‘ಹಾದಿ ದೊಡ್ಡದಿದೆ; ಮೋದಿಗೆ ಅಹವಾಲು ಸಲ್ಲಿಸೋಣ’

7
ಜಯದೇವ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು

‘ಹಾದಿ ದೊಡ್ಡದಿದೆ; ಮೋದಿಗೆ ಅಹವಾಲು ಸಲ್ಲಿಸೋಣ’

Published:
Updated:
‘ಹಾದಿ ದೊಡ್ಡದಿದೆ; ಮೋದಿಗೆ ಅಹವಾಲು ಸಲ್ಲಿಸೋಣ’

ದಾವಣಗೆರೆ: ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಶಿಫಾರಸು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಅಭಿನಂದಿಸಿದ ವಿವಿಧ ಸಂಘ–ಸಂಸ್ಥೆಗಳು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿದವು.

ಸಾರ್ವಜನಿಕರಿಗೆ ಸಿಹಿ ವಿತರಿಸಿದ ಪದಾಧಿಕಾರಿಗಳು, ರಾಜ್ಯ ಸರ್ಕಾರದ ಪರವಾಗಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಕುಮಾರ್, ‘ಇದು ಹೋರಾಟದ ಮೊದಲ ಹೆಜ್ಜೆ. ಇದರಲ್ಲಿ ಜಯ ಸಿಕ್ಕಿದೆ. ಮುಂದಿನ ಹಾದಿ ದೊಡ್ಡದಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ಹಕ್ಕು ಪಡೆಯೋಣ’ ಎಂದರು.

‘ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತಂತೆ ಕಳೆದ ಒಂಬತ್ತು ತಿಂಗಳಿನಿಂದ ನಡೆದ ನಿರಂತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತವರು ಸಚಿವರಾದ ಎಂ.ಬಿ.ಪಾಟೀಲ, ವಿನಯ್‌ ಕುಲಕರ್ಣಿ ಹಾಗೂ ಶರಣಪ್ರಕಾಶ್‌ ಪಾಟೀಲ ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಹೊರಟ್ಟಿ ಸಾಥ್‌ ನೀಡಿದರು. ಇವರೊಂದಿಗೆ ನಾಡಿನ ವಿವಿಧ ಮಠಾಧೀಶರು ಬೆಂಬಲ ಸೂಚಿಸಿದರು. ಬಸವ ಧರ್ಮದಲ್ಲಿ ನಂಬಿಕೆ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ’ ಎಂದು ಪ್ರಶಂಸಿಸಿದರು.

ಪಾಂಡೋಮಟ್ಟಿ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ‘ಸಿದ್ದರಾಮಯ್ಯ ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಮ ಪ್ರಭುವಿನ ಜಯಂತಿಯಂದೇ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಘೋಷಿಸಿದರು. ಸಿದ್ದರಾಮಯ್ಯ ಅವರೇ ನಿಜವಾದ ಬಸವ ಅನುಯಾಯಿ’ ಎಂದರು.

‘ಲಿಂಗಾಯತ 900 ವರ್ಷಗಳ ಹಿಂದೆಯೇ ಸ್ವತಂತ್ರ ಧರ್ಮವಾಗಿತ್ತು. ವೈದಿಕರ ನಿರಂತರ ದಾಳಿಯಿಂದಾಗಿ ಸ್ಥಾನಮಾನ ಸಿಕ್ಕಿರಲಿಲ್ಲ. ಸತತ ಹೋರಾಟದ ಫಲವಾಗಿ ಈಗ ಸಿಕ್ಕಿದೆ. ಇದನ್ನು ಸಾಧ್ಯವಾಗಿಸಲು ಮತ್ತಷ್ಟು ಹೋರಾಟಗಳ ಅಗತ್ಯವಿದೆ’ ಎಂದು ಹೇಳಿದರು.

ಧರ್ಮ ಒಡೆದಿಲ್ಲ: ‘ಧರ್ಮ ಒಡೆದರೆಂಬ ಅಪ‍ಪ್ರಚಾರ ಬಿಡಿ, ಸತ್ಯ ತಿಳಿಯಿರಿ’ ಎಂದು ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ, ವೀರಶೈವ ಮುಖಂಡರಿಗೆ ತಿರುಗೇಟು ನೀಡಿದರು.

‘ಅಂದಿನ ಮೂಲಭೂತವಾದಿಗಳು, ವೈದಿಕರು ಲಿಂಗಾಯತ ಧರ್ಮವನ್ನು ಬಂಧನ ಮಾಡಿಟ್ಟಿದ್ದರು. ಈಗ ಆ ಬಂಧನದಿಂದ ಮುಕ್ತಿ ಸಿಕ್ಕಿದೆ. ಈ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೇವೆ. ನಮ್ಮ ಪಾಡಿಗೆ ನಾವು ಇರಲು ಬಿಡಿ. ನಿಮಗೆ ಬೇಕಾದರೆ ನೀವು ಹೋರಾಟ ಮಾಡಿ ಪಡೆಯಿರಿ’ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.

‘ಇದು ಪ್ರಥಮ ಹಂತದ ಗೆಲುವು. ಮುಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ನಮ್ಮ ಅಹವಾಲು ಸಲ್ಲಿಸೋಣ. ಅಲ್ಲಿ ಒತ್ತಡ ಹಾಕಿ ಸ್ವತಂತ್ರ ಧರ್ಮದಮಾನ್ಯತೆ ಪಡೆಯೋಣ. ಅದನ್ನೂ ಪಡೆದು ಇದೇ ಜಯವೃತ್ತದಲ್ಲಿ ಸಂಭ್ರಮಿಸೋಣ’ ಎಂದು ಹೇಳಿದರು.

ಉಪನ್ಯಾಸಕಿ ಸುಮತಿ ಜಯಪ್ಪ ಮಾತನಾಡಿ, ‘ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಎಂದು ಘೋಷಿಸಿದೆ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಆದರೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಇದು ನಿವಾರಣೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಲಿಂಗಾಯತ ಸ್ವತಂತ್ರ ಧರ್ಮದಲ್ಲಿ ಬಸವತತ್ವ ಅನುಯಾಯಿಗಳನ್ನೂ ಸೇರಿಸಿದ್ದು ಖುಷಿ ಕೊಟ್ಟಿದೆ. 12ನೇ ಶತಮಾನದಲ್ಲಿ ಬಸವಣ್ಣನಿಂದ ಸ್ಥಾಪಿತವಾದ ಜಾತಿ, ವರ್ಣ ಮತ್ತು ವರ್ಗರಹಿತವಾದ ಲಿಂಗಾಯತ ಧರ್ಮವು ಹಿಂದೂ ಧರ್ಮಕ್ಕಿಂತ ಎಲ್ಲಾ ರೀತಿಯಲ್ಲೂ ಭಿನ್ನವಾಗಿದೆ’ ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಎಚ್‌.ಕೆ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಶಿರಸಿಂಗಿ ಮಹಾಂತ ಸ್ವಾಮೀಜಿ, ಹೋರಾಟಗಾರ ಬಾಡಾದ ಆನಂದರಾಜ್ ಮಾತನಾಡಿದರು. ಮುಖಂಡರಾದ ಸಿದ್ದರಾಮ ಶರಣರು, ದೇವಿಗೆರೆ ವೀರಭದ್ರಪ್ಪ, ಹುಚ್ಚಪ್ಪ ಮಾಸ್ತರ್, ಶಶಿಕುಮಾರ್ ಅವರೂ ಇದ್ದರು. ಬಸವ ಬಳಗ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

‘ಅರಿವು ಇಲ್ಲದವರಿಂದ ಟೀಕೆ’

‘ಮಠದ ಕಲ್ಪನೆ ಮೇಲ್ವರ್ಗಗಳಲ್ಲಿ ಮಾತ್ರ ಇತ್ತು. ಅದನ್ನು ಕೆಳವರ್ಗಗಳಿಗೆ ವಿಸ್ತರಿಸಿ, ಅವರಲ್ಲಿ ಧಾರ್ಮಿಕ ಪ್ರಜ್ಞೆ ಜೊತೆಗೆ ವೈಚಾರಿಕ ಪ್ರಜ್ಞೆಯನ್ನೂ ಮೂಡಿಸಿದವರು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು. ಅವರು ಜಾತಿಗಳನ್ನು ಒಡೆಯಲಿಲ್ಲ. ಬದಲಿಗೆ ಜಾತಿಗಳಲ್ಲಿ ಸಾಮರಸ್ಯ ಮೂಡಿಸಿದರು. ಇದರ ಅರಿವು ಇಲ್ಲದವರು ಅವರನ್ನು ಟೀಕಿಸುತ್ತಾರೆ’ ಎಂದು ಬಸವ ಪ್ರಭು ಸ್ವಾಮೀಜಿ ಹೇಳಿದರು.

**

ರಾಜ್ಯ ಸರ್ಕಾರ ಧರ್ಮ ಒಡೆದಿಲ್ಲ. ನ್ಯಾಯ ನೀಡಿದೆ. ಧರ್ಮ ಕುರಿತ ಬಸವಣ್ಣನ ತಾತ್ವಿಕತೆಯ ಅರಿವು ಇದ್ದವರಿಗಷ್ಟೇ ಇದು ತಿಳಿಯುತ್ತದೆ.

–ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry