ಮಳೆ: ₹ 4 ಕೋಟಿ ಹಾನಿ ಆರೋಪ

7
ಶಂಕರ ಪ್ಲಾಜಾಗೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ, ಬಿಆರ್‌ಟಿಎಸ್‌ ಅಧಿಕಾರಿಗೆ ತರಾಟೆ

ಮಳೆ: ₹ 4 ಕೋಟಿ ಹಾನಿ ಆರೋಪ

Published:
Updated:

ಧಾರವಾಡ: ನಗರದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿಆರ್‌ಟಿಎಸ್ ನಿಧಾನಗತಿ ಕಾಮಗಾರಿ ಎಡವಟ್ಟಿನಿಂದ ಶಂಕರ ಪ್ಲಾಜಾ ಕಾಂಪ್ಲೆಕ್ಸ್ ನೆಲಮಹಡಿ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ₹ 4 ಕೋಟಿ ಹಾನಿಯಾಗಿದೆ ಎಂದು ಕಾಂಪ್ಲೆಕ್ಸ್ ಮಾಲೀಕ ಸುನೀಲ್‌ ಶೆಟ್ಟಿ ಹೇಳಿದರು.

1995 ರಿಂದ ಇಲ್ಲಿ ಅಂಗಡಿಗಳವರು ವ್ಯಾಪಾರ ನಡೆಸುತ್ತಿದ್ದಾರೆ. ಎಂತಹ ಮಳೆ ಬಂದರೂ ಮೂರು ಇಂಚಿನಷ್ಟು ನೀರು ನಿಂತಿರುವ ಉದಾಹರಣೆ ಇಲ್ಲ. ಆದರೆ, ಬಿಆರ್‌ಟಿಎಸ್ ಅಧಿಕಾರಿಗಳು ಯೋಜನಾ ಬದ್ಧವಾಗಿ ಕಾಮಗಾರಿ ಮಾಡದ ಕಾರಣ ಈಗ ದೊಡ್ಡ ಅನಾಹುತವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಆರ್‌ಟಿಎಸ್ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದು ತಿಂಗಳ ಹಿಂದೆಯೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೆಗಡೆ ಜೆರಾಕ್ಸ್‌ನ ಮಾಲೀಕ ಗಿರೀಶ ಹೆಗಡೆ ಮಾತನಾಡಿ, ಬಿಆರ್‌ಟಿಎಸ್ ಅಧಿಕಾರಿಗಳಿಗೆ ಎಚ್ಚರಿಸಿದ್ದರೂ, ನಿರ್ಲಕ್ಷ ಮಾಡಿದ್ದಾರೆ. ನೀರು ನುಗ್ಗಿದ್ದರಿಂದ ಕೆಳ ಮಹಡಿಯಲ್ಲಿನ 16 ಅಂಗಡಿಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಜೆರಾಕ್ಸ್, ಪ್ರಿಂಟಿಂಗ್ ಯಂತ್ರಗಳು, ಕುರ್ಚಿ ಹಾಗೂ ಸೋಫಾ, ಟೇಬಲ್, ಮೊಬೈಲ್‌, ಕಂಪ್ಯೂಟರ್ ಹಾಗೂ ಜನರೇ

ಟರ್ ಸಹ ಹಾಳಾಗಿದೆ. ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಒಂದು ಹೊಸ ಕಾರು, ನಾಲ್ಕೈದು ಕಾರುಗಳು ಮತ್ತು ಬೈಕ್ ನೀರಿನಲ್ಲಿಯೇ ನಿಂತಿವೆ ಎಂದರು.

ಓಂ ಕಂಪ್ಯೂಟರ್ಸ್‌ನ ರಾಜು ಹೊಂಗಲಮಠ ಮಾತನಾಡಿ, ಸಾಕಷ್ಟು ಹಾನಿ ಆಗಿದ್ದರೂ ಮಂಗಳವಾರ ಬೆಳಿಗ್ಗೆವರೆಗೆ ಬಿಆರ್‌ಟಿಎಸ್ ಅಥವಾ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರ ಈಗಾಗಿರುವ ಹಾನಿಯನ್ನು ಭರಿಸಿಕೊಡಬೇಕು. ಇಲ್ಲದಿದ್ದರೆ, ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಳ್ಳುತ್ತೇವೆ ಎಚ್ಚರಿಸಿದರು.

ಶಾಸಕ ಬೆಲ್ಲದ ಭೇಟಿ: ಶಂಕರ ಪ್ಲಾಜಾಗೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ, ಬಿಆರ್‌ಟಿಎಸ್‌ ಅಧಿಕಾರಿ ಬಸವರಾಜ ಕೇರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ಗುತ್ತಿಗೆ ಪಡೆದಿರುವ ಆರ್.ಎನ್. ಶೆಟ್ಟಿ ಕಂಪನಿಯ ಎಂಜಿನಿಯರ್‌ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಮುಂದಾಲೋಚನೆ ಇಲ್ಲದೇ ಕಾಮಗಾರಿ ಮಾಡಿದ್ದರಿಂದ ಕೋಟ್ಯಂತರ ನಷ್ಟವಾಗಿದೆ. ಎಲ್ಲದಕ್ಕೂ ನೀವೇ ಹೊಣೆ. ಹಾನಿಗೊಳಗಾಗಿರುವುದನ್ನು ಮೌಲ್ಯಮಾಪನ ಮಾಡಿ, ಪರಿಹಾರ ನೀಡಬೇಕು ಎಂದು ತಾಕಿತು ಮಾಡಿದರು.

ಸಂಜಯ ಕಪಟಕರ್, ಮೋಹನ ರಾಮದುರ್ಗ, ಮೋಹನ ಅರ್ಕಸಾಲಿ, ವಸಂತ ಅರ್ಕಾಚಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry