ಪತಿಯ ಅಂತ್ಯಸಂಸ್ಕಾರಕ್ಕೆ ಶಶಿಕಲಾ

7
15 ದಿನಗಳ ತುರ್ತು ಪೆರೋಲ್ ಮಂಜೂರು

ಪತಿಯ ಅಂತ್ಯಸಂಸ್ಕಾರಕ್ಕೆ ಶಶಿಕಲಾ

Published:
Updated:
ಪತಿಯ ಅಂತ್ಯಸಂಸ್ಕಾರಕ್ಕೆ ಶಶಿಕಲಾ

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಜಾಬಂದಿಯಾಗಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಪತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು 15 ದಿನಗಳ ತುರ್ತು ಪೆರೋಲ್ ಮೇಲೆ ಮಂಗಳವಾರ ಚೆನ್ನೈಗೆ ತೆರಳಿದರು.

ಪ‍ತಿ ನಿಧನದ ಸುದ್ದಿ ರಾತ್ರಿಯೇ ತಿಳಿದ ಶಶಿಕಲಾ, ಬೆಳಿಗ್ಗೆ 10 ಗಂಟೆಗೆ ತಮ್ಮ ವಕೀಲರ ಮೂಲಕ ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರಿಗೆ ಪೆರೋಲ್ ಅರ್ಜಿ ಸಲ್ಲಿಸಿದರು. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅರ್ಜಿಯನ್ನು ಪುರಸ್ಕರಿಸಿದ ಅಧೀಕ್ಷಕರು, 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದರು. ಮಧ್ಯಾಹ್ನ 12 ಗಂಟೆಗೆ ಜೈಲಿನಿಂದ ಹೊರಬಂದ ಅವರು, ಸಂಬಂಧಿಕರ ಜತೆ ಕಾರಿನಲ್ಲಿ ಚೆನ್ನೈನತ್ತ ಹೊರಟರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 13 ತಿಂಗಳಿನಿಂದ ಸಜಾಬಂದಿಯಾಗಿರುವ ಅವರು, 2017ರ ಅಕ್ಟೋಬರ್‌ನಲ್ಲೂ ಐದು ದಿನಗಳ ಪೆರೋಲ್ ಮೇಲೆ ಚೆನ್ನೈಗೆ ಹೋಗಿ ಪತಿಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದರು.

‘ಶಶಿಕಲಾ ಅವರನ್ನು ವಿಮಾನದಲ್ಲಿ ಕರೆದೊಯ್ಯಲು ಅವಕಾಶ ನೀಡುವಂತೆ ಅವರ ಸಂಬಂಧಿಕರು ಮನವಿ ಮಾಡಿದ್ದರು. ಆದರೆ, ಸಜಾಬಂದಿಯ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯ. ಈ ವಿಷಯವನ್ನು ಮನವರಿಕೆ ಮಾಡಿದ ಬಳಿಕ ಅವರನ್ನು ಎಸ್‌ಯುವಿಯಲ್ಲೇ ತವರಿಗೆ ಕರೆದುಕೊಂಡು ಹೋದರು. ಶಶಿಕಲಾ ಏಪ್ರಿಲ್ 3ಕ್ಕೆ ಜೈಲಿಗೆ ಮರಳಲಿದ್ದಾರೆ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಟರಾಜನ್ ನಿಧನ

ಚೆನ್ನೈ (ಪಿಟಿಐ): ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಪತಿ ಎಂ.ನಟರಾಜನ್ (74) ಅವರು ಅನಾರೋಗ್ಯದ ಕಾರಣ ಮಂಗಳವಾರ ನಿಧನರಾಗಿದ್ದಾರೆ.

ಶ್ವಾಸಕೋಶದ ಸೋಂಕಿನ ಕಾರಣ ಅವರನ್ನು ಶನಿವಾರ ಇಲ್ಲಿನ ‘ಗ್ಲೋಬಲ್ ಹೆಲ್ತ್ ಸಿಟಿ’ ಆಸ್ಪತ್ರೆಗೆ ಸೇರಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry