ಕೆಲಸ ಮಾಡಿದ್ದೇವೆ ಕೂಲಿ ಕೊಡಿ: ವಿಜಯ

7
ಹೊಳಕುಂದಾ, ಹರಕಂಚಿ, ಯಕ್ಕಂಚಿ, ಕಟ್ಟೊಳ್ಳಿ ರಸ್ತೆ ಕಾಮಗಾರಿಗೆ ಚಾಲನೆ

ಕೆಲಸ ಮಾಡಿದ್ದೇವೆ ಕೂಲಿ ಕೊಡಿ: ವಿಜಯ

Published:
Updated:

ಕಮಲಾಪುರ: ‘ಜಿ.ರಾಮಕೃಷ್ಣ ಶಾಸಕರಾಗಿ ಆಯ್ಕೆಯಾದಾಗಿನಿಂದ ಕ್ಷೇತ್ರದೆಲ್ಲೆಡೆ ಅಭಿವೃದ್ಧಿಯ ಹೊಳೆ ಹರಿದಿದೆ. ನಾವು ಸಮರ್ಪಕವಾಗಿ ಕೆಲಸ ಮಾಡಿದ್ದೇವೆ. ಬರುವ ಚುನಾವಣೆಯಲ್ಲಿ ನೀವು ಅದಕ್ಕೆ ತಕ್ಕ ಕೂಲಿ ಕೊಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಜಿ.ಆರ್‌.ವಿಜಯಕುಮಾರ ಮನವಿ ಮಾಡಿದರು.

ಸಮೀಪದ ಹೊಳಕುಂದಾ ಗ್ರಾಮ ದಲ್ಲಿ ಮಂಗಳವಾರ ಆಯೋಜಿಸಿದ್ದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.

ಅನೇಕ ಕಡೆಗಳಲ್ಲಿ ಕೂಡು ರಸ್ತೆ ನಿರ್ಮಿಸಿ ತಾಂಡಾ, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿದ್ದೇವೆ. ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಶಾಲಾ ಕಟ್ಟಡ, ಸಮುದಾಯ ಭವನ ಸೇರಿದಂತೆ ನಗರೋತ್ಥಾನ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಅನೇಕ ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಜಾತಿ, ಧರ್ಮ, ಹಣ, ಹೆಂಡಕ್ಕೆ ಮಾರು ಹೋಗದೆ ಅಭಿವೃದ್ಧಿಪರ ವ್ಯಕ್ತಿಗಳಿಗೆ ನೀವು ಮತ ನೀಡಬೇಕು. ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.

ಎಚ್‌ಕೆಆರ್‌ಡಿಬಿ ಮೈಕ್ರೋ ಯೋಜನೆಯ ₹4.50 ಕೋಟಿ ಪ್ಯಾಕೇಜ್‌ನಲ್ಲಿ ಹೊಳಕುಂದಾ ₹1.50, ಹರಕಂಚಿ ₹1 ಕೋಟಿ, ಯಕ್ಕಂಚಿ ₹1ಕೋಟಿ, ಕಟ್ಟೋಳ್ಳಿಗೆ ₹1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಜಿ.ರಾಮಕೃಷ್ಣ ಶಂಕುಸ್ಥಾಪನೆ ನೆರವೇರಿಸಿ ದರು. ಸುಮಾರು ₹75ಲಕ್ಷ ವೆಚ್ಚದ ಕಟ್ಟೋಳ್ಳಿ ಗ್ರಾಮ ವಿಕಾಸ ಯೋಜನೆಗೆ ಅವರು ಚಾಲನೆ ನೀಡಿದರು.

ವಿಜಯಕುಮಾರ ಕಾಂಗ್ರೆಸ್‌ ಅಭ್ಯರ್ಥಿ: ‘ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಶಾಸಕರ ಪುತ್ರ ವಿಜಯಕುಮಾರ ಅವರನ್ನು ಆಯ್ಕೆ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಪಕ್ಷದಿಂದ ಟಿಕೆಟ್‌ ಪಡೆದು ಚುನಾವಣೆ ಸ್ಪರ್ಧಿಸಲಿದ್ದಾರೆ’ ಎಂದು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ವೈಜನಾಥ ತಡಕಲ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕ ರಾಮಕೃಷ್ಣ ಅವರ ಜತೆ ಗೂಡಿ ಕ್ಷೇತ್ರದೆಲ್ಲಡೆ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಂಡಿದ್ದಾರೆ. ಇದನ್ನು ಮನಗಂಡು ತಾವು ವಿಜಯಕುಮಾರ ಅವರನ್ನು ಬೆಂಬಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಬೇಕು’ ಎಂದರು.

ಗ್ರಾ.ಪಂ ಅಧ್ಯಕ್ಷ ಅಂಬಾರಾಯ ಸಿ.ಮಾಳಗೆ, ಪಿಎಂಜಿಎಸ್‌ವೈ ಸಹಾಯಕ ಎಂಜಿನಿಯರ್ ಎಸ್‌.ಜೆ.ಖಾದ್ರಿ, ಮೋತಕಪಲ್ಲಿ, ಗುಂಡಪ್ಪ ಮೋಳಕೇರಿ, ಎಪಿಎಂಸಿ ನಿರ್ದೇಶಕ ಮಹಾದೇವ ಬಬಲಾದ, ನಿಜಪ್ಪ ಕಾಂಬಳೆ, ಹಣಮಂತ ಚಿನ್ನಾ, ಗುಂಡಪ್ಪ ಸಿರಡೋಣ, ಯುವ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಹರಸೂರ ಇದ್ದರು.

**

ರಸ್ತೆ ನಿರ್ಮಾಣದ ನಂತರ 5ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದ್ದು, 6ನೇ ವರ್ಷ ಡಾಂಬರೀಕರಣ ಮಾಡಿಕೊಡಬೇಕು. ಗುಣಮಟ್ಟದ ಕಾಮಗಾರಿಗೆ ಗ್ರಾಮಸ್ಥರು ಸಹಕರಿಸಬೇಕು.

ಎಸ್‌.ಜೆ.ಖಾದ್ರಿ, ಸಹಾಯಕ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry