ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

7
ಮಳೆಗೆ ಜನಜೀವನ ಅಸ್ತವ್ಯಸ್ತ, ಮನೆಗೆ ನುಗ್ಗಿದ ನೀರು, ಕುಸಿದು ಬಿದ್ದ ಗೋಡೆ

ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

Published:
Updated:
ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಸೋಮವಾರ ಸಂಜೆ ಒಂದು ‌ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದ ಚರಂಡಿ ತುಂಬಿ ಅಂಗಡಿಗಳ ಮುಂದಿನ ಫುಟ್‌ಪಾತ್‌‌ಗೆ ನೀರು ನುಗ್ಗಿತು. ಇದರಿಂದ ಅಂಗಡಿಯ ಮಾಲೀಕರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು.

ಸಂಜೆ 5.30ರ ಸುಮಾರಿಗೆ ಗುಡುಗು, ಮಿಂಚು ಸಹಿತ ಮಳೆ ಆರಂಭವಾಯಿತು. ಯುಗಾದಿ ಹಬ್ಬದ ಸಂಭ್ರಮ ಮುಗಿಸಿ ಎಂದಿನಂತೆ ಕೆಲಸಕ್ಕೆ ಮರಳಿದ್ದವರು ಬಿಟ್ಟು ಬಿಡದೇ ಸುರಿದ ಮಳೆಯಿಂದ ತೊಂದರೆ ಅನುಭವಿಸಿದರು.

ಮಧ್ಯಾಹ್ನದಿಂದಲೇ ಮೋಡಕವಿದ ದರುದರುವಾತಾವರಣವಿತ್ತು,  ಮೊದಲು ಜಿಟಿಜಿಟಿ ಮಳೆ ಆರಂಭವಾಗಿ ನಂತರ ರಭಸದಿಂದ ಸುರಿಯಿತು. ಧಾರವಾಡದ ಟೋಲ್‌ನಾಕಾ, ಲಕ್ಷ್ಮಿ ಟಾಕೀಸ್ ವೃತ್ತ, ಸೆಂಟ್ರಲ್ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳಿಗೆ ತೊಂದರೆಯಾಯಿತು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೂ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು.

ಮಳೆ ಆರ್ಭಟ ಕಡಿಮೆಯಾಗುತ್ತಿದ್ದಂತೆ ಪಾತ್ರೆಗಳ ಸಹಾಯದಿಂದ ಮನೆಗೆ ನುಗ್ಗಿದ್ದ ನೀರನ್ನು ಹೊರಹಾಕುತ್ತಿದ್ದ ದೃಶ್ಯ ಕಂಡುಬಂದಿತು. ಜನ್ನತ ನಗರದಲ್ಲಿ ಎರಡು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ಒಂದು ಮನೆ ನೆಲಕಚ್ಚಿದೆ.

ನಗರದಲ್ಲಿ ಮೋಡಕವಿದ ವಾತಾವರಣ ಕಾಣುತ್ತಿದ್ದಂತೆ ಹೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು.  ಕಲಘಟಗಿ, ಅಳ್ನಾವರ, ಕುಂದಗೋಳದಲ್ಲಿ ಕೂಡ ಮಳೆ ಸುರಿದಿದೆ.

ಪರದಾಡಿದ ಸವಾರರು: ಹುಬ್ಬಳ್ಳಿಯಲ್ಲಿಯೂ ವಾಹನ ಸವಾರರು ಪರದಾಡಿದರು. ವಿಜಯನಗರ, ಭವಾನಿ ನಗರ ಮತ್ತು ಮಂಜುನಾಥ ನಗರಗಳಲ್ಲಿ ಚರಂಡಿಯಲ್ಲಿ ಕಸ ತುಂಬಿದ್ದರಿಂದ ರಸ್ತೆಯ ಮೇಲೆ ನೀರು ಹರಿದಾಡಿತು. ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ಜನರು ಛತ್ರಿ ಹಿಡಿದು ಮನೆ ಸೇರುವ ಧಾವಂತದ ದೃಶ್ಯ ಸಾಮಾನ್ಯವಾಗಿತ್ತು.

ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಕಾರಣ ಸಂಚಾರದಲ್ಲಿಯೂ ವ್ಯತ್ಯಯ ಕಂಡುಬಂದಿತು.

ರಸ್ತೆಗಿಳಿದು ಪ್ರತಿಭಟನೆ

ಧಾರವಾಡದ ಸೆಂಟ್ರಲ್ ಪಾರ್ಕ್‌ನ ನೆಲ ಮಹಡಿಯಲ್ಲಿನ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿಯ ಅಂಗಡಿಕಾರರು ರಾತ್ರಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಪ್ರತಿ ಬಾರಿ ಜೋರಾಗಿ ಮಳೆ ಸುರಿದ ಸಂದರ್ಭದಲ್ಲಿ ಇದೇ ರೀತಿ ಅಂಗಡಿಗಳಿಗೆ ನೀರು ನುಸುಳಿ ವಸ್ತುಗಳು ಹಾಳಾಗುತ್ತಿವೆ. ನಮಗೆ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ಅಂಗಡಿಕಾರರು ಪ್ರಶ್ನಿಸಿದರು.

ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಶಹರ ಠಾಣೆ ಪೊಲೀಸರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry