ಸಕ್ಕರೆ ಉತ್ಪಾದನೆ ಹೆಚ್ಚಳ: ರಫ್ತು ಸುಂಕ ಕಡಿತ

7

ಸಕ್ಕರೆ ಉತ್ಪಾದನೆ ಹೆಚ್ಚಳ: ರಫ್ತು ಸುಂಕ ಕಡಿತ

Published:
Updated:
ಸಕ್ಕರೆ ಉತ್ಪಾದನೆ ಹೆಚ್ಚಳ: ರಫ್ತು ಸುಂಕ ಕಡಿತ

ನವದೆಹಲಿ: ಕಚ್ಚಾ ಮತ್ತು ಶುದ್ಧೀಕೃತ ಸಕ್ಕರೆ ರಫ್ತು ಉತ್ತೇಜಿಸಲು ಸುಂಕ ಕಡಿತಗೊಳಿಸಲಾಗಿದೆ.

2017–18ರ ಸಕ್ಕರೆ ಋತುವಿನಲ್ಲಿ ದಾಖಲೆ ಎನ್ನಬಹುದಾದ 2.95 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಣಕ್ಕೆ ರಫ್ತು ಹೆಚ್ಚಿಸಲು ರಫ್ತು ಸುಂಕವನ್ನು ಶೇ 20 ರಿಂದ ಶೂನ್ಯಕ್ಕೆ ತಗ್ಗಿಸಲು ನಿರ್ಧರಿಸಲಾಗಿದೆ ಎಂದು ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಕೇಂದ್ರೀಯ ಮಂಡಳಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದ ಎರಡನೆ ಅತಿದೊಡ್ಡ ದೇಶವಾಗಿರುವ ಭಾರತದಲ್ಲಿ ಈ ಬಾರಿ ಉತ್ಪಾದನೆಯು ಗಮನಾರ್ಹವಾಗಿ ಹೆಚ್ಚಲಿದೆ. ಹಿಂದಿನ ವರ್ಷ ಇದು 2.03 ಕೋಟಿ ಟನ್‌ಗಳಷ್ಟಿತ್ತು. ದೇಶದಲ್ಲಿ ವಾರ್ಷಿಕ ಸಕ್ಕರೆ ಬೇಡಿಕೆ ಪ್ರಮಾಣವು 2.4 ರಿಂದ 2.5 ಕೋಟಿ ಟನ್‌ಗಳಷ್ಟಿದೆ.

ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟ ದರವು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಹೆಚ್ಚುವರಿ ಸಂಗ್ರಹ ಕರಗಿಸಲು ರಫ್ತು ಸುಂಕ ರದ್ದುಪಡಿಸಲು ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಫ್‌ಸಿಎಸ್‌ಎಫ್‌) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

ಕಬ್ಬು ಬಾಕಿ: ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಮೊತ್ತವು ಜನವರಿ ತಿಂಗಳಾಂತ್ಯಕ್ಕೆ ₹ 14 ಸಾವಿರ ಕೋಟಿಗಳಿಗೆ ತಲುಪಿದೆ. ಸಕ್ಕರೆ ಬೆಲೆ ಅಗ್ಗವಾಗಿರುವುದರಿಂದ ಈ ಬಾಕಿ ಮೊತ್ತ ಹೆಚ್ಚಲಿದೆ ಎಂದೂ ಅಂದಾಜಿಸಲಾಗಿದೆ. ಮಾರ್ಚ್‌ 15ರವರೆಗೆ ಸಕ್ಕರೆ ಕಾರ್ಖಾನೆಗಳು 2.58 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry