ಉಗ್ರ ಹೋರಾಟ ಇಂದಿನಿಂದ

7
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ: 44 ದಿನದಿಂದ ಅನಿರ್ದಿಷ್ಟಾವಧಿ ಧರಣಿ

ಉಗ್ರ ಹೋರಾಟ ಇಂದಿನಿಂದ

Published:
Updated:

ಚಿಕ್ಕೋಡಿ: ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಗಾಗಿ ಕಳೆದ 44 ದಿನಗಳಿಂದ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿದ್ದ ಶಾಂತಿಯುತ ಧರಣಿ ಸತ್ಯಾಗ್ರಹ ಮಾ.21 ರಿಂದ ಉಗ್ರ ಸ್ವರೂಪ ಪಡೆಯಲಿದೆ.

ಬೆಳಗಾವಿ ಜಿಲ್ಲೆ ವಿಭಜನೆ ವಿಷಯವಾಗಿ ಮೂರು ಬಾರಿ ನಿಯೋಗಗಳೊಂದಿಗೆ ಮುಖ್ಯಮಂತ್ರಿಯವರು ನಡೆಸಿರುವ ಚರ್ಚೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಹೋರಾಟಗಾರರು ತೀವ್ರ ಸ್ವರೂಪ ಹೋರಾಟ ಆರಂಭಿಸುವ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ, ‘ಚಿಕ್ಕೋಡಿ ಜಿಲ್ಲೆ ರಚನೆ ವಿಷಯವಾಗಿ ಸಂಸದ ಪ್ರಕಾಶ ಹುಕ್ಕೇರಿ ರಾಜೀನಾಮೆ ನೀಡುವ ನಾಟಕ ನಿಲ್ಲಿಸಬೇಕು. ಸದ್ಯ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದು, ಅವರಿಗೆ ಖುದ್ದಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಮುಖ್ಯಮಂತ್ರಿಗೆ ಆದೇಶಿಸುವಂತೆ ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಗಡಿಭಾಗದ ಜನತೆಗೆ ಮೋಸ ಮಾಡಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷ ಸೇರುವಾಗಲೂ ಚಿಕ್ಕೋಡಿ ಜಿಲ್ಲೆ ರಚನೆ ಒಪ್ಪಿಕೊಂಡಿದ್ದರು. ಅಲ್ಲದೇ, ನಾಲ್ಕಾರು ಬಾರಿ ಚಿಕ್ಕೋಡಿ ಜಿಲ್ಲೆ ರಚನೆ ಇಂಗಿತ ವ್ಯಕ್ತಪಡಿಸಿದ್ದರು. ಆದರೂ, ಅವರು ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದೇ 19 ರಂದು ನಡೆದ ಸರ್ವಪಕ್ಷ ಸಭೆಯೂ ವಿಫಲವಾಗಿರುವುದರಿಂದ ಹೋರಾಟಗಾರರು ರೊಚ್ಚಿಗೆದ್ದಿದ್ದು, ಅಹಿಂಸಾತ್ಮಕ ಹೋರಾಟದ ಹಾದಿ ತುಳಿಯಲಿದ್ದಾರೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ’ ಎಂದು ಬಿ.ಆರ್.ಸಂಗಪ್ಪಗೋಳ ಎಚ್ಚರಿಕೆ ನೀಡಿದರು.

‘ಇದೇ 21 ರಂದು ಬೆಳಿಗ್ಗೆ ಕಂಕಣವಾಡಿ ಬಳಿ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿ ತಡೆ ಮತ್ತು ಚಿಕ್ಕೋಡಿಯ ಸರ್ಕಾರಿ ಕಚೇರಿಗಳಿಗೆ ಬೀಗ ಮುದ್ರೆ ಪ್ರತಿಭಟನೆ ನಡೆಸಲಾಗುವುದು‘ ಎಂದು ರೈತ ಮುಖಂಡ ತ್ಯಾಗರಾಜ್ ಕದಂ ಹೇಳಿದರು.

ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ, ದತ್ತು ಹಕ್ಯಾಗೋಳ, ಡಾ.ಸುಭ್ರಾವ್ ಎಂಟೆತ್ತಿನವರ, ಎಸ್‌.ವೈ.ಹಂಜಿ, ಸುರೇಶ ಬ್ಯಾಕುಡೆ, ತುಕಾರಾಮ್ ಕೋಳಿ, ನಿಜಗುಣಿ ಆಲೂರೆ, ರಮೇಶ ಕರನೂರೆ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry