ಕಾರ್ಯಕರ್ತರಲ್ಲಿ ಅಸಮಾಧಾನ; ಆನೆ ನಿತ್ರಾಣ

7
ಬಿಎಸ್‌ಪಿಗೆ ಮುಳುವಾದ ಜೆಡಿಎಸ್‌ ಮೈತ್ರಿ; ಬುಡಮೇಲಾಯಿತು ಲೆಕ್ಕಾಚಾರ

ಕಾರ್ಯಕರ್ತರಲ್ಲಿ ಅಸಮಾಧಾನ; ಆನೆ ನಿತ್ರಾಣ

Published:
Updated:
ಕಾರ್ಯಕರ್ತರಲ್ಲಿ ಅಸಮಾಧಾನ; ಆನೆ ನಿತ್ರಾಣ

ಬೀದರ್‌: ಬಹುಜನ ಸಮಾಜ ಪಕ್ಷವು ಜೆಡಿಎಸ್‌ನೊಂದಿಗೆ ವಿಧಾನಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾರಣ ಬಿಎಸ್‌ಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸದೇ ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡಿರುವುದನ್ನು ವಿರೋಧಿಸಿ ಜಿಲ್ಲೆಯ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿರುವ ಕಾರಣ ಬಿಎಸ್‌ಪಿ ಆಂತರಿಕವಾಗಿ ಕುಸಿದಿದೆ.

ಮೈತ್ರಿ ಪೂರ್ವದಲ್ಲಿ ಹುಮನಾಬಾದ್‌ ಕ್ಷೇತ್ರದಿಂದ ಅಂಕುಶ ಗೋಖಲೆ, ಬೀದರ್‌ ಕ್ಷೇತ್ರದಿಂದ ಸೈಯದ್‌ ಜುಲ್ಫೇಕಾರ್‌ ಹಾಸ್ಮಿ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದಿಂದ ಮಾರಸಂದ್ರ ಮುನಿಯಪ್ಪ ಸ್ಪರ್ಧಿಸುವುದು ಖಚಿತ ಎನ್ನುವಷ್ಟರ ಮಟ್ಟಿಗೆ ಈ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಾಗಿತ್ತು. ಅಂಕುಶ ಗೋಖಲೆ ಆಗಲೇ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ, ಮೈತ್ರಿಯ ನಂತರ ಲೆಕ್ಕಾಚಾರವೇ ಬುಡಮೇಲಾಗಿದೆ.

ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎನ್ನುವುದು ಮನವರಿಕೆಯಾದ ನಂತರ ಮಾರಸಂದ್ರ ಮುನಿಯಪ್ಪ ಅವರು ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಜೆಡಿಎಸ್‌–ಬಿಎಸ್‌ಪಿ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಬೀದರ್‌ ಕ್ಷೇತ್ರಕ್ಕೆ ‘ನಾನೇ ಅಭ್ಯರ್ಥಿ’ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಜುಲ್ಫೇಕಾರ್‌ ಹಾಸ್ಮಿ ಅವರಿಗೆ ಆಘಾತ ಉಂಟು ಮಾಡಿದ್ದಾರೆ.

ಜೆಡಿಎಸ್‌ನಿಂದ ಮುನಿಸಿಕೊಂಡು ಕಳೆದ ವರ್ಷ ಬಿಎಸ್‌ಪಿ ಸೇರಿದ್ದ ಹಾಸ್ಮಿ ಅವರಿಗೆ ಜೆಡಿಎಸ್‌–ಬಿಎಸ್‌ಪಿ ಮೈತ್ರಿಯಿಂದ ಟಿಕೆಟ್‌ ದೊರೆಯುವುದು ಅಸಾಧ್ಯ ಎನ್ನುವುದು ಮನವರಿಕೆಯಾದ ನಂತರ ಬಿಎಸ್‌ಪಿಯಿಂದಲೂ ಹೊರಗೆ ಬಂದಿದ್ದಾರೆ. ಅವರೊಂದಿಗೆ ಅವರ ಬೆಂಬಲಿಗರೂ ಪಕ್ಷವನ್ನು ತೊರೆದಿದ್ದಾರೆ.

ಹೊರಗಿನ ವ್ಯಕ್ತಿಯೊಬ್ಬರು ಬಿಎಸ್‌ಪಿಯಿಂದ ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವುದು ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿದೆ. ಕೆಲವು ಕಾರ್ಯಕರ್ತರು ಈಗಾಗಲೇ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.

ಮೊದಲ ಖಾತೆ ತೆರೆದಿದ್ದ ಬಿಎಸ್‌ಪಿ:

1994ರಲ್ಲಿ ಬೀದರ್ ಕ್ಷೇತ್ರದಿಂದ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಸೈಯದ್‌ ಜುಲ್ಫೇಕಾರ್‌ ಹಾಸ್ಮಿ 25,433 ಮತಗಳನ್ನು ಪಡೆಯುವ ಮೂಲಕ ಅಚ್ಚರಿಯ ಗೆಲುವು ಸಾಧಿಸಿದ್ದರು. ಚುನಾವಣಾ ಕಣದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮಹಮ್ಮದ್‌ ಲೈಕೊದ್ದಿನ್‌ ಸೇರಿದಂತೆ 18 ಜನ ಠೇವಣಿ ಕಳೆದುಕೊಂಡಿದ್ದರು. ಬಿಎಸ್‌ಪಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ರಾಷ್ಟ್ರದ ಗಮನ ಸೆಳೆದಿತ್ತು.

ಹಾಸ್ಮಿ ಶೇಕಡ 26.16 ರಷ್ಟು ಮತಗಳನ್ನು ಪಡೆದಿದ್ದರೆ, ಜನತಾ ದಳದಿಂದ ಸ್ಪರ್ಧಿಸಿದ್ದ ಅಮೃತ ಚಿಮಕೋಡ ಶೇಕಡ 22.51 ರಷ್ಟು ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಶೇಕಡ 5.26ರಷ್ಟು ಮತ ಪಡೆದು ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಮುಸ್ಲಿಮರು ಒಮ್ಮತದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ತಿರಸ್ಕರಿಸಿ ಆ ಪಕ್ಷಕ್ಕೆ ಆಘಾತ ನೀಡಿದ್ದರು. 1999ರಲ್ಲಿ ಹಾಸ್ಮಿ 41,699 ಮತಗಳನ್ನು ಪಡೆದರೂ ಬಿಜೆಪಿಯ ರಮೇಶ ಪಾಂಡೆ (44,270) ವಿರುದ್ಧ ಪರಾಭವಗೊಂಡಿದ್ದರು. ಆದರೆ, ಬಿಎಸ್‌ಪಿ ಮತದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿತ್ತು.

2004ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಸುಮಂತ ಡಿ. ಕೇವಲ 742 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಸೈಯದ್‌ ಜುಲ್ಫೇಕಾರ್‌ ಹಾಸ್ಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 39,784 ಮತ ಪಡೆದಿದ್ದರು.

ಈ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಿಸ್ಸಿಗೇ ಮತದಾರರು ಪ್ರಾಮುಖ್ಯ ನೀಡುತ್ತಾರೆ ಎನ್ನುವುದನ್ನು ಸಾಬೀತು ಪಡಿಸಿದ್ದರು. ವೈಯಕ್ತಿಕ ವರ್ಚಸ್ಸಿನಿಂದಾಗಿಯೇ ಬಂಡೆಪ್ಪ ಕಾಶೆಂಪುರ ಚುನಾಯಿತರಾಗಿದ್ದರು.

‘ಪ್ರಬಲ ನಾಯಕರ ಕೊರತೆ ಯಿಂದಾಗಿ ಈ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಮತಬ್ಯಾಂಕ್‌ ಗಟ್ಟಿಗೊಳಿಸಲು ಸಾಧ್ಯವಾಗಿಲ್ಲ. ಈ ಬಾರಿ ಒಳ್ಳೆಯ ಅಭ್ಯರ್ಥಿಗಳು ಇದ್ದರು.

ಆದರೆ ರಾಜ್ಯ ಮುಖಂಡರ ತಪ್ಪು ನಿರ್ಧಾರದಿಂದ ಪಕ್ಷ ಮತ್ತಷ್ಟು ದುರ್ಬಲಗೊಂಡಿದೆ’ ಎಂದು ಕಾರ್ಯಕರ್ತ ರಾಜಕುಮಾರ ಮೂಲಭಾರತಿ ಹೇಳುತ್ತಾರೆ.

ಬಿಎಸ್‌ಪಿ ಈಗ ಒಡೆದ ಮನೆ

ಜೆಡಿಎಸ್‌–ಬಿಎಸ್‌ಪಿ ಮೈತ್ರಿಯ ನಂತರ ಪಕ್ಷದ ಬಹುತೇಕ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ, ತಾಲ್ಲೂಕು ಘಟಕಗಳ ಅಧ್ಯಕ್ಷರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಬಿಎಸ್‌ಪಿ ಈಗ ಒಡೆದ ಮನೆಯಾಗಿದೆ.

‘ಜುಲ್ಫೇಕಾರ್‌ ಹಾಸ್ಮಿ ಅವರು ಮಾರಸಂದ್ರ ಮುನಿಯಪ್ಪ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಪೂರ್ವದಲ್ಲೇ ಬಿಎಸ್‌ಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಐದು ವರ್ಷ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿದ ಮುಖಂಡರನ್ನು ಕಡೆಗಣಿಸಿ ಪಕ್ಷದ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನಿರ್ನಾಮವಾಗಲಿದೆ’ ಎನ್ನುತ್ತಾರೆ ಬಿಎಸ್‌ಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಂಕುಶ ಗೋಖಲೆ.

‘ಬೀದರ್‌ ಕ್ಷೇತ್ರದ ಜನತೆಗೆ ಮಾರಸಂದ್ರ ಯಾರು ಎನ್ನುವುದೇ ಗೊತ್ತಿಲ್ಲ. ಪಕ್ಷದ ಮುಖಂಡರೇ ಪಕ್ಷದ ಸಮಾಧಿ ಮಾಡಲು ಹೊರಟರೆ ಯಾರಿಗೆ ಬುದ್ಧಿ ಹೇಳಬೇಕು. ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಬಹುಜನ ಚಳವಳಿಯನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಮಾರಸಂದ್ರ ಮುನಿಯಪ್ಪ ಅವರನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ. ಇನ್ನು ಬಿಎಸ್‌ಪಿಗೆ ಉಳಿಗಾಲವಿಲ್ಲ’ ಎಂದು ಮಾಜಿ ಶಾಸಕ ಜುಲ್ಫೇಕಾರ್ ಹಾಸ್ಮಿ ಹೇಳುತ್ತಾರೆ.

**

ಮುಖಂಡರಿಗೆ ಸೂಟ್‌ಕೇಸ್‌ ಮುಖ್ಯವಾದರೆ ಬಹುಜನ ಚಳವಳಿ ಸ್ವರೂಪ ಪಡೆಯಲಾರದು. ಬಿಎಸ್‌ಪಿಯಲ್ಲಿ ಪಕ್ಷ ಬಲಪಡಿಸುವವರು ಯಾರೂ ಉಳಿದಿಲ್ಲ.

- ಸೈಯದ್‌ ಜುಲ್ಫೇಕಾರ್‌ ಹಾಸ್ಮಿ, ಮಾಜಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry