ಕಲಾವಿದನಿಗೆ ಕೀರ್ತಿ ತರುವ ಕಲಾಕೃತಿಗಳು

7
ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮುರುಘಾ ಶರಣರ ಅಭಿಮತ

ಕಲಾವಿದನಿಗೆ ಕೀರ್ತಿ ತರುವ ಕಲಾಕೃತಿಗಳು

Published:
Updated:
ಕಲಾವಿದನಿಗೆ ಕೀರ್ತಿ ತರುವ ಕಲಾಕೃತಿಗಳು

ಚಿತ್ರದುರ್ಗ: ಕಲ್ಪನೆಯಿಂದ ಅರಳುವ ಕಲೆ ಮುಂದೆ ಕಲಾವಿದನಿಗೂ ಕೀರ್ತಿ ತರುತ್ತದೆ. ಇಂಥ ಕಲಾಕೃತಿಗಳು ಪ್ರಾಚೀನ ವಾದಷ್ಟೂ ಅವುಗಳ ಬೆಲೆ ಹೆಚ್ಚು ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಚಿತ್ರದುರ್ಗದ ಎಸ್‌ಜೆ‌ಎಂ ಚಿತ್ರಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮಾತನಾಡಿದರು.

ಕಲೆಯಲ್ಲಿ ಅನೇಕ ಪ್ರಕಾರಗಳಿವೆ. ಅವುಗಳನ್ನು ಅರಿಯಲು ದೇಶ ವಿದೇಶಗಳ ಪ್ರವಾಸ ಮಾಡಬೇಕು. ಲಂಡನ್‍ನಲ್ಲಿ ಕಲಾಕೃತಿಗಳನ್ನು ಹರಾಜು ಹಾಕುತ್ತಾರೆ. ಕಲಾಕೃತಿಗಳು ಲಕ್ಷ, ಕೋಟಿಗಟ್ಟಲೆ ಬೆಲೆಗೆ ಹರಾಜಾಗುತ್ತವೆ ಎಂದು ಉಲ್ಲೇಖಿಸಿದರು.

ಫ್ರಾನ್ಸ್‌ನಲ್ಲಿರುವ ಲೋರೆ ಮ್ಯೂಸಿಯಂನಲ್ಲಿ ಮೋನಾಲಿಸ ಚಿತ್ರ ಬಹಳ ಜನಾಕರ್ಷಕ. ಸಾವಿರಾರು ಎಕರೆಯಲ್ಲಿ ನಿರ್ಮಾಣವಾಗಿರುವ ಲೋರೆ ಮ್ಯೂಸಿಯಂ, ಪ್ರವಾಸಿಗರ, ಕಲಾವಿದರ ಆಕರ್ಷಣೀಯ ತಾಣ ಎಂದರು.

ಚಿತ್ರ ಬರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ಹಿಂದೆ ರಾಜಮಹಾರಾಜರು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಈಗ ಮುರುಘಾಮಠದಂತಹ ಮಠಗಳು ಆ ಪ್ರಯತ್ನ ಮುಂದುವರಿಸಿವೆ. ಸರ್ಕಾರವೂ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸಬೇಕು.  ಆರ್ಥಿಕ ನೆರವು ನೀಡಬೇಕು ಎಂದು ಸಲಹೆ ನೀಡಿದರು.

ಹೊರ ರಾಷ್ಟ್ರಗಳಲ್ಲಿ ಕಲೆಗೆ ಉತ್ತಮ ಬೇಡಿಕೆ ಇದೆ. ಆದರೆ,  ದೇಶದಲ್ಲಿ ಉತ್ತಮ ಕಲಾವಿದರಿದ್ದರೂ ವೃತ್ತಿಯಲ್ಲಿ ಬಂದೊದಗುವ ಖರ್ಚು ಸರಿತೂಗಿಸಲು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಮುರುಘಾಮಠ ಕಲೆಯನ್ನು ಪ್ರೋತ್ಸಾಹಿ ಸುತ್ತಿರುವುದು ಸಂತಸದ ವಿಷಯ ಎಂದು ಶ್ಲಾಘಿಸಿದರು.

ಕಲಾವಿದ ಸೋಮಣ್ಣ ಚಿತ್ರಗಾರ ಮಾತನಾಡಿ, ‘ಕಲೆ ಒಂದು ಅಭಿವ್ಯಕ್ತ ಮಾಧ್ಯಮ. ಕಲಾವಿದ ತನ್ನೊಳಗಿನ ಭಾವನೆಗಳನ್ನು ಸಮಾಜಕ್ಕೆ ಚಿತ್ರಗಳ ಮೂಲಕ ತಿಳಿಸುತ್ತಾನೆ. ಇಂಥ ಕಲೆ ಒಂದು ತಪಸ್ಸಿನಂತೆ. ಅದು ಒಲಿಯಲು ವರ್ಷಗಳೇ ಬೇಕು’ ಎಂದು ತಿಳಿಸಿದರು.

ಬೇಲೂರು, ಹಳೇಬೀಡು ಶ್ರವಣಬೆಳಗೊಳ ಸ್ಥಳಗಳಲ್ಲಿರುವ ಚಿತ್ರಕಲೆಗಳನ್ನು ನೋಡಿದರೆ ಅಂದಿನ ಮಹಾರಾಜರು ಕಲಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು ಎನ್ನುವುದು ಗೊತ್ತಾ ಗುತ್ತದೆ. ಮುರುಘಾಮಠವು ಕಲೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ. ಎಂ.ಜೆ. ಕಮಲಾಕ್ಷಿ ಮಾತನಾಡಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸುರೇಂದ್ರನಾಥ್, ಎಸ್.ಜೆ.ಎಂ. ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕಣ್ಮೇಶ್, ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು. ಕಲಾವಿದ ಉಮೇಶ ಪತ್ತಾರ್ ಪ್ರಾರ್ಥಿಸಿದರು. ಡಾ. ಬಿ.ಟಿ. ಚಾರುಲತಾ ನಿರೂಪಿಸಿದರು. ಕಣ್ಮೇಶ್ ವಂದಿಸಿದರು.

ಶಿಬಿರಾರ್ಥಿಗಳಿಗೆ ಒಂದು ಅಸೈನ್‍ಮೆಂಟ್‍...

'ಈ ಶಿಬಿರವು 23ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಶೂನ್ಯಪೀಠ ಪರಂಪರೆಯ ಆರು ಸ್ವಾಮೀಜಿ ಅವರ ಭಾವಚಿತ್ರಗಳು ಇಲ್ಲ. ಈ ಶಿಬಿರಕ್ಕೆ ಪ್ರವೇಶ ಪಡೆದಿರುವ ಶಿಬಿರಾರ್ಥಿಗಳು ಈ ಆರೂ ಸ್ವಾಮೀಜಿಗಳ ಚಿತ್ರಗಳನ್ನು ಬರೆಯಬೇಕು. ಆ ಚಿತ್ರಗಳನ್ನಿಟ್ಟುಕೊಂಡು, ಮುರುಘಾವನದಲ್ಲಿ ಅವರ ಪುತ್ಥಳಿಗಳನ್ನು ಅನಾವರಣಗೊಳಿಸುತ್ತಿದ್ದೇವೆ’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry