟಿಸಿ ಮರಳು ಸರಬರಾಜು ಮಾಡಲಾಗುತ್ತಿತ್ತು. ಅಂಕೋಲಾದಲ್ಲಿ ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ, ಮರುದಿನದ ಪಾಸ್‌ ಸಹ ತಯಾರು ಮಾಡಿರುವುದು ಸಿಕ್ಕಿದೆ’ ಎಂದು ಕಿರಣಕುಮಾರ ನಾಯಕ ಹೇಳಿದರು.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್‌ ಅವರ ಸೂಚನೆಯಂತೆ, ತನಿಖೆ ಕೈಗೊಂಡಾಗ ಪ್ರಕರಣ ಹೊರಬಿದ್ದಿದೆ. ಆರೋಪಿಗಳು ಮುಂಡಗೋಡ, ಯಲ್ಲಾಪುರ ಹಾಗೂ ಹಳಿಯಾಳದಲ್ಲಿ ನಕಲಿ ಪಾಸ್‌ಗಳನ್ನು ಬಳಸಿ ಸುಮಾರು 200 ಟ್ರಿಪ್‌ ಮರಳು ಸಾಗಾಟ ಮಾಡಿರುವ ಶಂಕೆಯಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರನ್ನು ವಿಚಾರಣೆ ಒಳಪಡಿಸಬೇಕಾಗಿದೆ. ಒಂದು ಲ್ಯಾಪ್‌ಟ್ಯಾಪ್‌, ಪ್ರಿಂಟರ್‌, ನಕಲಿ ಪಾಸ್‌ಗಳು, ಹೋಲೊಗ್ರಾಮ್‌ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಾಯಕ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry