ಅವಶೇಷಗಳ ಪತ್ತೆಗೆ ರೆಡಾರ್ ಬಳಕೆ

7
ಉಗ್ರರಿಂದ ಹತರಾದ ಭಾರತೀಯರ ಶವ ಪತ್ತೆ ಮಾಡಿದ ಬಗೆ ವಿವರಿಸಿದ ಸುಷ್ಮಾ ಸ್ವರಾಜ್

ಅವಶೇಷಗಳ ಪತ್ತೆಗೆ ರೆಡಾರ್ ಬಳಕೆ

Published:
Updated:
ಅವಶೇಷಗಳ ಪತ್ತೆಗೆ ರೆಡಾರ್ ಬಳಕೆ

ನವದೆಹಲಿ: ಇರಾಕ್‌ನಲ್ಲಿ ಹತ್ಯೆಗೀಡಾಗಿದ್ದ ಭಾರತೀಯರ ಅವಶೇಷಗಳನ್ನು ರೆಡಾರ್ ಬಳಸಿ ಪತ್ತೆ ಮಾಡಲಾಗಿತ್ತು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದರು.

ಐಎಸ್ ಉಗ್ರರು ಕೊಂದಿದ್ದ 39 ಭಾರತೀಯರ ಅವಶೇಷಗಳನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ನೇತೃತ್ವದ ತಂಡವು ಪತ್ತೆ ಮಾಡಿದ ಬಗೆಯನ್ನು ರಾಜ್ಯಸಭೆಯಲ್ಲಿ ವಿವರಿಸುವಾಗ ಅವರು ಈ ಮಾಹಿತಿ ನೀಡಿದರು.

‘39 ಭಾರತೀಯರು ಅಪಹೃತರಾಗಿದ್ದಾರೆ ಎಂಬ ಸುದ್ದಿ ಲಭ್ಯವಾಗುತ್ತಿದ್ದಂತೆ ವಿ.ಕೆ.ಸಿಂಗ್ ಮತ್ತು ಕೆಲವು ಅಧಿಕಾರಿಗಳ ತಂಡ ಮೋಸುಲ್‌ಗೆ ತೆರಳಿತ್ತು. ಐಎಸ್‌ ಉಗ್ರರು ಭಾರತೀಯರನ್ನು ಬಾದೋಷ್ ಪಟ್ಟಣಕ್ಕೆ ಕರೆದೊಯ್ದ ಬಗ್ಗೆ ಸ್ಥಳೀಯರು ಆಗ ಸುಳಿವು ನೀಡಿದ್ದರು. ಅದನ್ನು ಆಧರಿಸಿ ಇರಾಕ್‌ನ ಕೆಲವು ಅಧಿಕಾರಿಗಳ ಜತೆ ನಮ್ಮ ತಂಡ ಬಾದೋಷ್‌ಗೆ ತೆರಳಿತ್ತು.

‘ಬಾದೋಷ್‌ ಸಮೀಪದ ದಿಬ್ಬವೊಂದರಲ್ಲಿ ಹಲವರ ಶವಗಳನ್ನು ಹೂಳಲಾಗಿದೆ ಎಂದು ಹಳ್ಳಿಯೊಂದರ ಜನರು ಮಾಹಿತಿ ನೀಡಿದ್ದರು. ಆ ದಿಬ್ಬದ ಬಳಿ ಶೋಧ ಕಾರ್ಯ ನಡೆಸಲಾಗಿತ್ತು. ನೆಲದಾಳವನ್ನು ಶೋಧಿಸುವ ರೆಡಾರ್‌ ಬಳಸಿದ್ದರಿಂದ, ಅಲ್ಲಿ 39 ಜನರ ಅವಶೇಷಗಳಿರುವುದು ದೃಢಪಟ್ಟಿತ್ತು. ಆನಂತರವಷ್ಟೇ ದಿಬ್ಬವನ್ನು ಅಗೆದು ಅವಶೇಷಗಳನ್ನು ತೆಗೆಯಲಾಯಿತು.

‘ಆ ಅವಶೇಷಗಳಲ್ಲಿ ಉದ್ದನೆಯ ಕೂದಲುಗಳು ಮತ್ತು ಸಿಖ್ಖರ ಕಡಗಗಳು ಇದ್ದವು. ಜತೆಗೆ ಸಾಮಾನ್ಯವಾಗಿ ಇರಾಕಿ ಜನರು ಬಳಸದಂತಹ ಷೂಗಳು ಇದ್ದವು. ಅಲ್ಲದೆ ಹಲವು ಗುರುತಿನ ಚೀಟಿಗಳೂ ಪತ್ತೆಯಾಗಿದ್ದವು.

‘ಆ ಅವಶೇಷಗಳೆಲ್ಲವು ಭಾರತೀಯರದ್ದೇ ಎಂಬುದನ್ನು ದೃಢಪಡಿಸಿಕೊಳ್ಳಲು ಅವುಗಳ ಡಿಎನ್‌ಎ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಅಪಹೃತರ ಪಟ್ಟಿಯಲ್ಲಿದ್ದವರ ಕುಟುಂಬದವರನ್ನು ಕರೆಸಿ, ಅವರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಯಿತು. ಅವಶೇಷಗಳನ್ನು ಬಾಗ್ದಾದ್‌ಗೆ ತಂದು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಅವು ನಮ್ಮವರದ್ದೇ ಎಂಬುದು ದೃಢವಾಯಿತು. 38 ಜನರ ಡಿಎನ್‌ಎ ಮಾದರಿ ಶೇ 100ರಷ್ಟು ಹೋಲಿಕೆಯಾಯಿತು. ಆದರೆ ಒಬ್ಬರದ್ದು ಶೇ 70ರಷ್ಟು ಹೋಲಿಕೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.

**

‘ನಂಬಲು ಸಾಧ್ಯವಾಗುತ್ತಿಲ್ಲ’

(ಚಂಡಿಗಡ ವರದಿ): ‘ನನ್ನ ಸಹೋದರ ಮೃತಪಟ್ಟಿದ್ದಾನೆ ಎಂದು ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ನಾಪತ್ತೆಯಾದ ಎಲ್ಲ 39 ಮಂದಿ ಜೀವಂತವಾಗಿದ್ದಾರೆ ಎಂದು ಸುಷ್ಮಾ ಸ್ವರಾಜ್‌ ನಮ್ಮನ್ನು ನಂಬಿಸಿದ್ದರು’ ಎಂದು ಮೃತರಲ್ಲಿ ಒಬ್ಬರ ಸಹೋದರಿ ಗುರ್ಪಿಂದರ್‌ ಕೌರ್‌ ಹೇಳಿದ್ದಾರೆ.

ನಾಪತ್ತೆಯಾದ ಎಲ್ಲರೂ ಹತ್ಯೆಯಾಗಿದ್ದಾರೆ ಎಂಬುದನ್ನು ಸುದ್ದಿ ವಾಹಿನಿ ಮೂಲಕ ಕೌರ್ ತಿಳಿದುಕೊಂಡಿದ್ದಾರೆ. ಆದರೆ, ವಿದೇಶಾಂಗ ಸಚಿವಾಲಯ ನೇರವಾಗಿ ತಿಳಿಸುವ ವರೆಗೆ ಅದನ್ನು ನಂಬುವುದಿಲ್ಲ ಎಂದು ಕೌರ್‌ ಹೇಳಿದ್ದಾರೆ.

‘ನನ್ನ ಸಹೋದರ ಜೀವಂತವಾಗಿದ್ದಾನೆ. ಆತನನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ನಮಗೆ ತಿಳಿಸಿತ್ತು. ಈಗ ಆತ ಸತ್ತಿರುವುದಾಗಿ ಹೇಳುತ್ತಿದೆ. ಯಾವುದನ್ನು ನಂಬಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಕೌರ್‌ ಹೇಳಿದ್ದಾರೆ.

**

‘ಅವರನ್ನು ಕೊಂದಿದ್ದಾರೆ ಎಂದು ನಾನು ಹೇಳುತ್ತಲೇ ಇದ್ದೆ’

ಚಂಡಿಗಡ: ‘ಐಎಸ್ ಉಗ್ರರು ನನ್ನ ಜತೆಗಿದ್ದ 39 ಭಾರತೀಯರನ್ನು ಕೊಂದುಹಾಕಿದರು ಎಂದು ನಾನು ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ’ ಎಂದು ಉಗ್ರರು ಅಪಹರಿಸಿದ್ದ ಗುಂಪಿನಿಂದ ತಪ್ಪಿಸಿಕೊಂಡು ಬಂದಿದ್ದ ಹರ್‌ಜೀತ್‌ ಮಸೀಹ್ ಮಂಗಳವಾರ ಹೇಳಿದ್ದಾರೆ.

‘2014ರಲ್ಲಿ ಇರಾಕ್‌ನ ಕಾರ್ಖಾನೆಯೊಂದರಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ಆಗ ಐಎಸ್‌ ಉಗ್ರರು ನಮ್ಮನ್ನು ಅಪಹರಿಸಿ, ಬೇರೆಡೆಗೆ ಕರೆದೊಯ್ದರು. ಅಲ್ಲಿ ಕೆಲವು ದಿನ ನಮ್ಮನ್ನು ಕೂಡಿ ಹಾಕಿದ್ದರು. ಮಂಡಿಯೂರಿ ಕೂರುವಂತೆ ಒಂದು ದಿನ ಉಗ್ರರು ನಮಗೆ ಸೂಚಿಸಿದರು. ಹಾಗೆ ಕೂರುತ್ತಿದ್ದಂತೆ, ನಮ್ಮ ಮೇಲೆ ಗುಂಡು ಹಾರಿಸಿದರು. ಆಗ ಒಬ್ಬೊಬ್ಬರೇ ಸತ್ತು ಬೀಳಲಾರಂಭಿಸಿದರು. ನನ್ನ ಕಾಲಿಗೆ ಒಂದು ಗುಂಡು ಬಿತ್ತು, ನಾನು ಸತ್ತವನಂತೆ ನಟಿಸಿದೆ. ಉಗ್ರರು ಅಲ್ಲಿಂದ ತೆರಳಿದ ಮೇಲೆ ನಾನು ತಪ್ಪಿಸಿಕೊಂಡೆ’ ಎಂದು ಅವರು ವಿವರಿಸಿದ್ದಾರೆ.

ಜೈಲುಪಾಲಾಗಿದ್ದ ಮಸೀಹ್‌: ಐಎಸ್‌ ಉಗ್ರರ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದ ಮಸೀಹ್‌ ವಿರುದ್ಧ ಅಪಹರಣಕ್ಕೆ ಒಳಗಾಗಿದ್ದ 39 ಮಂದಿಯ  ಕುಟುಂಬದವರು ದೂರು ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ನಿರ್ದೇಶನಗಳನ್ನು ನೀಡಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಸುಮಾರು ಆರು ತಿಂಗಳು ಅವರು ಜೈಲಿನಲ್ಲಿದ್ದರು. ಅಕ್ರಮ ವಲಸೆ ಮತ್ತು ವಂಚನೆ ಆರೋಪ ಮಸೀಹ್‌ ಮೇಲಿದೆ.

(ಹರ್‌ಜೀತ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry