ದೂರುದಾರರಿಂದಲೇ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಯ್ಕೆ

7

ದೂರುದಾರರಿಂದಲೇ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಯ್ಕೆ

Published:
Updated:

ಬೆಂಗಳೂರು: ಇಷ್ಟುದಿನ ರಾಜ್ಯದ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುತ್ತಿದ್ದ ಕ್ರಿಮಿನಲ್‌ ಪ್ರಕರಣಗಳಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಮಾತ್ರವೇ ದೂರುದಾರರ ಪರ ವಾದ ಮಂಡಿಸಬೇಕಿತ್ತು. ಆದರೆ, ಈಗ ತಮ್ಮ ಇಚ್ಛೆಯ ವಕೀಲರನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ನೇಮಿಸಿಕೊಳ್ಳುವ ಅವಕಾಶ ದೂರುದಾರರಿಗೆ ದೊರಕಿದೆ.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು ಗದಗ ಜಿಲ್ಲೆಯ ಕಕ್ಷಿದಾರರೊಬ್ಬರು ಬರೆದಿದ್ದ ಪತ್ರಕ್ಕೆ, ‘ನ್ಯಾಯಾಲಯದ ಒಪ್ಪಿಗೆ ಪಡೆದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಿಸಿಕೊಳ್ಳಬಹುದು’ ಎಂದು ಹಿಂಬರಹ ನೀಡಿದೆ.

2010ರಲ್ಲಿ ನಡೆದಿದ್ದ ಕ್ರಿಮಿನಲ್ ಪ್ರಕರಣ ಸಂಬಂಧ ಗದಗದ ಒಂದನೇ ಜೆ.ಎಂ.ಎಫ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಾದ ಮಂಡಿಸುತ್ತಿರುವ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಗ್ಗೆ ಕಕ್ಷಿದಾರರಿಗೆ ಅಸಮಾಧಾನವಿತ್ತು. ಅವರ ಬದಲಿಗೆ ಬೇರೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶವಿದೆಯೇ ಎಂದು ಪ್ರಶ್ನಿಸಿ ಕಕ್ಷಿದಾರರು ಇಲಾಖೆಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂದನೆ ಸಿಗದಿದ್ದುದರಿಂದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಬಳಿ ಅಳಲು ತೋಡಿಕೊಂಡಿದ್ದರು. ಈ ವಿಷಯ ಸಂಬಂಧ ಸಚಿವರು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಕಕ್ಷಿದಾರರ ಹಾಗೂ ಸಚಿವರ ಪತ್ರವನ್ನು ಉಲ್ಲೇಖಿಸಿ ನಿರ್ದೇಶಕರು ಈಗ ಹಿಂಬರಹ ನೀಡಿದ್ದಾರೆ. ಅದರ ಪ್ರತಿ ‘‍ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಕ್ರಿಮಿನಲ್ ಪ್ರಕರಣವೊಂದರ ಮೇಲ್ಮನವಿ ಸಂಬಂಧ ಸುಪ್ರೀಂ ಕೋರ್ಟ್ 2016ರ ಸೆಪ್ಟೆಂಬರ್ 6ರಂದು ನೀಡಿರುವ ತೀರ್ಪಿನಂತೆ, ಅರ್ಜಿದಾರರೇ (ಕಕ್ಷಿದಾರರು) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಾವು ಇಚ್ಛಿಸಿರುವ ವಕೀಲರನ್ನೇ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿಕೊಳ್ಳಬಹುದು’ ಎಂದು ಇಲಾಖೆಯ ನಿರ್ದೇಶಕ ಕೆ.ರುದ್ರಸ್ವಾಮಿ ಉತ್ತರಿಸಿದ್ದಾರೆ.

ಇದುವರೆಗೂ ಸಿವಿಲ್‌ ಪ್ರಕರಣದಲ್ಲಿ ಮಾತ್ರ ದೂರುದಾರರು ಇಚ್ಛೆಯ ವಕೀಲರನ್ನು ನೇಮಕ ಮಾಡಿಕೊಳ್ಳಬಹುದಾಗಿತ್ತು.  ಕ್ರಿಮಿನಲ್‌ ಪ್ರಕರಣಗಳಿಗೆ ಇದು ಅನ್ವಯವಾಗುತ್ತಿರಲಿಲ್ಲ. ವಿಶೇಷ ಪ್ರಕರಣಗಳಲ್ಲಿ ಮಾತ್ರ ಸರ್ಕಾರವೇ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳನ್ನು ನೇಮಿಸುತ್ತಿತ್ತು. ಈಗ ಯಾವುದೇ ದೂರುದಾರರು ಈ ಅವಕಾಶ ಬಳಸಿಕೊಳ್ಳಬಹುದು ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಹಿರಿಯ ವಕೀಲರೊಬ್ಬರು ತಿಳಿಸಿದರು.

‘ಸದ್ಯ ಪ್ರಾಸಿಕ್ಯೂಟರ್‌ಗಳಿಗೆ ಇಲಾಖೆಯೇ ಸಂಭಾವನೆ ನೀಡುತ್ತಿದೆ. ವಕೀಲರನ್ನು ವಿಶೇಷ ಪ್ರಾಸಿಕ್ಯೂಟರ್‌ಗಳಾಗಿ ನೇಮಕ ಮಾಡಿಕೊಂಡರೆ ಕಕ್ಷಿದಾರರೇ ಶುಲ್ಕ ನೀಡಬೇಕಾಗುತ್ತದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರವೇ ಇಲಾಖೆ ಶುಲ್ಕವನ್ನು ಭರಿಸಲಿದೆ’ ಎಂದರು.

ಶೇ. 55ರಷ್ಟು ಹುದ್ದೆಗಳು ಖಾಲಿ: ರಾಜ್ಯದಲ್ಲಿ ‌ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು, ಹಿರಿಯ ಹಾಗೂ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಶೇ 55ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಇಲಾಖೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣಗಳ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

‘ಹುದ್ದೆಗಳು ಖಾಲಿ ಇರುವುದರಿಂದ ಕರ್ತವ್ಯನಿರತ ಪ್ರಾಸಿಕ್ಯೂಟರ್‌ಗಳ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಕಕ್ಷಿದಾರರು ತಮ್ಮಿಷ್ಟದ ವಕೀಲರನ್ನು ನೇಮಕ ಮಾಡಿಕೊಂಡರೆ ಈ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ. ಇದ್ದ ಹುದ್ದೆಗಳನ್ನೇ ಕಡಿತ ಮಾಡುವ ಕಾಲವೂ ಬರಬಹುದು’ ಎಂದು ಹಿರಿಯ ವಕೀಲ ತಿಳಿಸಿದರು.

ವಿದ್ವತ್‌ ಹಲ್ಲೆ ಪ್ರಕರಣದಲ್ಲೂ ನೇಮಕ

ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ನೇಮಕ ಮಾಡಲಾಗಿತ್ತು.

ಈ ಕ್ರಿಮಿನಲ್‌ ಪ್ರಕರಣದಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನರೇಂದ್ರ ವಾದ ಮಂಡಿಸಬೇಕಿತ್ತು. ವಿದ್ವತ್‌ ತಂದೆ ಲೋಕನಾಥನ್‌, ಶ್ಯಾಮಸುಂದರ್‌ ಅವರನ್ನು ವಿಶೇಷ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡಿಕೊಳ್ಳಲು ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಗೂ ಮುನ್ನವೇ ಶ್ಯಾಮಸುಂದರ್‌ ಅವರನ್ನು ಸರ್ಕಾರವೇ ನೇಮಕ ಮಾಡಿತು. ಈಗ ವಿದ್ವತ್‌ ಪರ ಅವರೇ ವಾದಿಸುತ್ತಿದ್ದಾರೆ.

ಅಂಕಿ ಅಂಶ

2,148 -ಇಲಾಖೆಗೆ ಮಂಜೂರಾದ ಹುದ್ದೆಗಳು

960 -ಕಾರ್ಯನಿರತ ಹುದ್ದೆಗಳು

1,185 -ಖಾಲಿ ಇರುವ ಹುದ್ದೆಗಳು

ಪ್ರಾಸಿಕ್ಯೂಟರ್‌ ನೈತಿಕತೆಗೆ ಧಕ್ಕೆ

‘ಕ್ರಿಮಿನಲ್‌ ಪ್ರಕರಣ ವಕೀಲರನ್ನು ನೇಮಕ ಮಾಡಿಕೊಳ್ಳಲು ಕಕ್ಷಿದಾರರಿಗೆ ಅವಕಾಶ ನೀಡುವುದರಿಂದ  ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ ನೈತಿಕತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ರಾಜ್ಯ ಪ್ರಾಸಿಕ್ಯೂಟರ್‌ಗಳ ಸಂಘದ ಅಧ್ಯಕ್ಷ ಚನ್ನಪ್ಪ ಹರಸೂರ ಆತಂಕ ವ್ಯಕ್ತಪಡಿಸಿದರು.

‘ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಹಿರಿಯ ವಕೀಲ ಸದಾಶಿವಮೂರ್ತಿ ಅವರನ್ನು ವಿಶೇಷ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡಲಾಗಿತ್ತು. ಆ ಪ್ರಕರಣ ಏನಾಯಿತೆಂಬುದು ಎಲ್ಲರಿಗೂ ಗೊತ್ತು. ವಿಶೇಷ ಪ್ರಾಸಿಕ್ಯೂಟರ್‌ ವಾದಿಸಿದ್ದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆಗಳೇ ಇಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry