ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ

7
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರೊ.ಎಸ್‌.ಎಸ್‌.ಮೈನಾಳೆ ಅಭಿಮತ

ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ

Published:
Updated:

ಕಮಲನಗರ:  ‘ಆರೋಗ್ಯ, ಕೃಷಿ, ಅಂತರಿಕ್ಷ, ಸಾರಿಗೆ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಜ್ಞಾನ ಸಂಶೋಧನೆಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನವೂ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಪ್ರೊ.ಎಸ್‌.ಎಸ್‌.ಮೈನಾಳೆ ಹೇಳಿದರು.

ಸಮೀಪದ ಖತಗಾಂವ್‌ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯು ‘ರಾಷ್ಟ್ರೀಯ ಅವಿಷ್ಕಾರ ಅಭಿಯಾನ’ ಯೋಜನೆಯಡಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ವಿಜ್ಞಾನದ ಯಾವುದೇ ವಿಷಯದಲ್ಲೂ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಯಾವುದೇ ವಿಷಯದ ಕುರಿತು ಸೂಕ್ಷ್ಮವಾಗಿ ವೀಕ್ಷಿಸಿ, ಕುತೂಹಲದಿಂದ ಅಭ್ಯಾಸ ಮಾಡಿ, ಸ್ವಯಂ ಯೋಚಿಸುವ ಗುಣಗಳನ್ನು ಹೊಂದಿ ವಿಜ್ಞಾನಿಗಳಾಗಿ ದೇಶದ ಸಂಪತ್ತು ಆಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಿಂಗ್‌ ಹಜಾರಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಿ, ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ನನ್ನ ಕ್ಷೇತ್ರಕ್ಕೆ ಒಳಪಡುವ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ಮುರಲಿನಾಥ ಮೇತ್ರೆ ಮಾತನಾಡಿ, ‘ವಿದ್ಯಾರ್ಥಿಗಳು ವಿಜ್ಞಾನಿ ಸರ್ ಸಿ.ವಿ. ರಾಮನ್ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ವೀಕ್ಷಿಸುವ, ಪರೀಕ್ಷಿಸುವ, ಪ್ರಶ್ನಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮೂಢನಂಬಿಕೆಗಳಿಂದ ಹೊರಬರಲು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.

ಮುಖಂಡ ಶಿವರಾಜ ನಿಲಂಗೆ ಮಾತನಾಡಿ, ‘ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ಜಾಗೃತಗೊಳಿಸಿ, ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ನಡೆದಿರುವ ಈ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು, ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹೇರಾಬಿ ಮೂಸಾ ಅಧ್ಯಕ್ಷತೆ ವಹಿಸಿದ್ದರು.ಪಿ.ಜಿ.ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮದನೂರ್‌ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಧನರಾಜ ಮೇತ್ರೆ, ಮುಖಂಡ ಸೈಯದ್‌ ಮೂಸಾ, ಅನಿಲಕುಮಾರ ಬಿರಾದಾರ್‌, ಇಂದ್ರಜೀತ್‌ ಗವಳಿ, ಮಲ್ಲಮ್ಮ ಕಸ್ತೂರೆ, ಇಂದಿರಾಬಾಯಿ ಕಾಂಬಳೆ ಇದ್ದರು.

ಮುಖ್ಯ ಶಿಕ್ಷಕ ವಿಜಯಕುಮಾರ ಬಿರಾದಾರ್‌ ಸ್ವಾಗತಿಸಿದರು. ಸುಭಾಷ ಬಿರಾದಾರ್‌ ನಿರೂಪಿಸಿದರು. ಸೂರ್ಯಕಾಂತ ಮಹಾಜನ್‌ ವಂದಿಸಿದರು. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳು, ದೂರದ ವಸ್ತುಗಳನ್ನು ದೊಡ್ಡದಾಗಿ ತೋರಿಸುವ ದೂರದರ್ಶಕ, ಮಣ್ಣಿನ ಮಹತ್ವದ ಮಾದರಿ, ಮಳೆನೀರು ಕೊಯ್ಲು ಮಾದರಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry