ಚನ್ನಪಟ್ಟಣದಲ್ಲಿ ಎಚ್‌ಡಿಕೆ ಸ್ಪರ್ಧಿಸುವರೇ?

7
ಬೆಂಗಳೂರಿನ ನಿವಾಸದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ; ಕುತೂಹಲದ ನಡೆ

ಚನ್ನಪಟ್ಟಣದಲ್ಲಿ ಎಚ್‌ಡಿಕೆ ಸ್ಪರ್ಧಿಸುವರೇ?

Published:
Updated:

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಇನ್ನಷ್ಟು ಗೊಂದಲಮಯವಾಗಿದೆ. ಮತ್ತೊಂದೆಡೆ ತಾವೇ ಅಭ್ಯರ್ಥಿಯಾಗುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.

ಸಭೆಯಲ್ಲಿ ನಡೆದದ್ದೇನು?: ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಲುವಾಗಿ ಸೋಮವಾರ ಜಯನಗರದಲ್ಲಿನ ತಮ್ಮ ನಿವಾಸದಲ್ಲಿ ಕುಮಾರಸ್ವಾಮಿ ಸಭೆ ಕರೆದಿದ್ದರು. ಬೆಳಿಗ್ಗೆ 11ರ ಸುಮಾರಿಗೆ ಸಭೆ ಆರಂಭಗೊಂಡಿದ್ದು, ಮಧ್ಯಾಹ್ನ 12.30ರವರೆಗೂ ನಡೆಯಿತು.

‘ಮೊದಲೇ ನಿರ್ಧರಿಸಿದಂತೆ ಅನಿತಾ ಕುಮಾರಸ್ವಾಮಿ ಅವರಿಗೇ ಟಿಕೆಟ್ ನೀಡಬೇಕು’ ಎಂದು ಕಾರ್ಯಕರ್ತರು ಒತ್ತಾಯ ಮಾಡಿದರು. ಆದರೆ ಎಚ್‌ಡಿಕೆ ಇದಕ್ಕೆ ಒಪ್ಪಲಿಲ್ಲ. ‘ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು ಎಂದು ನಿರ್ಧಾರವಾಗಿದೆ. ಹೀಗಾಗಿ ನಿಮ್ಮಲ್ಲಿಯೇ ಒಬ್ಬರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ’ ಎಂದರು. ಆದರೆ ಕಾರ್ಯಕರ್ತರೂ ಈ ಮಾತಿಗೆ ಓಗೊಡಲಿಲ್ಲ.

‘ಅನಿತಾ ಅವರೇ ನಮ್ಮ ಅಭ್ಯರ್ಥಿ. ಅವರನ್ನು ಬಿಟ್ಟು ಮತ್ತೊಬ್ಬರನ್ನು ಆಯ್ಕೆ ಮಾಡುವುದಿಲ್ಲ. ಅವರು ಸ್ಪರ್ಧಿಸುವುದು ಬೇಡ ಎಂದಾದರೆ ನೀವೇ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ. ಮುಂದೆ ಅಧಿಕಾರಕ್ಕೆ ಬಂದಾಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೊಂದು ಕ್ಷೇತ್ರವನ್ನು ಉಳಿಸಿಕೊಳ್ಳಿ’ ಎಂದು ಪಟ್ಟು ಹಿಡಿದರು.

ಆರಂಭದಲ್ಲಿ ಇದಕ್ಕೆ ಒಪ್ಪದ ಎಚ್‌ಡಿಕೆ, ಅಂತಿಮವಾಗಿ ಎರಡೂ ಕ್ಷೇತ್ರಗಳಲ್ಲಿ ತಾವೇ ಸ್ಪರ್ಧಿಸುವ ಭರವಸೆಯನ್ನು ಕಾರ್ಯಕರ್ತರಿಗೆ ನೀಡಿದರು ಎಂದು ಸಭೆಯಲ್ಲಿ ಪಾಲ್ಗೊಂಡವರು ತಿಳಿಸಿದರು.

ಜೆಡಿಎಸ್ ಮುಖಂಡರಾದ ಎಂ.ಸಿ. ಅಶ್ವಥ್‌, ಜಯಮುತ್ತು, ಎಸ್. ಲಿಂಗೇಶ್‌ಕುಮಾರ್, ನಿಜಲಿಂಗೇಗೌಡ, ರಾಂಪುರ ರಾಜಣ್ಣ, ಹಾಪ್‌ಕಾಮ್ಸ್ ದೇವರಾಜು ಇದ್ದರು.

ಕುತೂಹಲ ಮೂಡಿಸಿದ ನಡೆ: ಕುಮಾರಸ್ವಾಮಿ ಸಭೆಯಲ್ಲಿ ಆಡಿದ ಮಾತುಗಳು ಕೇವಲ ಸಿಟ್ಟಿನಿಂದ ಇಲ್ಲವೇ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಬಂದ ನುಡಿಗಳೇ ಅಥವಾ ಸ್ಪರ್ಧೆ ಬಗ್ಗೆ ಅವರು ಧೃಢ ನಿರ್ಧಾರ ತಳೆದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಹೊರತುಪಡಿಸಿ ಹಲವರ ಹೆಸರು ಕೇಳಿಬಂದರೂ ಒಮ್ಮತದ ನಿರ್ಧಾರ ಮೂಡಿಲ್ಲ. ಪಕ್ಷ

ದೊಳಗಿನ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಾದರೆ ಎಚ್‌ಡಿಕೆ ಕುಟುಂಬದವರೇ ಅಭ್ಯರ್ಥಿಯಾಗಬೇಕು ಎನ್ನುವುದು ಕಾರ್ಯರ್ತರ ಅಭಿಪ್ರಾಯವಾಗಿದೆ.

**

ಹೊಸ ಲೆಕ್ಕಾಚಾರ

ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧಿಸುವುದಾದರೆ ಕಡೆಯ ಕ್ಷಣದಲ್ಲಿ ಅನಿತಾ ಅವರನ್ನು ರಾಮನಗರ ಕ್ಷೇತ್ರದಿಂದ ಕಣಕ್ಕೆ ಇಳಿಸಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ರಾಮನಗರ ಕ್ಷೇತ್ರದಲ್ಲಿ ಅಷ್ಟೇನೂ ಸ್ಪರ್ಧೆ ಇಲ್ಲ. ಹೀಗಾಗಿ ಅನಿತಾ ಸ್ಪರ್ಧಿಸಿದರೂ ಜಯ ಪಡೆಯಬಹುದು ಎನ್ನುವ ಲೆಕ್ಕಾಚಾರವಿದೆ. ಆದರೆ ಚನ್ನಪಟ್ಟಣದಲ್ಲಿ ತುರುಸಿನ ಸ್ಪರ್ಧೆ ಇದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಎಚ್‌ಡಿಕೆ ಕ್ಷೇತ್ರ ಬದಲಿಸುವ ರಿಸ್ಕ್‌ ತೆಗೆದುಕೊಳ್ಳಲಾರರು ಎನ್ನುವ ಮಾತೂ ಇದೆ.

**

ಚನ್ನಪಟ್ಟಣದಲ್ಲಿ ತಾವೇ ಅಭ್ಯರ್ಥಿಯಾಗುವುದಾಗಿ ಕುಮಾರಸ್ವಾಮಿ ಸೋಮವಾರ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಅವರ ಸ್ಪರ್ಧೆ ಖಚಿತ

ಎಸ್‌. ಲಿಂಗೇಶ್‌ಕುಮಾರ್, ಜೆಡಿಎಸ್ ಮುಖಂಡ, ಚನ್ನಪಟ್ಟಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry