‘ಒತ್ತಡವಿಲ್ಲದ ಜೀವನ ಸೋಮಾರಿತನಕ್ಕೆ ಸೋಪಾನ’

7

‘ಒತ್ತಡವಿಲ್ಲದ ಜೀವನ ಸೋಮಾರಿತನಕ್ಕೆ ಸೋಪಾನ’

Published:
Updated:
‘ಒತ್ತಡವಿಲ್ಲದ ಜೀವನ ಸೋಮಾರಿತನಕ್ಕೆ ಸೋಪಾನ’

ಯಾವುದೇ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಅದು ನಮಗೆ ಒತ್ತಡ ನೀಡುತ್ತದೆ ಎಂದುಕೊಂಡರೆ ಆ ಕೆಲಸ ನಮ್ಮನ್ನು ಹೆದರಿಸುತ್ತದೆ; ಒತ್ತಡ ಅಲ್ಲವೇ ಅಲ್ಲ ಎಂದುಕೊಂಡರೆ ಆಗ ಅದು ನಮ್ಮ ಬಳಿ ಸುಳಿಯುವುದೇ ಇಲ್ಲ. ‘ಟೆನ್ಷನ್’ ಈಗ ಎಲ್ಲ ಕಡೆಯೂ ಇದದ್ದೇ. ಅದನ್ನು ನಮ್ಮ ಕೆಲಸ ಹಾಗೂ ಜೀವನದ ಭಾಗ ಎಂದುಕೊಳ್ಳಬೇಕು. ಇಲ್ಲದಿದ್ದರೆ ಅದು ತುಂಬಾ ಭಾರವಾಗುತ್ತದೆ; ಅದು ಎಷ್ಟು ದೊಡ್ಡ ಸಮಸ್ಯೆ ಎಂದು ಅನ್ನಿಸುತ್ತದೆ.

ನನ್ನ ಉದ್ಯಮದಲ್ಲಂತೂ ಪ್ರತಿದಿನ ಸಾಕಷ್ಟು ಒತ್ತಡವಿರುತ್ತದೆ. ನಾವು ಮೆಗಾ ಸೀರಿಯಲ್‌ಗಳನ್ನು ಮಾಡುತ್ತಿರುತ್ತೇವೆ. ಸದ್ಯ ನಾನು ಮೂರು ಧಾರಾವಾಹಿ ಮಾಡುತ್ತಿದ್ದೇನೆ. ಈ ಮೂರರಿಂದ ಏನಿಲ್ಲ ಎಂದರೆ 60ರಿಂದ 70 ಕಲಾವಿದರು, ತಂತ್ರಜ್ಞರು ಸೇರಿ ಸುಮಾರು 150 ಮಂದಿ ಆಗ್ತಾರೆ. ಇಷ್ಟು ಜನರಲ್ಲಿ ಒಬ್ಬರಲ್ಲಾ ಒಬ್ಬರದು ಒಂದು ಸಮಸ್ಯೆ ಇದ್ದೇ ಇರುತ್ತದೆ.

ಕೆಲಸ ಬಿಡ್ತೀನಿ ಅನ್ನುತ್ತಾರೆ, ಎಲ್ಲಿಗೋ ಹೋಗ್ತಾ ಇದ್ದೇನೆ ಅನ್ನುತ್ತಾರೆ, ಹೀಗೆ ಏನಾದರೂ ಒಂದು ಆಗುತ್ತಲೇ ಇರುತ್ತದೆ. ಇಂಥ ಸಮಸ್ಯೆಗಳು ಎದುರಾದಾಗ ಆರಂಭದಲ್ಲಿ ನನಗೆ ಇದು ದೊಡ್ಡ ವಿಚಾರ ಎನ್ನಿಸುತ್ತಿತ್ತು. ‘ಏನಪ್ಪ ಈ ಕಲಾವಿದರು ಮತ್ತು ತೆರೆಯ ಹಿಂದೆ ಕೆಲಸ ಮಾಡುವವರನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆಯಲ್ಲಾ’ ಎಂದು ಅನಿಸುತಿತ್ತು. ಆ ರೀತಿಯ ಒತ್ತಡವನ್ನು ಆಮೇಲೆ ಆಮೇಲೆ ಬೇರೆ ರೀತಿಯೇ ತಗೆದುಕೊಳ್ಳಲು ಆರಂಭಿಸಿದೆ.

ಈ ಕ್ಷೇತ್ರಕ್ಕೆ ಬಂದು 10 ವರ್ಷಗಳಾಗುತ್ತಾ ಬಂತು. ಈಗೀಗ ಇಂತಹ ಎಲ್ಲ ಸಮಸ್ಯೆಗಳನ್ನೂ ನಿಭಾಯಿಸುವ ವಿಧಾನವನ್ನು ಕಲಿತುಕೊಂಡಿದ್ದೇನೆ. ಇಂತಹ ಸಮಸ್ಯೆಗಳನ್ನು ಪ್ರೆಶರ್ ಆಗಿ ಡೀಲ್ ಮಾಡದೆ ಪರಿಹಾರದ ನಿಟ್ಟಿನಲ್ಲಿ ನೋಡುತ್ತಾ ಬಂದೆ. ಯಾರೋ ಬಂದು ‘ನಾನು ಬಿಟ್ಟು ಹೋಗುತ್ತೇನೆ’ ಎಂದರೆ ಅವರೊಂದಿಗೆ ಮಾತನಾಡುವ ರೀತಿಯನ್ನೇ ಬದಲಿಸಿಕೊಂಡೆ.

ಎಲ್ಲವನ್ನೂ ಸಮಾಧಾನದಿಂದ ‘ಏನಪ್ಪ ನೀವು ಹೋಗ್ತಾ ಇದ್ದೀರಾ? ಸರಿ, ನನಗೆ ಬದಲಿ ಯಾರಾದರೂ ಸಿಗುತ್ತಾರಾ? ಅಲ್ಲಿವರೆಗೆ ಇರಿ’ ಹೀಗೆ ಅವರೊಂದಿಗೆ ಸಮಾಧಾನಚಿತ್ತದಿಂದಲೇ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಬಂದಿದ್ದೇನೆ.

ಒಟ್ಟಾರೆ ಇದೆಲ್ಲದರ ಅರ್ಥ ಸಮಸ್ಯೆಯನ್ನು ನಿಭಾಯಿಸುವ ಜಾಣ್ಮೆಯನ್ನು ಕಲಿತುಕೊಳ್ಳಬೇಕು. ಇಲ್ಲವೆಂದರೆ ಎಲ್ಲವೂ ಒತ್ತಡವಾಗಿಯೇ ಕಾಣುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿನ ಜನರು ಅವರದ್ದೇ ಒತ್ತಡದಲ್ಲಿ ಇರುತ್ತಾರೆ. ಅದನ್ನು ನಮ್ಮ ಮೇಲೆ ವರ್ಗಾಯಿಸಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಎಚ್ಚರವಾಗಿರಬೇಕು.

ನಮ್ಮ ಕ್ಷೇತ್ರದಲ್ಲಂತೂ ಮುಖ್ಯವಾಗಿ ಜನರನ್ನು ನಿರ್ವಹಿಸುವುದೇ ದೊಡ್ಡ ಒತ್ತಡದ ಕೆಲಸ. ನಾವು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಾಗ ಅದಕ್ಕೆ ಸರಿಯಾದ ಟೀಮ್‌ ಮಾಡಿಕೊಳ್ಳಬೇಕು. ಅದಕ್ಕೆ ನಾವೆಲ್ಲ ಸೇರಿ ಏನು ಮಾಡುತ್ತೇವೆ ಎಂಬ ಅರಿವು ಇರಬೇಕು. ಇದಕ್ಕೆಲ್ಲ ಸರಿಯಾದ ತಂಡ ಇದ್ದರೆ ಒತ್ತಡ ಇರುವುದಿಲ್ಲ. ನಾವು ಯಾವಾಗಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೆಲಸ ಮಾಡುತ್ತಲೇ ಇರಬೇಕು. ಇದೂ ಒಂದು ಸವಾಲು. 

ಒತ್ತಡವಾದಾಗ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಬ್ರೇಕ್‌ ತಗೆದುಕೊಳ್ಳಬೇಕು. ಆದರೆ ಮೆಗಾ ಸೀರಿಯಲ್‌ನಲ್ಲಿ ಅಷ್ಟು ಸುಲಭವಲ್ಲ. ವರ್ಷಾನುಗಟ್ಟಲೆ ಮಾಡುತ್ತಲೇ ಇರುತ್ತೇವೆ. ಒತ್ತಡದಲ್ಲೇ ನಾವು ಹೆಚ್ಚು ಚೆನ್ನಾಗಿ ಕೆಲಸ ಮಾಡೋದು ಎಂದೆನಿಸತ್ತದೆ. ನಾವು ಗೆಲುವಿಗಾಗಿಯೇ ಸದಾ ಪ್ರಯತ್ನಿಸಬೇಕು. ಎಲ್ಲವನ್ನೂ ಸುಲಭವಾಗಿ ತಗೆದುಕೊಂಡರೆ ಜೀವನದಲ್ಲಿ ರಿಲಾಕ್ಸ್ ಆಗಿಬಿಡುತ್ತೇವೆ. ಜೀವನದಲ್ಲಿ ಬರುವ ಪ್ರತಿ ಘಟನೆಯೂ ನಮಗೆ ಸಿಕ್ಕ ಒಂದು ಅವಕಾಶ ಎಂದು ಪರಿಗಣಿಸಬೇಕು. ಒತ್ತಡವೇ ಇಲ್ಲದಿದ್ದರೆ ನಾವು ಸೋಮಾರಿಗಳಾಗಿಬಿಡುತ್ತೇವೆ!

ನಾನು ಎಂಜಿನಿಯರಿಂಗ್‌ ಓದನ್ನು ಮಧ್ಯದಲ್ಲೇ ಬಿಟ್ಟುಬಿಟ್ಟೆ. ಎರಡನೇ ವರ್ಷದಲ್ಲಿದ್ದಾಗ ‘ನಾನು ಓದಿ ಏನು ಮಾಡುತ್ತೇನೆ’ ಎಂಬ ಪ್ರಶ್ನೆ ಮೂಡಿತು. ಆಗ ಮನೆಯಲ್ಲಿ  ವಿಚಿತ್ರವಾಗಿ ನೋಡಲು ಆರಂಭಿಸಿದರು. ಆಗ ಹೊಸ ಹೆಜ್ಜೆ ಇಡುತ್ತೇನೆ ಎಂದುಕೊಂಡು ಬೆಂಗಳೂರಿಗೆ ಬಂದೆ. ಆಗಿನದ್ದು ಮಾತ್ರ ನಿಜವಾದ ಒತ್ತಡದ ಸಂದರ್ಭ. ಆದರೆ ನನಗೆ ಅವಕಾಶಗಳು ಸಿಕ್ಕಿದವು. 

ನಮ್ಮಜ್ಜಿಯ ಕಾಲದವರು ಒತ್ತಡವನ್ನು ಚೆನ್ನಾಗಿ ನಿಭಾಯಿಸುವುದನ್ನು ಕಲಿತಿದ್ದರು. ಆದರೆ ಈಗ ಹಾಗಿಲ್ಲ. ಸಂಸಾರವನ್ನು ಅವರು ಸಮತೋಲನ ಮಾಡುತ್ತಿದ್ದ ರೀತಿ ಅದ್ಭುತ. ಮಹಿಳೆಯರಿಗಂತೂ ದೈಹಿಕ ಆರೋಗ್ಯಕ್ಕೂ ಒತ್ತಡಕ್ಕೂ ನೇರ ಸಂಬಂಧವಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry