ಮೌಲ್ಯ... ಜನತಂತ್ರದ ಅಂತಃಸತ್ವ

7

ಮೌಲ್ಯ... ಜನತಂತ್ರದ ಅಂತಃಸತ್ವ

Published:
Updated:

ರಾಜ್ಯವು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಚುನಾವಣಾ ರಾಜಕೀಯ ರಂಗವನ್ನು ವಿವಿಧ ರಾಜಕೀಯ ಪಕ್ಷಗಳು ಭಿನ್ನ ನಡೆ-ನುಡಿಗಳಲ್ಲಿ ರಂಗೇರಿಸುತ್ತಿವೆ. ಯಾರು ಕಡು ಭ್ರಷ್ಟರು? ಯಾರು ಮತ- ಸಂಸ್ಕೃತಿ ವಿರೋಧಿಗಳು? ಯಾರು ಕೊಲೆಗಡುಕರು? ಯಾರು ಸಾಲಮನ್ನಾ ಮಾಡಿಸಿದವರು? ಯಾರು ಭಾಗ್ಯಗಳ ಸರಮಾಲೆ ಹರಿಸಿದವರು?... ಈ ಕುರಿತ ಏರು ಧ್ವನಿಗಳು ಪ್ರಚಾರದ ಮುನ್ನೆಲೆಗೆ ಪ್ರವೇಶಿಸುತ್ತಿವೆ. ತೆರೆಮರೆಯಲ್ಲಿ ಈ ತೆರನಾದ ಪ್ರಚಾರದ ಅಬ್ಬರಗಳನ್ನು ಗಮನಿಸುತ್ತಿರುವ ಮತದಾರರಲ್ಲಿ, ಸಾಂವಿಧಾನಿಕ ಆಶಯಗಳ ಜಾಗೃತಿಯನ್ನು ಮೂಡಿಸುವುದು ಈಗಿನ ಅಗತ್ಯವಾಗಿದೆ.

ಚುನಾವಣಾ ಪ್ರಜಾತಂತ್ರಕ್ಕೆ ತಾತ್ವಿಕ ಮತ್ತು ವಾಸ್ತವಿಕ ಆಯಾಮಗಳಿವೆ. ಚುನಾವಣಾ ಪ್ರಜಾತಂತ್ರದ ತಾತ್ವಿಕತೆಯು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೌಲ್ಯಗಳಿಗೆ ಮತ್ತು ವಿಧಾನಗಳಿಗೆ ಸಂಬಂಧಿಸಿದೆ. ಜನಸಾಮಾನ್ಯರು ಕ್ಷಣಿಕ ಭಾವಾವೇಶಗಳ ಸುಳಿಯಲ್ಲಿ ಸಿಲುಕದೆ, ಪ್ರಜ್ಞಾವಂತ ತೀರ್ಪುಗಾರರಾಗಿ ಮತ ಚಲಾಯಿಸಬೇಕು ಎನ್ನುವುದು ಇದರ ಆಶಯ. ನಿಯಮಿತಚುನಾವಣೆಗಳಿಂದ ಜನರಿಗೆ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಬೆಳೆದು ಸ್ವ–ಆಡಳಿತದ ಸಾಮರ್ಥ್ಯ ಬೆಳೆಯಬೇಕೆನ್ನುವುದು ಚುನಾವಣಾ ಪ್ರಜಾತಂತ್ರದ ಆದರ್ಶ.

ಆದರೆ ಚುನಾವಣಾ ಪ್ರಜಾತಂತ್ರದ ಈಗಿನ ವಸ್ತುಸ್ಥಿತಿ ಬೇರೆಯೇ ಆಗಿದೆ. ಪ್ರಬಲ ರಾಜಕೀಯ ಪಕ್ಷಗಳ ಹಿಂದೆ ಅದೃಶ್ಯ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಅವುಗಳಿಗೆ ತಮ್ಮ ಸ್ವಲಾಭದ ಸಾಮ್ರಾಜ್ಯಗಳನ್ನು ಬಲಪಡಿಸುವ, ಕಾರ್ಯಸೂಚಿಗಳನ್ನು ಸಾಧಿಸುವ ಹುನ್ನಾರಗಳಿವೆ. ಅವು ರಾಜಕೀಯ ಪಕ್ಷಗಳನ್ನು ತಮ್ಮ ಗುರಿ ಸಾಧನೆಗಾಗಿ ಬಳಸಿಕೊಳ್ಳುತ್ತವೆ. ಪಕ್ಷಗಳು ಜನಮತವನ್ನು ಒಲಿಸಿಕೊಳ್ಳುವುದು ಚುನಾವಣಾ ಪ್ರಜಾತಂತ್ರದ ವಿಧಾನ. ಇದು ಮೇಲಿನಿಂದ ಕೆಳಮುಖವಾಗಿ ಚಲಿಸುವ ಪ್ರಕ್ರಿಯೆ. ಅಗೋಚರ ಹಿತಾಸಕ್ತಿಗಳು ಇಲ್ಲಿ ಸೂತ್ರಧಾರಿಗಳಾದರೆ, ರಾಜಕೀಯ ಪಕ್ಷಗಳು ಪಾತ್ರಧಾರಿಗಳಾಗಿರುತ್ತವೆ.

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು. ಆಡಳಿತಾರೂಢರ ಅಧಿಕಾರದ ದುರುಪಯೋಗಕ್ಕೆ ಅಂಕುಶ ವಿಧಿಸುವ ಪರಮಾಧಿಕಾರ ಜನಶಕ್ತಿಗಿದೆ ಎನ್ನುವುದು ಪ್ರಶ್ನಿಸಲಾಗದ ನಿಜ. ಚುನಾವಣಾ ಪ್ರಜಾತಂತ್ರದ ತಾತ್ವಿಕತೆಯನ್ನು ನೇಪಥ್ಯಕ್ಕೆ ಸರಿಸಿ, ವಾಸ್ತವ ಮುಚ್ಚಿಟ್ಟರೆ ಆಳುವ ವರ್ಗಗಳು ಜನರನ್ನು ಅನಾಯಾಸವಾಗಿ ಮರುಳುಗೊಳಿಸಬಹುದು ಎಂಬ ತರ್ಕವೇ ರಾಜಕೀಯದಲ್ಲಿ ಮೇಲುಗೈ ಪಡೆಯುತ್ತಿರುವುದು ದುರಂತ.

ಭಾರತದ ಪ್ರಥಮ ಚುನಾವಣೆಯಲ್ಲಿ (1951-52) ಬಹುಸಂಖ್ಯೆಯಲ್ಲಿ ಅನಕ್ಷರಸ್ಥ ಮತದಾರರೇ ಭಾಗವಹಿಸಿರುತ್ತಾರೆ. ಸ್ವಾತಂತ್ರ್ಯ ಹೋರಾಟವು ಪ್ರೇರೇಪಿಸಿದ್ದ ಜಾಗೃತಿ ಅವರಲ್ಲಿ ನೆಲೆಯೂರಿತ್ತು. ಆದರೆ ಈಗಿನವು ನವಮಾಧ್ಯಮಗಳು ಪ್ರಾಯೋಜಿಸುವ ಉದ್ರೇಕಿತ, ಅತಿರಂಜಿತ ವರದಿಗಳಿಗೆ ಮಾರುಹೋಗಿ, ಭಾವತೀವ್ರತೆಗೆ ಒಳಗಾಗಬಹುದಾದ ಮತದಾರರೇ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುವ ಚುನಾವಣೆಗಳಾಗಿವೆ. ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಅಸಂಬದ್ಧ ಹೇಳಿಕೆಗಳೇ ಪ್ರಮುಖ ಸುದ್ದಿಗಳಾಗಿ ಪ್ರವಹಿಸುತ್ತಿರುವಾಗ ಮಾಹಿತಿಪೂರ್ಣ ಪ್ರಜಾಮತ ಮೂಡುವುದು ದೂರದ ವಿಚಾರ. ಮತದಾರರ ಜಾಗೃತಿ ಹೇಗೆ ಸಾಧ್ಯವೆನ್ನುವುದು ನಾವು ಹುಡುಕಬೇಕಾಗುವ ದಾರಿಯಾಗುತ್ತದೆ.

ಜಾತಿ-ಲಿಂಗ ಅಸಮತೆಗಳು ಹಾಗೂ ವಸಾಹತುಶಾಹಿ ಪರಾಧೀನದ ಹಿನ್ನೆಲೆಯಲ್ಲಿ ರೂಪುತಳೆದಿದೆ ಭಾರತೀಯ ಪ್ರಜಾತಂತ್ರ. ಭಾರತದ ಶ್ರೇಣಿಯುತ ಅಸಮತೆಗಳನ್ನು ತೊಡೆದುಹಾಕುವ ಮೂಲಕ, ಪ್ರತಿಯೊಬ್ಬನಿಗೂ ಅವಕಾಶಗಳ ಸಮಾನತೆಯನ್ನು ಖಾತರಿಪಡಿಸುವ, ‘ಒಂದು ಮತಕ್ಕೆ ಒಂದೇ ಮೌಲ್ಯ’ವೆನ್ನುವ ಧ್ಯೇಯವನ್ನು ವಿಚಾರ ಮತ್ತು ಆಚಾರದಲ್ಲಿ ರೂಢಿಸಿಕೊಂಡು ದೃಢವಾದ ಹೆಜ್ಜೆಗಳೊಂದಿಗೆ ಕ್ರಮಿಸುತ್ತಿತ್ತು. ಕರ್ನಾಟಕದ ಪ್ರಸ್ತುತ ಚುನಾವಣಾ ವಾಙ್ಮಯವನ್ನು ಅವಲೋಕಿಸಿದರೆ, ಸಾಂವಿಧಾನಿಕ ಆಶಯಗಳಾದ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯಗಳಲ್ಲಿ ಸಮತೆಯನ್ನು ಸ್ಥಾಪಿಸುವ ವಿಚಾರಗಳೇ ಸಾರ್ವಜನಿಕ ಚರ್ಚೆಗಳಿಂದ ಮಾಯವಾಗುತ್ತಿರುವುದು ಗೋಚರಿಸುತ್ತದೆ. ಚುನಾವಣೆಗಳು ಪ್ರಧಾನ ಪಠ್ಯರಹಿತ ಪ್ರಜಾತಂತ್ರದ ಅಡಿಟಿಪ್ಪಣಿಯಾಗುತ್ತಿರುವುದು ಯಾವ ದೂರದೃಷ್ಟಿಯನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟವಾಗುತ್ತಿಲ್ಲ.

ಪ್ರಚಾರದ ಮೇಲಾಟಗಳಲ್ಲಿ ಮರೆಯಾಗುತ್ತಿರುವುದೇನು ಎಂಬ ಬಗ್ಗೆ ವಿವೇಚಿಸುವ ಸಂದರ್ಭಗಳು ನಮ್ಮ ಮುಂದಿವೆ. ಕ್ಷಣಿಕ ಭಾವನೆ, ಆಮಿಷಗಳಿಗೆ ತುತ್ತಾಗಿ ಪ್ರಜೆಗಳು ತಮ್ಮ ದೀರ್ಘಕಾಲೀನ ಹಿತಾಸಕ್ತಿಗಳನ್ನು ಮರೆತು ತೂಕಡಿಸಬಾರದು ಎಂಬ ಅರಿವು ಸಾಂವಿಧಾನಿಕ ಪ್ರಜಾತಾಂತ್ರಿಕ ಆಡಳಿತಕ್ಕಿರುವ ಒಂದು ಪ್ರಮುಖ ಸಮರ್ಥನೆ. ನಮ್ಮ ಕನ್ನಡ ನೆಲದ ಸಮೃದ್ಧಿಗೆ ದೂರಗಾಮಿ ಯೋಚನೆ-ಯೋಜನೆಗಳ ರೂಪುರೇಷೆಗಳೇನು? ನಗರೀಕರಣವನ್ನು ವೇಗವಾಗಿ ಆವಾಹಿಸಿಕೊಳ್ಳುತ್ತಿರುವ ನಮ್ಮ ರಾಜ್ಯದಲ್ಲಿ ಇಂಗಾಲ ಅವಲಂಬಿತ ಆರ್ಥಿಕತೆ ಸೃಷ್ಟಿಸುವ ದುರಂತ ಚಿತ್ರಣಗಳೇನು? ಸಂಪತ್ತಿನ ವಿಕೇಂದ್ರೀಕರಣ ಯಾರಿಗೆ, ಯಾವ ಪರಿಯಲ್ಲಿ ಲಭಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ನಗರಗಳಿಗೆ ವಲಸೆ ಹೋಗುವ ಜನರ ಬದುಕಿನ ಸಮಸ್ಯೆ ನಿವಾರಿಸುವ ಬಗೆ ಹೇಗೆ?

ಸಮರ್ಪಕವಾದ ಮತ್ತು ಮುತ್ಸದ್ದಿತನದ ಪ್ರಶ್ನೆಗಳನ್ನು ಎದುರಿಸದ ಚುನಾವಣೆಗಳು ಜನರ ಬದುಕಿನ ದಿಕ್ಕು ತಪ್ಪಿಸುವುದರೊಂದಿಗೆ ಅವರ ಗೋಳನ್ನು ವಿಸ್ತರಿಸುತ್ತವೆ. ನಿರಂತರ ನಿಯತಕಾಲಿಕ ಚುನಾವಣೆಗಳನ್ನು ನಡೆಸುವುದು ಮಾತ್ರ ಸಾಧನೆಯಲ್ಲ. ಸಮತೋಲಿತ ಸಂವಾದರಹಿತ ವಾದ-ಪ್ರತಿವಾದಗಳ ಕೆಸರೆರಚಾಟಗಳಿಂದ ಮೇಳೈಸುವ ಚುನಾವಣೆಗಳು ಉನ್ಮಾದಪೀಡಿತ ಪ್ರಜಾತಂತ್ರವನ್ನು ಮುನ್ನೆಲೆಗೆ ತರಬಹುದು. ಇದು ತಂದೊಡ್ಡುವ ದೀರ್ಘಕಾಲೀನ ಊಹಿಸಿದ ಮತ್ತು ಊಹಿಸದ ಪರಿಣಾಮಗಳನ್ನು ನಾಡೇ ಅನುಭವಿಸಬೇಕಾಗುತ್ತದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಘೋಷವಾಕ್ಯ ಮರೀಚಿಕೆಯಾಗಿಯೇ ಉಳಿಯುತ್ತದೆ. ಉತ್ತಮ ಮಾರ್ಗ ಮಾತ್ರ ಉನ್ನತ ಗುರಿಯೆಡೆಗೆ ಮುನ್ನಡೆಸುತ್ತದೆ ಎಂಬ ಎಚ್ಚರ ನಮ್ಮೆಲ್ಲರ ಆಶಯ ಧ್ವನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry