ಏಕದಿನ ಪಂದ್ಯ: ಕೇರಳದಲ್ಲಿ ಟ್ವೀಟ್ ಆಂದೋಲನ

7

ಏಕದಿನ ಪಂದ್ಯ: ಕೇರಳದಲ್ಲಿ ಟ್ವೀಟ್ ಆಂದೋಲನ

Published:
Updated:
ಏಕದಿನ ಪಂದ್ಯ: ಕೇರಳದಲ್ಲಿ ಟ್ವೀಟ್ ಆಂದೋಲನ

ತಿರುವನಂತಪುರ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯಕ್ಕೆ ವಿರೋಧಿಸಿ ಕೇರಳದಲ್ಲಿ ರಾಜಕಾರಣಿಗಳು ಮತ್ತು ಕ್ರೀಡಾಪಟುಗಳು ಟ್ವೀಟ್ ಆಂದೋಲನ ನಡೆಸುತ್ತಿದ್ದಾರೆ.

ಈ ಪಂದ್ಯವನ್ನು ತಿರುವನಂತಪುರದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊಚ್ಚಿಗೆ ಸ್ಥಳಾಂತರಿಸಲು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ನಿರ್ಧರಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸದ ಶಶಿ ತರೂರ್‌ ‘ಇದು ಸಂಶಯಾಸ್ಪದ ನಡೆ’ ಎಂದಿದ್ದಾರೆ.

‘17 ವರ್ಷದೊಳಗಿವನವರ ಫುಟ್‌ಬಾಲ್ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಿದ ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡಿಸಬೇಕಾದರೆ ಹೊಸದಾಗಿ ಪಿಚ್ ಸಿದ್ಧಪಡಿಸಬೇಕು. ಹೀಗಾಗಿ ಪಂದ್ಯವನ್ನು ತಿರುವನಂತಪುರದಲ್ಲಿ ನಡೆಸುವುದೇ ಸೂಕ್ತ. ಈ ಕುರಿತು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಗೆ ಪತ್ರ ಬರೆದಿದ್ದೇನೆ. ಅವರಿಂದ ಪೂರಕ ಪ್ರತಿಕ್ರಿಯೆ ಲಭಿಸಿದೆ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಸಂಸದರ ಅಭಿಪ್ರಾಯಕ್ಕೆ ಪೂರಕವಾಗಿ ಕೇರಳ ಬ್ಲಾಸ್ಟರ್ಸ್ ತಂಡದ ಹಿರಿಯ ಫುಟ್‌ಬಾಲ್ ಆಟಗಾರರು ಕೂಡ ಟ್ವೀಟ್ ಮಾಡಿದ್ದಾರೆ.

‘ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಚಟುವಟಿಕೆ ನಡೆಯುತ್ತದೆ. ಆದರೆ ಕೇರಳದಲ್ಲಿ ಫುಟ್‌ಬಾಲ್ ಪಂದ್ಯಗಳು ಹೆಚ್ಚಾಗಿ ನಡೆಯುತ್ತವೆ. ಆದ್ದರಿಂದ ಫುಟ್‌ಬಾಲ್ ಅಂಗಣದಲ್ಲಿ ಕ್ರಿಕೆಟ್‌ ನಡೆಸಲು ಹಟ ಹಿಡಿಯುವುದು ಸರಿಯಲ್ಲ’ ಎಂದು ಇಯಾನ್ ಹ್ಯೂಮ್ ಅಭಿಪ್ರಾಯಪಟ್ಟಿದ್ದಾರೆ. ಬ್ಲಾಸ್ಟರ್ಸ್‌ನ ಮತ್ತೊಬ್ಬ ಆಟಗಾರ ಸಿ.ಕೆ.ವಿನೀತ್ ‘ಜವಾಹರಲಾಲ್ ನೆಹರು ಕ್ರೀಡಾಂಗಣ ಫುಟ್‌ಬಾಲ್‌ಗೆ ಸೂಕ್ತವಾಗಿದೆ ಎಂದು ಫಿಫಾ ಪ್ರಮಾಣ ಪತ್ರ ನೀಡಿದೆ. ಹೀಗಿರುವಾಗಿ ಇಲ್ಲಿ ಕ್ರಿಕೆಟ್ ಆಡಿಸಲು ಹೊರಟಿರುವುದರ ಹಿಂದಿನ ‌ಗುಟ್ಟು ಏನು’ ಎಂದು ಪ್ರಶ್ನಿಸಿದ್ದಾರೆ. ಐ.ಎಂ.ವಿಜಯನ್ ಮತ್ತು ಸಿ.ವಿ.ಪಾಪಚ್ಚನ್‌ ಕೂಡ ವಿನೀತ್‌ಗೆ ಬೆಂಬಲ ನೀಡಿದ್ದಾರೆ.

**

ಜಾತಿ ‘ಇಲ್ಲ’ ಎಂದ ವಿನೀತ್‌

ಸಿ.ಕೆ.ವಿನೀತ್ ಇತ್ತೀಚೆಗೆ ತಂದೆಯಾಗಿದ್ದು ಜನನ ಪ್ರಮಾಣಪತ್ರದಲ್ಲಿ ಜಾತಿ ಜಾಗದಲ್ಲಿ ‘ಇಲ್ಲ’ ಎಂದು ಬರೆದು ಗಮನ ಸೆಳೆದಿದ್ದಾರೆ. ಸರ್ಕಾರ ನಿಗದಿಪಡಿಸಿದ ನಮೂನೆಯಲ್ಲಿ ಜನನ ಪ್ರಮಾಣ ಪತ್ರಕ್ಕೆ ಬೇಕಾದ ಮಾಹಿತಿ ತುಂಬಿರುವ ವಿನೀತ್, ಕುಟುಂಬದ ಜಾತಿ ಎಂಬ ಜಾಗದಲ್ಲಿ ಇಲ್ಲ ಎಂದು ಬರೆದಿರುವುದಾಗಿ ಪತ್ರಕರ್ತ ಪ್ರಮೋದ್ ರಾಮನ್‌ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry