ವಿದ್ಯಾರ್ಥಿವೇತನಕ್ಕೆ ‘ಸಿಎಸ್‌ಆರ್‌’ ಬಳಕೆ

7

ವಿದ್ಯಾರ್ಥಿವೇತನಕ್ಕೆ ‘ಸಿಎಸ್‌ಆರ್‌’ ಬಳಕೆ

Published:
Updated:
ವಿದ್ಯಾರ್ಥಿವೇತನಕ್ಕೆ ‘ಸಿಎಸ್‌ಆರ್‌’ ಬಳಕೆ

ಕೆಲ ಉದ್ದಿಮೆ ಸಂಸ್ಥೆಗಳು ತಮ್ಮ ‘ಸಾಮಾಜಿಕ ಹೊಣೆಗಾರಿಕೆ ಯೋಜನೆ’ಯಡಿ (ಸಿಎಸ್‌ಆರ್‌) ವೆಚ್ಚ ಮಾಡುವ ಮೊತ್ತದಲ್ಲಿ ಕೆಲ ಭಾಗವನ್ನು ಉನ್ನತ ಶಿಕ್ಷಣ ರಂಗದಲ್ಲಿನ ವಿದ್ಯಾರ್ಥಿ ವೇತನಕ್ಕೆ ಬಳಸಲು ನಿರ್ಧರಿಸಿವೆ. ಈ ನೆರವನ್ನು ಅರ್ಹರಿಗೆ ತಲುಪಿಸಲು ಕೇಂದ್ರ ಸರ್ಕಾರದ ಎನ್‌ಎಸ್‌ಡಿಎಲ್‌ ಇ–ಆಡಳಿತವು, ವಿದ್ಯಾಸಾರಥಿ (Vidyasaarathi) ಹೆಸರಿನ ಪ್ರತ್ಯೇಕ ಅಂತರ್ಜಾಲ ತಾಣವನ್ನೇ ಅಭಿವೃದ್ಧಿಪಡಿಸಿದೆ.

ಉದ್ದಿಮೆ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಒಂದೆಡೆಯೇ ಮಾಹಿತಿ ವಿನಿಮಯ ಮಾಡಿಕೊಳ್ಳಲು ಈ ತಾಣ ನೆರವಾಗುತ್ತಿದೆ. ಕಾರ್ಪೊರೇಟ್‌ ಸಂಸ್ಥೆಗಳು ತಮ್ಮ ‘ಸಿಎಸ್‌ಆರ್‌’ ನಿಧಿಯನ್ನು ಈ ಕಾರ್ಯಕ್ರಮದಲ್ಲಿ ವಿನಿಯೋಗಿಸಲು  ಉತ್ತೇಜಿಸುತ್ತಿವೆ. 20 ರಿಂದ 25 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿವೆ.

ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌ (ಟಿಐಎಸ್‌ಎಸ್‌), ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಇದು ಕೇಂದ್ರೀಯ ಟ್ರಸ್ಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಎನ್‌ಎಸ್‌ಡಿಎಲ್‌ ಇ–ಗವರ್ನನ್ಸ್‌, ಈ ಯೋಜನೆ ಜಾರಿಗೆ ಅಗತ್ಯವಾದ ತಂತ್ರಜ್ಞಾನ ನೆರವು ಒದಗಿಸಲಿದೆ. ಡಿಜಿಟಲ್‌ ಹಣಕಾಸು ಸೇರ್ಪಡೆ ಕೇಂದ್ರವು (ಸಿಡಿಎಫ್ಐ) ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ.

ಎಸಿಸಿ ಸಿಮೆಂಟ್ ಕಂಪನಿಯು ಜಾರಿಗೆ ತಂದ ಆನ್‌ಲೈನ್‌ ವಿದ್ಯಾರ್ಥಿ ವೇತನ ಯೋಜನೆಯು ಈಗ ಒಂದು ವರ್ಷ ಪೂರ್ಣಗೊಳಿಸಿದೆ.  ಉನ್ನತ ಶಿಕ್ಷಣ ಪೂರ್ಣಗೊಳಿಸಲು ಈ ಸೌಲಭ್ಯವು ನೆರವಾಗುತ್ತಿದೆ.

ಈ ಯೋಜನೆಯು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದೆ. ಬಳಕೆದಾರ ಸ್ನೇಹಿಯಾದ ವಿದ್ಯಾರ್ಥಿ ವೇತನ ಸೌಲಭ್ಯ ಇದಾಗಿದೆ. ಅರ್ಹ ವಿದ್ಯಾರ್ಥಿಗಳನ್ನು ಸುಲಭವಾಗಿ ಆಯ್ಕೆ ಮಾಡಲು, ಆಡಳಿತಾತ್ಮಕ ಮತ್ತಿತರ ವೆಚ್ಚ ಕಡಿತಕ್ಕೂ ಈ ತಾಣ ನೆರವಾಗುತ್ತಿದೆ.

‘ಶಿಕ್ಷಣ ಕ್ಷೇತ್ರದಲ್ಲಿ ಹಣಕಾಸು ನೆರವು ನೀಡಲು  ಮುಂದಾಗುವ ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಇಂತಹ ನೆರವು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಅಂತರ್ಜಾಲ ತಾಣವು ವೇದಿಕೆ ಕಲ್ಪಿಸಿಕೊಟ್ಟಿದೆ. ಮೊದಲ ಹಂತದಲ್ಲಿ ಎಸಿಸಿ ಸಿಮೆಂಟ್‌ ಈ ಯೋಜನೆಗೆ ಕೈಜೋಡಿಸಿದೆ. ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಇನ್ನೂ ಹಲವು ಉದ್ದಿಮೆಗಳು ಇದರಲ್ಲಿ ಭಾಗಿಯಾಗಲು ಉತ್ಸುಕತೆ ತೋರಿಸಿವೆ’ ಎಂದು ಎನ್‌ಎಸ್‌ಡಿಎಲ್‌ನ ಸಿಇಒ ಗಗನ್‌ ರಾಯ್‌ ಹೇಳುತ್ತಾರೆ.

ವಿದ್ಯಾರ್ಥಿಗಳು ಈ ತಾಣದಲ್ಲಿ ತಾವು ಅರ್ಹರಾಗಿರುವ ವಿವಿಧ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳ ಪರಿಶೀಲನೆ, ವಿದ್ಯಾರ್ಥಿ ವೇತನ ಮಂಜೂರು, ವಿತರಣೆ ಮತ್ತಿತರ ಪ್ರಕ್ರಿಯೆ ಈ ತಾಣದಲ್ಲಿಯೇ ನಡೆಯಲಿದೆ. ಈ ಅಂತರ್ಜಾಲ ತಾಣದ ಸೇವೆಗೆ ಚಾಲನೆ ನೀಡಿದ ಎರಡು ತಿಂಗಳಲ್ಲಿ ಎಸಿಸಿ ಸಿಮೆಂಟ್‌ ₹ 1.7 ಕೋಟಿಗಳಷ್ಟು ಮೊತ್ತದ ವಿದ್ಯಾರ್ಥಿ ವೇತನ ವಿತರಿಸಿದೆ.

ಡಿಪ್ಲೊಮಾ, ಎಂಜಿನಿಯರಿಂಗ್‌, ಪದವಿ, ಸ್ನಾ
ತಕೋತ್ತರ ಪದವಿ – ಹೀಗೆ ಉನ್ನತ ವ್ಯಾಸಂಗಕ್ಕೆ ಅಗತ್ಯವಾದ ವಿದ್ಯಾರ್ಥಿ ವೇತನ ಪಡೆಯಲು ಈ ವೇದಿಕೆಯು ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ.

ವಿದ್ಯಾರ್ಥಿ ವೇತನಕ್ಕೆ ಸಂಬಂದಿಸಿದ ಎಲ್ಲ ಚಟುವಟಿಕೆಗಳಲ್ಲಿ ‘ಎನ್‌ಎಸ್‌ಡಿಎಲ್‌ – ಇ ಗವರ್ನನ್ಸ್‌’, ಸಿಎಸ್‌ಆರ್‌ ಮುಖ್ಯಸ್ಥರು, ವಿದ್ಯಾರ್ಥಿಗಳ ಅಹವಾಲು ಮತ್ತಿತರ ವಿಷಯಗಳಲ್ಲಿ ಸಮನ್ವಯತೆ ಸಾಧಿಸಲೂ ನೆರವಾಗುತ್ತಿದೆ. ಮಾಹಿತಿಗೆ ಅಂತರ್ಜಾಲ ತಾಣ www.vidyasaarathi.co.in ಕ್ಕೆ ಭೇಟಿ ನೀಡಬಹುದು.

*
ಹೆದ್ದಾರಿ ಪ್ರಯಾಣಿಕರಿಗೆ ‘ಸುಖದ್‌ಯಾತ್ರಾ’ ಆ್ಯಪ್‌ 
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೆದ್ದಾರಿ ಬಳಕೆದಾರರಿಗಾಗಿ 24 ಗಂಟೆಯ ಉಚಿತ ತುರ್ತು ಕರೆ ಸೌಲಭ್ಯ ಮತ್ತು ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಉಚಿತ ಕರೆ ಸೌಕರ್ಯ (1033) ಮತ್ತು ಮೊಬೈಲ್ ಆ್ಯಪ್‌ ಬಿಡುಗಡೆಯಾಗಿದೆ. ಹೆದ್ದಾರಿ ಬಳಕೆದಾರರ ಆ್ಯಪ್‌ಗೆ ‘ಸುಖದ್‌ಯಾತ್ರಾ‘ ಎಂದು ಹೆಸರಿಡಲಾಗಿದೆ. ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ಆ್ಯಪ್‌ ಬಳಕೆ ಮಾಡಬಹುದು. ವಿಳಂಬ ಪ್ರಯಾಣ, ರಸ್ತೆಗುಂಡಿಗಳು, ಟೋಲ್ ವಿಳಂಬ, ಆ್ಯಂಬುಲೆನ್ಸ್, ಅಪಘಾತಗಳ ಬಗ್ಗೆ ಪ್ರಯಾಣಿಕರು ಆ್ಯಪ್‌ ಮೂಲಕ ಮಾಹಿತಿ ಅಥವಾ ದೂರು ಸಲ್ಲಿಸಬಹುದು.

ಆ್ಯಪ್ ಮಾತ್ರವಲ್ಲದೆ ಉಚಿತ ತುರ್ತು ಕರೆ ಮಾಡಬಹುದು. ಇದರಲ್ಲಿ ಫಾಸ್ಟ್‌ಟ್ಯಾಗ್‌ ಸಂಪರ್ಕಿಸುವ ವ್ಯವಸ್ಥೆಯನ್ನು ಕಲ್ಪಿಸಿರುವುದು ವಿಶೇಷ. ಈ ಆ್ಯಪ್‌ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸಿದೆ.  ಆ್ಯಂಡ್ರಾಯಿಡ್ ಮತ್ತು ಐಒಎಸ್‌ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್‌ ಅನ್ನು ಉಚಿತವಾಗಿ ಗೂಗಲ್ ಪ್ಲೇಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. SukhadYatra

*
ಹೊಸ ರೂಪದಲ್ಲಿ ’ಮೈಅಗ್ರಿಗುರು‘ ಆ್ಯಪ್‌
ಮಹೀಂದ್ರಾ ಅಗ್ರಿ ಸಲ್ಯೂಷನ್‌ ಲಿಮಿಟೆಡ್‌ ವಿನ್ಯಾಸ ಮಾಡಿರುವ ’ಮೈಅಗ್ರಿಗುರು’ ಆ್ಯಪ್‌ ಅನ್ನು ಇದೀಗ ಹೊಸ ಅವತರಣಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಚಾಟ್‌ಬೋಟ್‌ ಸೌಲಭ್ಯ ಪರಿಚಯಿಸಲಾಗಿದೆ. ಬಳಕೆದಾರರು ಆಡಿಯೋ ಮತ್ತು ಬರಹ (text) ರೂಪದಲ್ಲಿ ಸಂವಹನ ನಡೆಸಬಹುದು.

ದೇಶದಾದ್ಯಂತ ಮೈಅಗ್ರಿಗುರು ಆ್ಯಪ್‌ಗೆ ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಲ್ಲಿಯವರೆಗೂ ಈ ಆ್ಯಪ್‌ ಅನ್ನು 4 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ 30 ಲಕ್ಷ  ರೈತರಿಗೆ ಈ ಆ್ಯಪ್‌ ತಲುಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಸಿಇಒ ಅಶೋಕ್‌ ಶರ್ಮಾ ತಿಳಿಸಿದ್ದಾರೆ.

ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಐದು ಪ್ರಾದೇಶಿಕ ಭಾಷೆಗಳನ್ನು ಇದರಲ್ಲಿ ಅವಳವಡಿಸಲು ನಿರ್ಧರಿಸಲಾಗಿದೆ. ಕೃಷಿ ಚಟುವಟಿಕೆಗೆ ಬೇಕಾಗಿರುವ ಪೂರಕ ಮಾಹಿತಿ, ಹಮಾವಾನ ಮತ್ತು ಮಾರುಕಟ್ಟೆ ವರದಿಯನ್ನು ರೈತರು ಪ್ರತಿ ದಿನ ಪಡೆಯಬಹುದು. ಕೃಷಿಗೆ ಸಂಬಂಧಪಟ್ಟಂತೆ ಸಂದೇಹ ಅಥವಾ ಅನುಮಾನಗಳಿದ್ದಾರೆ ಆಡಿಯೊ ಮತ್ತು ಬರಹ ರೂಪದಲ್ಲಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳಬಹುದು.

ಆ್ಯಂಡ್ರಾಯಿಡ್ ಮಾದರಿಯಲ್ಲಿ ಲಭ್ಯವಿರುವ ಮೈಅಗ್ರಿಗುರು ಆ್ಯಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗೂಗಲ್‌ ಪ್ಲೇಸ್ಟೋರ್‌:  MyAgriGuru

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry