ರೈಲ್ವೆಯಲ್ಲಿ ಕಾಯಂ ಉದ್ಯೋಗ: ನೇಮಕಾತಿಯಲ್ಲಿ ಪಾಲ್ಗೊಳ್ಳಲು ಸೂಚನೆ

7
ಪ್ರತಿಭಟನೆ ಹಿಂದಕ್ಕೆ ಪಡೆದ ವಿದ್ಯಾರ್ಥಿಗಳು

ರೈಲ್ವೆಯಲ್ಲಿ ಕಾಯಂ ಉದ್ಯೋಗ: ನೇಮಕಾತಿಯಲ್ಲಿ ಪಾಲ್ಗೊಳ್ಳಲು ಸೂಚನೆ

Published:
Updated:
ರೈಲ್ವೆಯಲ್ಲಿ ಕಾಯಂ ಉದ್ಯೋಗ: ನೇಮಕಾತಿಯಲ್ಲಿ ಪಾಲ್ಗೊಳ್ಳಲು ಸೂಚನೆ

ನವದೆಹಲಿ/ಮುಂಬೈ: ರೈಲ್ವೆ ಇಲಾಖೆಯಲ್ಲಿ ಕಾಯಂ ಉದ್ಯೋಗಕ್ಕಾಗಿ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ಹಿಂಪಡೆದಿದ್ದಾರೆ ಎಂದು ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

‘ಇದೇ 31ರಂದು ಕೊನೆಗೊಳ್ಳಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ’ ಎಂದೂ ರೈಲ್ವೆ ಸಚಿವ ಗೋಯಲ್ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

ರೈಲುಗಳನ್ನು ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳ ಕರೆಗೆ ಸ್ಪಂದಿಸಿರುವ ಸಚಿವರು, ‘ದೇಶ ಸೇವೆಗೆ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಲಾಗುವುದು’ ಎಂದು ಹೇಳಿದ್ದಾರೆ.

ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ 90,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ  ರೈಲ್ವೆ  ಇಲಾಖೆ ಚಾಲನೆ ನೀಡಿದೆ.

ರೈಲ್ವೆ ತಡೆ–ಪ್ರಯಾಣಿಕರ ಪರದಾಟ: ಮಾತುಂಗಾ ಮತ್ತು ದಾದರ್ ನಡುವಣ ಉಪನಗರ ರೈಲುಗಳೂ ಸೇರಿದಂತೆ ಮಂಗಳವಾರ ಹಲವು ಮಾರ್ಗಗಳ ರೈಲು ಸಂಚಾರವನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದರು.‌

ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ‍ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಆದರೆ, ‘ನಾಲ್ಕು ವರ್ಷಗಳಿಂದ ರೈಲ್ವೆ ನೇಮಕಾತಿ ನಡೆದಿಲ್ಲ. ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮರುಕಳಿಸಲು ಬಿಡುವುದಿಲ್ಲ. ರೈಲ್ವೆ ಸಚಿವರು ಬಂದು ನಮ್ಮೊಂದಿಗೆ ಚರ್ಚೆ ನಡೆಸುವವರೆಗೂ ನಾವು ಈ ಸ್ಥಳ ಬಿಟ್ಟು ಕದಲುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡಿ, ಈಗ ಕಾಯಂ ಉದ್ಯೋಗದ ನಿರೀಕ್ಷೆಯಲ್ಲಿರುವ ಬೇರೆ ಬೇರೆ ರಾಜ್ಯಗಳ 400–500 ವಿದ್ಯಾರ್ಥಿಗಳು ರೈಲ್ವೆ ತಡೆ ನಡೆಸಿದರು.

ಹಳಿಗಳಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಿದ ನಂತರ ರೈಲು ಸಂಚಾರವನ್ನು ಮತ್ತೆ ಆರಂಭಿಸಲಾಯಿತು. ಮಾತುಂಗಾದಲ್ಲಿ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸ್ ಬಲ ಬಳಸಲಾಯಿತು.

**

ಸಿಬ್ಬಂದಿಗೆ ಗಾಯ

ಮುಂಬೈ: ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿದ್ದರಿಂದ ರೈಲ್ವೆ ಪೊಲೀಸ್ ಹಾಗೂ ರೈಲು ಭದ್ರತಾ ಪಡೆಯ 11ಕ್ಕೂ ಅಧಿಕ ಸಿಬ್ಬಂದಿ ಗಾಯಗೊಂಡಿದ್ದಾರೆ.

‘ಗಾಯಗೊಂಡವರಲ್ಲಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳೂ ಸೇರಿದ್ದಾರೆ. ಘಟನೆಗೆ ಸಂಬಂಧಿಸಿ 800ರಿಂದ 1000 ಮಂದಿ ವಿರುದ್ಧ ದಾದರ್‌ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಬಂದಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry