ಅಮ್ಮನಘಟ್ಟ ಸಂರಕ್ಷಣಾ ಆಂದೋಲನ ನಾಳೆ ಆರಂಭ

7

ಅಮ್ಮನಘಟ್ಟ ಸಂರಕ್ಷಣಾ ಆಂದೋಲನ ನಾಳೆ ಆರಂಭ

Published:
Updated:
ಅಮ್ಮನಘಟ್ಟ ಸಂರಕ್ಷಣಾ ಆಂದೋಲನ ನಾಳೆ ಆರಂಭ

ಶಿವಮೊಗ್ಗ: ಪರಿಸರವಾದಿ ಅನಂತ ಹೆಗಡೆ ಅಶಿಸರ ನೇತೃತ್ವದ ವೃಕ್ಷಲಕ್ಷ ಆಂದೋಲನ ಇದೇ 22ರಂದು ಹೊಸನಗರ ತಾಲ್ಲೂಕು ಅಮ್ಮನಘಟ್ಟ ಪ್ರದೇಶ ಸಂರಕ್ಷಣಾ ಅಭಿಯಾನ ಆರಂಭಿಸಲಿದೆ.

ಪಶ್ಚಿಮಘಟ್ಟದ ಜೀವ ವೈವಿಧ್ಯತೆಯ ಈ ತಾಣದಲ್ಲಿ ಶರಾವತಿ ನದಿಯ 5 ಉಪ ನದಿಗಳು ಹುಟ್ಟುತ್ತವೆ. ಜೇನು ಕಲ್ಲಮ್ಮನ ಬೆಟ್ಟದಿಂದ ಬಟ್ಟೆ ಮಲ್ಲಪ್ಪದವರೆಗೆ 18 ಕಿಲೋಮೀಟರ್ ಪರ್ವತಗಳ ಸಾಲು ಹಬ್ಬಿವೆ. ಈ ಹಸಿರುಬೆಟ್ಟದ ಉಳಿವಿಗೆ 25 ವರ್ಷಗಳಿಂದ ವೃಕ್ಷಲಕ್ಷ ಆಂದೋಲನ ಚಳವಳಿ ನಡೆಸಿತ್ತು. ಆ ಚಳವಳಿಯ ಫಲವಾಗಿ ಹಲವು ರಚನಾತ್ಮಕ ಕೆಲಸಗಳು ಆಗಿವೆ.

ಅಮ್ಮನಘಟ್ಟದ ವ್ಯಾಪ್ತಿಯ 12 ಸ್ಥಳಗಳಲ್ಲಿ 1992ರಿಂದ ಅರಂಭವಾಗಿದ್ದ ಕಲ್ಲು ಗಣಿಕಾರಿಕೆಯು ಬೆಟ್ಟ, ಜಲಮೂಲಗಳಿಗೆ, ಪ್ರಾಣಿ–ಸಸ್ಯ ಸಂಕುಲಕ್ಕೆ ಅಪಾರ ಹಾನಿ ಮಾಡಿತ್ತು. ನಿರಂತರ ಹೋರಾಟದ ಫಲವಾಗಿ ಬ್ರಹ್ಮೇಶ್ವರ, ಜೇನುಕಲ್ಲು ಬೆಟ್ಟ, ಮಾರುತಿಪುರ, ಮಾವಿನಹೊಳೆ ಸುತ್ತಲಿನ ಸ್ಥಳಗಳಲ್ಲಿನ ಗಣಿಗಾರಿಕೆಗೆ ಸ್ಥಗಿತಗೊಂಡಿತ್ತು. ಭದ್ರಾವತಿ ಎಂಪಿಎಂ ನೆಡುತೋಪು, ಹೊರ ರಾಜ್ಯದವರು ಇಲ್ಲಿಗೆ ಬಂದು ರಬ್ಬರ್, ಶುಂಠಿ ಬೆಳೆಸುತ್ತಾ ಅರಣ್ಯ ನಾಶ ಮಾಡುವುದರ ವಿರುದ್ಧ ಧ್ವನಿ ಎತ್ತಲಾಗಿತ್ತು.

ಹೋರಾಟದ ಫಲ: 25 ವರ್ಷಗಳ ನಿರಂತರ ಶ್ರಮದ ಫಲವಾಗಿ ದೇವರ ಕಾಡು ಯೋಜನೆ, ನದಿಮೂಲ ರಕ್ಷಣೆ ಮಾಡಲಾಗಿದೆ. ಜಲಸಂವರ್ಧನಾ ಕಾರ್ಯ, ಪವಿತ್ರ ವನ ಯೋಜನೆ ಜಾರಿಯಾಗಿವೆ. ಗ್ರಾಮ ಅರಣ್ಯ ಸಮಿತಿ ರಚನೆ ಮಾಡಲಾಗಿದೆ. ಅಮ್ಮನ ಘಟ್ಟವನ್ನು ನೈಸರ್ಗಿಕ ಪಾರಂಪರಿಕ ತಾಣ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಮತ್ತೆ ಅಭಿಯಾನ ಆರಂಭ: ಎರಡು-ಮೂರು ವರ್ಷಗಳಿಂದ ಮತ್ತೆ ಅರಣ್ಯ ನಾಶದ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ, ವೃಕ್ಷಲಕ್ಷ ಆಂದೋಲನ ಸಂಘಟನೆಯು ಅಮ್ಮನಘಟ್ಟ ಉಳಿಸಿ ಅಭಿಯಾನವನ್ನು ಮತ್ತೆ ಆರಂಭಿಸಿದೆ.

ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ರಾಜ್ಯ ಔಷಧಿ ಮೂಲಿಕಾ ಪ್ರಾಧಿಕಾರದ ಸದಸ್ಯ ಡಾ.ಕೇಶವ ಎಚ್.ಕೊರ್ಸೆ, ಗ್ರಾಮ ಭಾರತಿಯ ಸಂಚಾಲಕ ರವಿ ಹನಿಯ, ಬಿ.ಎಚ್.ರಾಘವೇಂದ್ರ ಅವರು ಅಭಿಯಾನದ ನೇತೃತ್ವ ವಹಿಸಲಿದ್ದಾರೆ.

‘ಇಲ್ಲಿನ ಹೊಳೆ-ಹಳ್ಳಗಳಿಗೆ ಜೀವ ತುಂಬಿಸುವುದು, ಬೆಟ್ಟಗಳ ಸಾಲು ಪುನಃಶ್ಚೇತನಗೊಳಿಸುವುದು, ಅಮ್ಮನಘಟ್ಟ ತಪ್ಪಲಿನ ಹಳ್ಳಿಗಳ ರೈತರ ಸಹಭಾಗಿತ್ವದಲ್ಲಿ ಜೇನು, ಅರಣ್ಯ ಉಪ ಉತ್ಪನ್ನಗಳ ಸುಸ್ಥಿರ ಸಂಗ್ರಹ, ಪರಿಸರ ಪೂರಕ ಪ್ರವಾಸೋದ್ಯಮ ಜಾರಿ ಕುರಿತು ಯೋಜನೆ ರೂಪಿಸಲಾಗಿದೆ’ ಎನ್ನುತ್ತಾರೆ ಆಂದೋಲನದ ಸಂಚಾಲಕ ಕೆ.ವೆಂಕಟೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry