ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಹೆಲ್ಮೆಟ್ ವಿರುದ್ಧ ಸಚಿನ್‌ ಆಕ್ರೋಶ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಡಿಮೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ’ ಎಂದು ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್, ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದಾರೆ.

‘ಹಲವು ಕಂಪನಿಗಳು ಹೆಲ್ಮೆಟ್‌ಗಳನ್ನು ತಯಾರಿಸಲು ಕಡಿಮೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿವೆ ಮತ್ತು ನಿಯಮಬಾಹಿರವಾಗಿ ಐಎಸ್‌ಐ ಚಿಹ್ನೆ ಬಳಸುತ್ತಿವೆ. ಸುರಕ್ಷಾ ಸಲಕರಣೆಗಳ ಗುಣಮಟ್ಟ ಅತ್ಯುತ್ತಮವಾಗಿರುವುದು ಎಷ್ಟು ಮುಖ್ಯ ಎಂಬುದು ಒಬ್ಬ ಕ್ರೀಡಾಪಟುವಾಗಿ ನನಗೆ ತಿಳಿದಿದೆ. ಹೀಗಾಗಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

‘2016ರಲ್ಲಿ ದೇಶದಲ್ಲಿ ನಡೆದ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪ್ರಮಾಣ ಹೆಚ್ಚು. ಅಪಘಾತಕ್ಕೆ ಈಡಾದ ವಾಹನಗಳಲ್ಲಿ ದ್ವಿಚಕ್ರವಾಹನಗಳ ಪ್ರಮಾಣ ಶೇ 30ರಷ್ಟು ಎಂಬುದು ಅತ್ಯಂತ ಕಳವಳಕಾರಿ ಸಂಗತಿ. ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿದ್ದರೆ, ಅಪಘಾತಗಳ ಸಂದರ್ಭದಲ್ಲಿ ಸಾವಿನ ಪ್ರಮಾಣ ಶೇ 42ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಆದರೆ ಭಾರತದಲ್ಲಿ ಹೆಲ್ಮೆಟ್ ಖರೀದಿಸುವವರಲ್ಲಿ ಶೇ 70ರಷ್ಟು ಮಂದಿ ಕಡಿಮೆ ಗುಣಮಟ್ಟದವನ್ನೇ ಖರೀದಿಸಿರುತ್ತಾರೆ. ಇದನ್ನು ತಪ್ಪಿಸಲು, ನಿಯಮಬಾಹಿರವಾಗಿ ಐಎಸ್‌ಐ ಚಿಹ್ನೆ ಬಳಸುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಇದಿಷ್ಟೇ ಸಾಲದು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ದ್ವಿಚಕ್ರ ವಾಹನಗಳ ಸವಾರರು ಸುರಕ್ಷಾ ಸಾಮಗ್ರಿಗಳನ್ನು ಬಳಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಸಚಿನ್ ಅವರು ಹಲವು ದಿನಗಳಿಂದ ‘ಸೇಫ್ ಟೂ–ವ್ಹೀಲರ್ ರೈಡಿಂಗ್’ ಅಭಿಯಾನ ನಡೆಸುತ್ತಿದ್ದಾರೆ.

**

ಹೆಲ್ಮೆಟ್‌ಗಳ ಬೆಲೆ ಕಡಿಮೆಯಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಆಗಲಾದರೂ ಜನ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ.

–ಸಚಿನ್ ತೆಂಡೂಲ್ಕರ್, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT