ಕಾಲ್‌ಸೆಂಟರ್‌ ಉದ್ಯೋಗಿಗಳ ರಕ್ಷಣೆಗೆ ಮಸೂದೆ ಮಂಡನೆ

7
ಡೆಮಾಕ್ರಟಿಕ್ ಸದಸ್ಯ ಶೆರ್ರಾಡ್‌ ಬ್ರೌನ್‌ ಮಂಡನೆ

ಕಾಲ್‌ಸೆಂಟರ್‌ ಉದ್ಯೋಗಿಗಳ ರಕ್ಷಣೆಗೆ ಮಸೂದೆ ಮಂಡನೆ

Published:
Updated:

ವಾಷಿಂಗ್ಟನ್‌: ಕಾಲ್‌ಸೆಂಟರ್‌ಗಳಲ್ಲಿನ ಉದ್ಯೋಗ ರಕ್ಷಣೆ ಕುರಿತ ಮಸೂದೆಯನ್ನು ಡೆಮಾಕ್ರಟಿಕ್‌ ಪಕ್ಷದ ಸೆನೆಟ್‌ ಸದಸ್ಯ ಶೆರ್ರಾಡ್‌ ಬ್ರೌನ್‌ ಮಂಡಿಸಿದ್ದಾರೆ.

ಭಾರತದಂತಹ ದೇಶಗಳಲ್ಲಿನ ಕಾಲ್‌ಸೆಂಟರ್‌ ಉದ್ಯೋಗಿಗಳು ತಾವಿರುವ ಸ್ಥಳವನ್ನು ಬಹಿರಂಗಪಡಿಸಬೇಕು ಮತ್ತು ಅಮೆರಿಕದಲ್ಲಿರುವ ಸೇವಾ ಏಜೆಂಟರಿಗೆ ದೂರವಾಣಿ ಕರೆಯನ್ನು ವರ್ಗಾಯಿಸುವಂತೆ ಕೋರುವ ಹಕ್ಕನ್ನು ಗ್ರಾಹಕರಿಗೆ ನೀಡಬೇಕು ಎನ್ನುವ ವಿಷಯಗಳು ಮಸೂದೆಯಲ್ಲಿದೆ.

‘ಕಾಲ್‌ಸೆಂಟರ್‌ಗಳಲ್ಲಿನ ಉದ್ಯೋಗಾವಕಾಶಗಳನ್ನು ಹೊರದೇಶದವರಿಗೆ ನೀಡಲಾಗುತ್ತಿದೆ. ಇದರಿಂದ ಅಮೆರಿಕದಲ್ಲಿನ ಹಲವು ಕಂಪನಿಗಳು ತಮ್ಮ ಕಾಲ್‌ಸೆಂಟರ್‌ಗಳನ್ನು ಮುಚ್ಚಿ ಭಾರತ ಅಥವಾ ಮೆಕ್ಸಿಕೊಗೆ ಸ್ಥಳಾಂತರಿಸಲಿವೆ’ ಎಂದು ಬ್ರೌನ್‌ ತಿಳಿಸಿದ್ದಾರೆ.

‘ಗ್ರಾಹಕರ ಸೇವಾ ಸಿಬ್ಬಂದಿ ಇಲ್ಲದೆಯೇ ಕಂಪನಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ, ಬೇರೆ ದೇಶಗಳಿಗೆ ಹೊರಗುತ್ತಿಗೆ ನೀಡುತ್ತಿರುವುದರಿಂದ ಸ್ಥಳೀಯ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 13 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವವರು ಸಹ ಉದ್ಯೋಗ ತ್ಯಜಿಸುವ ಸಂದರ್ಭ ಬರುತ್ತಿದೆ. ಇಷ್ಟು ವರ್ಷಗಳ ಕಾಲ ಅವರ ಕೊಡುಗೆಯನ್ನು ಏಕೆ ಪರಿಗಣಿಸುವುದಿಲ್ಲ. ಅವರ ಬದುಕು ಅತಂತ್ರವಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಕಮ್ಯೂನಿಕೇಷನ್ಸ್‌ ವರ್ಕರ್ಸ್‌ ಆಫ್‌ ಅಮೆರಿಕ’ ನಡೆಸಿರುವ ಅಧ್ಯಯನದ ಪ್ರಕಾರ, ಅಮೆರಿಕದ ಕಂಪನಿಗಳು ಕಾಲ್‌ ಸೆಂಟರ್‌ಗಳಲ್ಲಿನ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಫಿಲಿಪ್ಪೀನ್ಸ್‌ಗೆ ಅತಿ ಹೆಚ್ಚು ನೀಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್‌, ಸೌದಿ ಅರೇಬಿಯಾ, ಚೀನಾ ಮತ್ತು ಮೆಕ್ಸಿಕೊದಲ್ಲೂ ಕಾಲ್‌ ಸೆಂಟರ್‌ಗಳನ್ನು ಅಮೆರಿಕದ ಕಂಪನಿಗಳು ತೆರೆದಿವೆ ಎಂದು ಅದು ತಿಳಿಸಿದೆ.

ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ಭಾರತದಲ್ಲಿನ ಕಾಲ್‌ಸೆಂಟರ್‌ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry