ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ ಭಾವದಲ್ಲಿ ಮಿಂದೆದ್ದ ಭಕ್ತರು

ಉಚ್ಚಂಗಿದುರ್ಗ: ಉತ್ಸವಾಂಬ ದೇವಿ ಯುಗಾದಿ ಜಾತ್ರೆಗೆ ತೆರೆ
Last Updated 21 ಮಾರ್ಚ್ 2018, 9:07 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ: ಶಕ್ತಿ ದೇವತೆಯ ನೆಲೆಬೀಡಾದ ಉಚ್ಚಂಗಿದುರ್ಗದಲ್ಲಿ ಉತ್ಸವಾಂಬ ದೇವಿಯ ಐದು ದಿನಗಳ ಜಾತ್ರಾ ಮಹೋತ್ಸವವು ವಿವಿಧ ಪೂಜೆ–ಪುನಸ್ಕಾರ ಹಾಗೂ ಸಹಸ್ರಾರು ಭಕ್ತರಿಂದ ಮೊಳಗಿದ ‘ಉಧೋ.. ಉಧೋ...’ ಘೋಷಗಳೊಂದಿಗೆ ಮಂಗಳವಾರ ತೆರೆ ಬಿದ್ದಿತು.

ಯುಗಾದಿ ಅಮಾವಾಸ್ಯೆಯಂದು ಮಹಾಪೂಜೆ ಹಾಗೂ ಚಂದ್ರ ದರ್ಶನದ ನಂತರ ದೇವಿಯ ಆನೆ ಹೊಂಡ ಉತ್ಸವ, ದೇವಿಗೆ ಪೂಜೆಗಳು ನಡೆಯಿತು.

ದಾವಣಗೆರೆ ಜಿಲ್ಲೆಯ ಹರಿಹರ, ಹರಪನಹಳ್ಳಿ, ಜಗಳೂರು ತಾಲ್ಲೂಕು ಹಾಗೂ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಗದಗ ಜಿಲ್ಲೆಗಳಿಂದ ದೇವಿಗೆ ಹರಕೆ ತೀರಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಉಚ್ಚಂಗಿದುರ್ಗಕ್ಕೆ ಸೋಮವಾರ ಹಾಗೂ ಮಂಗಳವಾರ ಭಕ್ತರ ಪ್ರವಾಹವೇ ಹರಿದು ಬಂದಿತ್ತು.

ಹರಕೆ ತೀರಿಸಿದ ಭಕ್ತರು: ಬೆಟ್ಟಕ್ಕೆ ಹೊಂದಿಕೊಂಡಿರುವ ಹಾಲಮ್ಮ ತೋಪಿನಲ್ಲಿ ಮೂರು ದಿನಗಳ ಕಾಲಿಗೆ ದೇವಿಗೆ ಭಕ್ತಿ ಸಮರ್ಪಿಸಿದರು. ಪ್ರಾಣಿಬಲಿ ನಿಷೇಧದ ನಡುವೆಯೂ ಭಕ್ತರು ಸಾವಿರಾರು ಕುರಿ, ಕೋಳಿಗಳನ್ನು ಬಲಿ ನೀಡಿ ಹರಕೆ ತೀರಿಸಿದರು. ಮಕ್ಕಳು, ಮಹಿಳೆಯರು, ಪುರುಷರು ಎನ್ನದೆ ಅರೆ ಬೆತ್ತಲೆಯಾಗಿ ಬೇವಿನ ಉಡುಗೆ, ಲೆಕ್ಕಿ ಪತ್ರೆ ತೊಟ್ಟು ಭಕ್ತಿ ಸಮರ್ಪಿಸಿದರು. ಪಡ್ಲಗಿ ತುಂಬಿಸುವುದು, ದೀಡು ನಮಸ್ಕಾರ, ಉರುಳು ಸೇವೆ ಮೂಲಕ ಹರಕೆ ತೀರಿಸಿದರು.

ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿತ್ತು. ತಾಲ್ಲೂಕು ಹಾಗೂ ಗ್ರಾಮ ಆಡಳಿತ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿತ್ತು. ಭಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT