7
ಕರ್ನಾಟಕದಲ್ಲಿರುವುದು ಕಡು ಭ್ರಷ್ಟ ಸರ್ಕಾರ: ಆಮ್‌ ಆದ್ಮಿ ಟೀಕೆ

ಆಪ್‌ ಮೊದಲ ಕಂತಿನ 18 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Published:
Updated:
ಆಪ್‌ ಮೊದಲ ಕಂತಿನ 18 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ (ಎಎಪಿ) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 18 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ರೇಣುಕಾ ವಿಶ್ವನಾಥನ್‌ ಶಾಂತಿ ನಗರ, ದೇವರಾಜ ಅರಸು ಮೊಮ್ಮಗ ಲಿಂಗರಾಜ ಅರಸು ಕೆ. ಆರ್‌. ಪುರ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಸರ್ವಜ್ಞ ನಗರ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್‌ ಗುಪ್ತಾ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಪರಾಧ ಹಿನ್ನೆಲೆ, ಭ್ರಷ್ಟಾಚಾರ ಮತ್ತು  ಕೋಮುವಾದದ ಕಳಂಕ ಇದ್ದವರಿಗೆ ಟಿಕೆಟ್‌ ಕೊಟ್ಟಿಲ್ಲ. ಮುಂದಿನ ಪಟ್ಟಿಯಲ್ಲೂ ಉತ್ತಮ ಚಾರಿತ್ರ್ಯವುಳ್ಳ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿರುವವರಿಗೇ ಟಿಕೆಟ್‌ ನೀಡಲಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು.

‘ನಮ್ಮ ಅಭ್ಯರ್ಥಿಗಳು ಆಯ್ಕೆಯಾಗಿ ಬಂದರೆ, ಶಿಕ್ಷಣ, ಆರೋಗ್ಯ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದ್ದಾರೆ. ಅಭ್ಯರ್ಥಿಗಳು ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ’ ಎಂದು ಪಂಕಜ್‌ ಗುಪ್ತಾ ತಿಳಿಸಿದರು.

ಭ್ರಷ್ಟಾಚಾರದಲ್ಲಿ ನಂಬರ್‌ 1: ಕರ್ನಾಟಕ ದೇಶದ ಅತ್ಯಂತ ಭ್ರಷ್ಟ ರಾಜ್ಯವಾಗಿದೆ. ಬೆಂಗಳೂರು ನಗರದ ಆಡಳಿತ ನೋಡಿಕೊಳ್ಳುತ್ತಿರುವ ಬಿಬಿಎಂಪಿಯೂ ಭ್ರಷ್ಟಾಚಾರದ ಕೂಪವಾಗಿದೆ. ರೈತರ ಆತ್ಮಹತ್ಯೆ ಪ್ರಮಾಣ ಇತರ ದೇಶಗಳಿಗಿಂತ ಇಲ್ಲಿಯೇ ಅತಿ ಹೆಚ್ಚು ಎಂದರು.

ಕರ್ನಾಟಕ ಲೋಕಾಯುಕ್ತ ಹಿಂದೆ ಅತ್ಯಂತ ಶಕ್ತಿಶಾಲಿಯಾಗಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಕಾಯುಕ್ತದ ಶಕ್ತಿ ಕಸಿದುಕೊಂಡು, ಅದನ್ನು ಬಲಹೀನಗೊಳಿಸಿದೆ. ಹೀಗಾಗಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಲು ಅನುಕೂಲವಾಗಿದೆ ಎಂದು ಅವರು ಆರೋಪಿಸಿದರು.

‘ಪ್ರಧಾನಿ ಮೋದಿ ಚುನಾವಣೆಗೆ ಮೊದಲು ನೀಡಿದ ವಾಗ್ದಾನದಂತೆ ನಡೆದುಕೊಂಡಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿತು. ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ’ ಎಂಬುದನ್ನು ಹೇಳಬೇಕು ಎಂದು ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಒತ್ತಾಯಿಸಿದರು.

‘ದೆಹಲಿಯಲ್ಲಿರುವ ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದರಲ್ಲಿ ದೇಶದಲ್ಲೇ ಮುಂದೆ ಇದೆ. ವಿದ್ಯುತ್‌ ದರ ಕಡಿಮೆ ಮಾಡಿದ್ದೇವೆ. ಕುಡಿಯುವ ನೀರು ಉಚಿತವಾಗಿ ಪೂರೈಕೆ ಮಾಡುತ್ತಿದ್ದೇವೆ. ಸರ್ಕಾರಿ ಶಿಕ್ಷಕರಿಗೆ ವಿದೇಶಗಳಲ್ಲಿ ತರಬೇತಿ ಕೊಡಿಸುವ ಕೆಲಸ ಮಾಡಿದ್ದೇವೆ’ ಎಂದು ಸಿಂಗ್‌ ತಿಳಿಸಿದರು.

ಆಮ್‌ ಆದ್ಮಿ ಅಭ್ಯರ್ಥಿಗಳು: ಪೃಥ್ವಿ ರೆಡ್ಡಿ– ಸರ್ವಜ್ಞ ನಗರ, ರೇಣುಕಾ ವಿಶ್ವನಾಥನ್‌–  ಶಾಂತಿನಗರ, ಲಿಂಗರಾಜ ಅರಸ್‌– ಕೆ.ಆರ್‌.ಪುರ, ಮೋಹನ್‌ ದಾಸರಿ– ಸಿ.ವಿ.ರಾಮನ್‌ ನಗರ, ಎಸ್‌.ಜಿ ಸೀತಾರಾಮ್‌– ಬಸವನಗುಡಿ, ಎಂ.ಸಿ. ಅಬ್ಬಾಸ್‌– ಬಿಟಿಎಂ ಲೇಔಟ್‌, ರಾಘವೇಂದ್ರ ಥಾಣೆ– ಹೆಬ್ಬಾಳ, ಸಿದ್ದಲಿಂಗಯ್ಯ– ಪುಲಿಕೇಶಿನಗರ, ಆಯೂಬ್‌ ಖಾನ್‌– ಶಿವಾಜಿ ನಗರ, ದೀಪಕ್‌ ಮಾಲಗಾರ– ಬಸವಕಲ್ಯಾಣ, ಮಾಲವಿಕ ಗುಬ್ಬಿವಾಣಿ– ಚಾಮರಾಜ (ಮೈಸೂರು), ಕೆ.ಎಸ್‌. ರಾಘವೇಂದ್ರ– ದಾವಣಗೆರೆ ದಕ್ಷಿಣ, ಸಂತೋಷ್‌ ನರಗುಂದ– ಹುಬ್ಬಳ್ಳಿ ಸೆಂಟ್ರಲ್‌, ಬಾಳ ಸಾಹೇಬ ರಾವ್‌– ಕಾಗವಾಡ, ಆನಂದ ಹಂಪಣ್ಣನವರ್‌– ಕಿತ್ತೂರು, ಚಂದ್ರಕಾಂತ್ ಎಸ್‌. ರೇವಣ್ಣಕರ್‌– ಶಿಕಾರಿಪುರ, ರವಿಕುಮಾರ್– ಭದ್ರಾವತಿ, ಶರಣಪ್ಪ ಸಜ್ಜಿಹೊಲ– ಗಂಗಾವತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry