ನೀರಿಗಾಗಿ ಹಾಹಾಕಾರ: ಸಭೆಗೆ ನುಗ್ಗಿದ ಜನ

7
ಬಂಕಾಪುರ ಪುರಸಭೆ ಸದಸ್ಯರ ಸಾಮಾನ್ಯ ಸಭೆ, ಬೀಗ ಹಾಕುವ ಎಚ್ಚರಿಕೆ

ನೀರಿಗಾಗಿ ಹಾಹಾಕಾರ: ಸಭೆಗೆ ನುಗ್ಗಿದ ಜನ

Published:
Updated:

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರದಲ್ಲಿ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ನೀಡುವಂತೆ ಆಗ್ರಹಿಸಿ ಸಭೆಗೆ ನುಗ್ಗಿದ ಘಟನೆ ನಡೆದಿದೆ.

‘ತಿಂಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದ್ದು, ಸಂಗ್ರಹಿಸಿಟ್ಟಿರುವ ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ. ಆ ನೀರನ್ನು ಕುಡಿಯುವುದರಿಂದ ರೋಗ ಬರುತ್ತಿದೆ. ಈ ಕುರಿತು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಂಟು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪಟ್ಟಣದ 8ನೇ ಮತ್ತು 11ನೇ ವಾರ್ಡಿನ ಜನ ಎಚ್ಚರಿಕೆ ನೀಡಿದರು.

‘ಈಗ ಹೆಚ್ಚಿರುವ ನೀರಿನ ಕರ ಕಡಿಮೆ ಮಾಡಬೇಕು. ಬೇಸಿಗೆಯಲ್ಲಿ ಕರ ವಸೂಲಿ ಮಾಡಬಾರದು, ಕೆಲವು ಕಡೆ 24 ಗಂಟೆಗಳ ಕಾಲ ಕುಡಿಯುವ ನೀರು ಸತತವಾಗಿ ಪೂರೈಕೆಯಾಗುತ್ತಿದೆ. ಇನ್ನು ಕೆಲವೆಡೆ ನೀರೇ ಸಿಗುತ್ತಿಲ್ಲ. ಈ ತಾರತಮ್ಯ ಸರಿಪಡಿಸಬೇಕು. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕರ ಬದುಕಿಗೆ ಅಡ್ಡಿಯಾಗುತ್ತಿದ್ದಾರೆ’ ಎಂದು ಅಲ್ಲಿನ ನಿವಾಸಿಗಳಾದ ಮಂಜುನಾಥ ಕೂಲಿ, ರಾಜು ಸುಲಾಖೆ, ಕೃಷ್ಣಪ್ಪ ರಾಯ್ಕರ ದೂರಿದರು.

ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ‘ತಕ್ಷಣ ಸ್ಥಳ ಪರಿಶೀಲನೆ ನಡೆಸಿ ವಾರದೊಳಗೆ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈಗಾಗಲೇ ನೀರಿನ ಸಮಸ್ಯೆ ಪರಿಹರಿಸಲು ನಾಲ್ಕು ಕೊಳವೆಬಾವಿ ಕೊರೆಯಿಸಲಾಗಿದೆ. ಅದರಲ್ಲಿ ಎರಡು ಕೊಳವೆಬಾವಿಗಳಿಗೆ ನೀರು ಬಿದ್ದಿದೆ. ಅದರಿಂದ ನೀರು ಪೊರೈಕೆ ಮಾಡಲಾಗುವುದು’ ಎಂದರು.

‘ಗಣ್ಯ ವ್ಯಕ್ತಿಗಳೆಂದು ಹೇಳಿಕೊಳ್ಳವವರು ಕೊಳವೆಬಾವಿ ಮತ್ತು ಸರ್ಕಾರಿ ನಳಗಳಿಂದ ನೇರವಾಗಿ ಮನೆಗೆ ಪೈಪ್‌ಲೈನ್‌ ಜೋಡಣೆ ಮಾಡಿಕೊಂಡಿದ್ದಾರೆ. ಅಂಥಹ ವ್ಯಕ್ತಿಗಳನ್ನು ಗುರುತಿಸಿ ತೆರವುಗೊಳಿಸಬೇಕು. ಅದರಿಂದ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದೆ’  ಎಂದು ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ ಆರೋಪಿಸಿದರು.

ನಂತರ ಕುಡಿಯುವ ನೀರಿನ ಕಾಮಗಾರಿ, ಸಾರ್ವಜನಿಕ ಶೌಚಾಲಯಗಳು, ಚರಂಡಿ ಕಾಮಗಾರಿ, ಘನತ್ಯಾಜ ವಸ್ತು ನಿರ್ವಹಣೆ, ಆಸ್ತಿಗಳ ನಿರ್ವಹಣೆ, ರಸ್ತೆ ನಿರ್ವಹಣೆ, ಬೀದಿ ದೀಪ ಅಳವಡಿಕೆ, ಸ್ಮಶಾನ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ  ಸುಮಾರು ₹72.78 ಲಕ್ಷಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ಸದಸ್ಯರು ಒಮ್ಮತ ವ್ಯಕ್ತಪಡಿಸಿದರು.

‘ಎನ್‌.ಬಿ.ರಾಣೋಜಿ, ವಿರೂಪಾಕ್ಷಪ್ಪ ರಾಣೋಜಿ, ಎಂ.ಬಿ.ರಾಣೋಜಿ, ನಿಂಗಪ್ಪ ರಾಣೋಜಿ, ಮೋಹನ ಮಂಗಳಾರ್ತಿ, ಯಲ್ಲಪ್ಪ ಸುಂಕದ, ಮಾಲತೇಶ ರಾಣೋಜಿ ಅವರಿಂದ ಸುಮಾರು ₹11.33.600 ಲಕ್ಷ ಬಾಕಿ ಬರಬೇಕಾಗಿದೆ. ಶುದ್ದ ಕುಡಿಯುವ ನೀರಿನ ಘಟಕದ ಜಗದೀಶ ಗಿಡ್ಡಣ್ಣವರ, ರಾಜು ವನಹಳ್ಳಿ ಅವರಿಂದ ಸುಮಾರು ₹1.19.500 ಲಕ್ಷ ಬಾಕಿ ಹಣ ಬರಬೇಕಾಗಿದ್ದು, ಇದನ್ನು ತಕ್ಷಣ ವಸೂಲಿ ಮಾಡಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಿದ್ದಿಕ್‌ ಖತಿಬ ಅವರನ್ನು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಶಾಬಿರಾಭಿ ಯಲಗಚ್ಚ ಅಧ್ಯಕ್ಷೆ ವಹಿಸಿದ್ದರು. ಉಪಾಧ್ಯಕ್ಷೆ ವಿದ್ಯಾ ಕೂಲಿ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಸರ್ವ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry