ಎಡಬಿಡಂಗಿ ಶಿಕ್ಷಣಕ್ಕಿಂತ ಅನಕ್ಷರತೆಯೇ ಲೇಸು

7
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ತೇಜಸ್ವಿ ಕಟ್ಟಿಮನಿ ಹೇಳಿಕೆ

ಎಡಬಿಡಂಗಿ ಶಿಕ್ಷಣಕ್ಕಿಂತ ಅನಕ್ಷರತೆಯೇ ಲೇಸು

Published:
Updated:
ಎಡಬಿಡಂಗಿ ಶಿಕ್ಷಣಕ್ಕಿಂತ ಅನಕ್ಷರತೆಯೇ ಲೇಸು

ಕೊಪ್ಪಳ: ಎಡಬಿಡಂಗಿ ಶಿಕ್ಷಣ ಪಡೆಯುವುದಕ್ಕಿಂತ ನಾವು ಅನಕ್ಷರಸ್ಥರಾಗಿಯೇ ಉಳಿಯುವುದು ಉತ್ತಮ ಎಂದು ಮಧ್ಯಪ್ರದೇಶ ಅಮರ ಕಂಟಕದ ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಮಾರ್ಮಿಕವಾಗಿ ಹೇಳಿದರು.

ತಾಲ್ಲೂಕಿನ ಅಳವಂಡಿಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಇಂದು ನೀಡುತ್ತಿರುವ ಶಿಕ್ಷಣದಿಂದಾಗಿ ಮಕ್ಕಳು ನಾಡಿನಲ್ಲಿಯೇ ಪರದೇಶಿಗಳಾಗಿ ಉಳಿಯುತ್ತಿದ್ದಾರೆ. ನಾವು ಪಡೆಯುತ್ತಿರುವ ಶಿಕ್ಷಣ ನಮ್ಮನ್ನು ಮರಳಿ ಊರಿಗೆ ಹೋಗಲು ಬಿಡುತ್ತಿಲ್ಲ. ತಮ್ಮ ತಾಯಿ ತಂದೆಯನ್ನು ಒಪ್ಪಿಕೊಳ್ಳಲು, ಕರೆಯಲು ತಯಾರಾಗಿರುವುದಿಲ್ಲ. ಇಂಥ ಎಡಬಿಡಂಗಿ ಶಿಕ್ಷಣ ನಮಗೆ ಬೇಕೇ' ಎಂದು ಪ್ರಶ್ನಿಸಿದರು.

'ಭಾರತದ ಹಳ್ಳಿಗಳಲ್ಲಿ ಹುಟ್ಟಿದ ನಾವು ಯಾರೂ ಕೂಡಾ ಶ್ರೀಮಂತರ ಮಕ್ಕಳಲ್ಲ. ಆರ್ಥಿಕವಾಗಿ ಎಲ್ಲರೂ ಬಡವರೇ. ಆದರೆ, ನಾವು ಕೂಡಾ ಕನಸು ಕಾಣಲು ಸಾಧ್ಯ. ಐಎಎಸ್‌ ಅಧಿಕಾರಿ, ವಿಶ್ವವಿದ್ಯಾಲಯದ ಕುಲಪತಿ, ದೊಡ್ಡ ವಿಜ್ಞಾನಿ ಹೀಗೆ ಏನೆಲ್ಲಾ ಆಗಬಹುದು. ಬಡತನ ಅಥವಾ ಇಂಗ್ಲಿಷ್‌ ಭಾಷೆ ನಮಗೆ ಮಿತಿ ಅಲ್ಲ. ನಾನು ಶಿಕ್ಷಣ ಪಡೆದು ಮುಂದೆ ಬರಬೇಕು. ಎನ್ನುವ ಕನಸು ಕಾಣುವ ಛಲ ಇರಬೇಕು' ಎಂದರು.

'ಅಳವಂಡಿಯಂಥ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಶಿಕ್ಷಣದತ್ತ ಸೆಳೆಯಲು ಶಿಕ್ಷಕರಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಸಾಮಾನ್ಯ ಶಿಕ್ಷಕರನ್ನು ಸ್ಫೂರ್ತಿದಾಯಕ ಶಿಕ್ಷಕರನ್ನಾಗಿಸಬೇಕಿದೆ. ಕುಗ್ರಾಮದ ಮಕ್ಕಳು ಬೆಂಗಳೂರು, ದೆಹಲಿ, ಕಲ್ಕತ್ತಾದ ಮಕ್ಕಳೊಡನೆ ಸ್ಪರ್ಧಿಸುವಂತಾಗಬೇಕು. ಮಾತೃಭಾಷಾ ಜ್ಞಾನವನ್ನು ಹೆಚ್ಚಿಸಬೇಕು. ಇಂಗ್ಲಿಷ್‌ ಜ್ಞಾನವನ್ನೂ ತುಂಬಬೇಕು. ಈ ಮೂಲಕ ನಾವು ಹೊಸ ಶೈಕ್ಷಣಿಕ ಸಮಾಜವನ್ನು ನಿರ್ಮಿಸಲು ಸಾಧ್ಯ' ಎಂದರು.

'ಪ್ರತಿಯೊಂದು ಸೌಲಭ್ಯಕ್ಕೂ ಸರ್ಕಾರದ ಹಣವೊಂದನ್ನೇ ಆಶ್ರಯಿಸುತ್ತಾ ಕೂರಬಾರದು. ಊರಿನ ಗಣ್ಯರು, ಉಳ್ಳವರು, ದಾನಿಗಳು, ವ್ಯಾಪಾರಿಗಳು ಸ್ವಲ್ಪ ನೆರವು ನೀಡಿದರೆ ಚಿಕ್ಕಚಿಕ್ಕ ಯೋಜನೆಗಳನ್ನು ನಾವೇ ಮಾಡಬಹುದು' ಎಂದು ಸಲಹೆ ಮಾಡಿದರು.

ಸಮ್ಮೇಳನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, '19ನೇ ಶತಮಾನದಲ್ಲಿ ನಾವು ಕನ್ನಡವನ್ನು ಬೆಳೆಸಲು ಆಸಕ್ತಿ ತೋರಲಿಲ್ಲ. ಬೇರೆ ಭಾಷೆಯ ಗುಲಾಮರಾದೆವು. ಈ ಪರಿಣಾಮವಾಗಿ ಕನ್ನಡ ಸೊರಗುತ್ತಾ ಬಂದಿತು. ಕನ್ನಡದಲ್ಲಿ ಓದಿದರೆ ದಡ್ಡರು ಎಂದೂ, ಇಂಗ್ಲಿಷ್‌ ಎಂದರೆ ಶ್ರೇಷ್ಠ

ವಾದದ್ದು ಎಂಬ ಭಾವನೆ ಸಲ್ಲದು' ಎಂದರು.

ಶಾಸಕ ಕೆ.ರಾಘವೆಂದ್ರ ಹಿಟ್ನಾಳ ಮಾತನಾಡಿ, 'ಕನ್ನಡದ ನೆಲ, ಜಲ ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಸಮ್ಮೇಳನಗಳು ಮಾಡಬೇಕಿದೆ. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಜಾರಿಗೆ ಬರಬೇಕು' ಎಂದು ಹೇಳಿದರು.

ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ಶೇಖರಗೌಡ ಮಾಲಿ ಪಾಟೀಲ ಸ್ವಾಗತಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ, ಕೆ.ಆರ್‌.ಕುಲಕರ್ಣಿ, ಗಿರೀಶ ಪಾನಘಂಟಿ, ಅಮರೇಶ ಕರಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಕೀರವ್ವ ಜಂತ್ಲಿ ಇದ್ದರು.

ಸಾಮಾಜಿಕ ತಲ್ಲಣಗಳ ಬಗ್ಗೆ ತೇಜಸ್ವಿ ಪ್ರಶ್ನೆ

ತುಂಗಭದ್ರೆಗೆ ಅಣೆಕಟ್ಟೆ ಕಟ್ಟಿದ ಬಳಿಕ ನಮಗೇನು ಲಾಭ- ನಷ್ಟವಾಗಿದೆ? ಊರು, ಕೇರಿ, ಮನೆ, ಜಮೀನು ಕಳೆದುಕೊಂಡವರಿಗೆ ಪುನರ್ವಸತಿ ಆಗಿದೆಯೇ? ಸಾಮಾಜಿಕ ಧಾರ್ಮಿಕ ತಲ್ಲಣಗಳು ಕಡಿಮೆ ಆಗಿವೆಯೇ ಎಂದು ತೆಜಸ್ವಿ ಪ್ರಶ್ನಿಸಿದರು.

ಕುಕನೂರು ಭಾಗದಲ್ಲಿ ರೈತರು ತಮ್ಮ ಜಮೀನನ್ನು ಗ್ರಾನೈಟ್‌ ಗಣಿಗಾರಿಕೆಗೆ ಕೊಟ್ಟರು. ಬಂದ ಹಣ ದುಂದುವೆಚ್ಚ ಮಾಡಿ ಈಗ ಮತ್ತೆ ಸಂಕಟದಲ್ಲಿದ್ದಾರೆ. ಗಣಿಗಾರಿಕೆಯ ಪರಿಣಾಮ ಏನು? ಸಾಮಾಜಿಕ ಸಂಬಂಧಗಳಲ್ಲಾದ ತೊಡಕುಗಳು, ಯುವಜನಾಂಗದ ಬದುಕು ನರಕವಾಗಿರುವುದು,  ಜನರಿಗೆ ಲೈಂಗಿಕ ನಿಶ್ಯಕ್ತಿ ಉಂಟಾಗಿರುವುದು, ಅವರಿಗೆ ವೈದ್ಯಕೀಯ, ಸಾಮಾಜಿಕ ಭದ್ರತೆ, ಶೈಕ್ಷಣಿಕ ಸೌಲಭ್ಯಗಳನ್ನು ಗಣಿಗಾರಿಕೆಯವರು ಒದಗಿಸಿದ್ದಾರೆಯೇ ಎಂದರು.

ಸಮಯಪಾಲನೆಯಲ್ಲಿ ವಿಫಲ

ನಿಗದಿತ ಸಮಯಕ್ಕೆ ಸರಿಯಾಗಿ ಸಮಾರಂಭ ಆರಂಭವಾಗಲಿಲ್ಲ. ಮಧ್ಯಾಹ್ನ 12.30ರವರೆಗೆ ಮೆರವಣಿಗೆಯಲ್ಲೇ ಕಾಲಹರಣ ನಡೆಯಿತು. ಸಚಿವರು ಶಾಸಕರ ಭಾಷಣ ಮುಗಿದ ಬಳಿಕ ಅರ್ಧಕ್ಕರ್ಧ ಪ್ರೇಕ್ಷಕರು ಹೊರಟುಬಿಟ್ಟರು. ಗೋಷ್ಠಿಗಳಿಗೆ ಶ್ರೋತೃಗಳ ಕೊರತೆ ಕಾಣಿಸಿತು. ಸಮಯ ಪಾಲನೆಗೆ ಸಂಘಟಕರು ಮಹತ್ವ ಕೊಡಲಿಲ್ಲ ಎಂಬ ಟೀಕೆ ಸಾಹಿತ್ಯಾಸಕ್ತರಿಂದ ಕೇಳಿಬಂದಿತು.

**

ಗ್ರಂಥಾಲಯ ನನ್ನ ನಿಜವಾದ ಗುರು. ಸುಸಜ್ಜಿತ ಗ್ರಂಥಾಲಯ ಊರಲ್ಲಿದ್ದರೆ ಅಲ್ಲಿ ವಿಶ್ವವೇ ನೆಲೆಸಿರುತ್ತದೆ.

-ಪ್ರೊ.ತೇಜಸ್ವಿ ಕಟ್ಟಿಮನಿ, ಕೊಪ್ಪಳ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry