ಧೂಪಕ್ಕೆ ಎದ್ದ ಹೆಜ್ಜೇನು: ಐವರಿಗೆ ಗಂಭೀರ ಗಾಯ

7

ಧೂಪಕ್ಕೆ ಎದ್ದ ಹೆಜ್ಜೇನು: ಐವರಿಗೆ ಗಂಭೀರ ಗಾಯ

Published:
Updated:

ಬಂಗಾರಪೇಟೆ: ತಾಲ್ಲೂಕಿನ ತಿಮ್ಮಾಪುರ ಬಳಿ ಹೆಜ್ಜೇನು ದಾಳಿಗೆ ಸಿಲುಕಿ, 5 ಮಂದಿ ಗಂಭೀರ ಗಾಯಗೊಂಡಿದ್ದು, ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಗ್ರಾಮದ ಸುಬ್ಬರಾಯಪ್ಪ, ಕಾರ್ತಿಕ್, ಕಿರಣ್, ಸೌಮ್ಯ, ಅಶ್ವಿನಿ ಅವರ ಮೇಲೆ ಹೆಜ್ಜೇನು ತೀವ್ರ ದಾಳಿ ನಡೆಸಿದೆ.

ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಸಮೀಪದ ಮುನೀಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದ ಸಂದರ್ಭ ಆಲದ ಮರದಲ್ಲಿದ್ದ ಜೇನು ನೊಣಗಳು ದಾಳಿ ನಡೆಸಿವೆ. ಗ್ರಾಮದ ಏಳೆಂಟು ಕುಟುಂಬ ಪೂಜೆಯಲ್ಲಿ ಭಾಗವಹಿಸಿದ್ದವು ಎಂದು ಮೂಲಗಳು ತಿಳಿಸಿವೆ.

ಆಲದ ಮರದಲ್ಲಿ ನಾಲ್ಕೈದು ಹೆಜ್ಜೇನು ಗೂಡುಗಳಿದ್ದವು. ಊದುಬತ್ತಿ ಹೊಗೆ, ನೈವೇದ್ಯ ಮಾಡಲು ಬಳಸಿದ ಒಲೆಯಿಂದ ಹೊಮ್ಮಿದ ಹೊಗೆಗೆ ನೊಣಗಳು ಗೂಡಿನಿಂದ ಚದುರಿ, ಜನರನ್ನು ಕಚ್ಚಿದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 11 ಜನರು ಚಿಕಿತ್ಸೆ ಪಡೆದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯ ಶಂಕರ್‌ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry