ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜಾಗೊಳಿಸಿದ್ದ ಸಿಬ್ಬಂದಿ ಮರುನೇಮಕ

ನ್ಯಾಯಾಲಯ ಆದೇಶದ ಹಿನ್ನೆಲೆ; ಮಹಾರಾಣಿ ಕಾಲೇಜಿನ ಆಡಳಿತ ಮಂಡಳಿಯಿಂದ ಕ್ರಮ
Last Updated 21 ಮಾರ್ಚ್ 2018, 11:50 IST
ಅಕ್ಷರ ಗಾತ್ರ

ಮೈಸೂರು: ನ್ಯಾಯಾಲಯವು ಆದೇಶಿಸಿರುವ ಹಿನ್ನೆಲೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯು ವಜಾಗೊಳಿಸಿದ್ದ ಐವರು ಅಡುಗೆ ಸಿಬ್ಬಂದಿಯನ್ನು ಮರುನೇಮಕ ಮಾಡಿಕೊಳ್ಳಲಾಗಿದೆ.

ಕಾಲೇಜಿನ ಹಾಸ್ಟೆಲ್‌ನಲ್ಲಿ ಮುಖ್ಯ ಅಡುಗೆಯವರಾಗಿದ್ದ ಸಿದ್ದರಾಜು, ಸಹಾಯಕ ಅಡುಗೆಯವರಾದ ಲಕ್ಷ್ಮಣ, ರೇಣುಕಾ, ಲಕ್ಷ್ಮಿ ಮತ್ತು ಸ್ವಚ್ಛತಾ ಸಿಬ್ಬಂದಿ ರವಣಮ್ಮ ಮರುನೇಮಕಗೊಂಡವರು. ಇವರ ಬಾಕಿ ವೇತನದಲ್ಲಿ ಶೇ 50ರಷ್ಟು ಹಣವನ್ನು ಕಾಲೇಜಿನ ಆಡಳಿತ ಮಂಡಳಿ ನೀಡಿದ್ದು, ಪೀಠೋಪಕರಣ ಜಪ್ತಿ ಆದೇಶದಿಂದ ಕಾಲೇಜು ಪಾರಾಗಿದೆ.

ವೃತ್ತಿಲೋಪ ಅಡಿಯಲ್ಲಿ ಈ ಐವರು ಸಿಬ್ಬಂದಿಯನ್ನು ಕಾಲೇಜಿನ ಆಡಳಿತ ಮಂಡಳಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಸಿಬ್ಬಂದಿ, ಕಾಲೇಜಿನ ಪ್ರಾಂಶುಪಾಲ, ಹಾಸ್ಟೆಲ್ ವಾರ್ಡನ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಆಡಳಿತ ಮಂಡಳಿಯು ಆದೇಶ ಪಾಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಮೈಸೂರಿನ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ (ಹಿರಿಯ ಶ್ರೇಣಿ) ನ್ಯಾಯಾಲಯದಲ್ಲಿ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕಾರ್ಮಿಕ ನ್ಯಾಯಾಲಯದ ಆದೇಶ ಪಾಲಿಸದ ಕಾಲೇಜಿನ ಪಿಠೋಪಕರಣ ಜಪ್ತಿಗೆ ಆದೇಶ ನೀಡಿದೆ. ಇದಕ್ಕೂ ಮುನ್ನ ಕಾಲೇಜಿನ ಆಡಳಿತ ಮಂಡಳಿಯು ಕಾರ್ಮಿಕ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ, ಸಿಬ್ಬಂದಿ ಪರ ವಕೀಲರಾದ ಎಸ್.ಕಮಲಾ, ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಬಂದ ನ್ಯಾಯಾಲಯದ ಅಮೀನರು ಆದೇಶದ ಪ್ರತಿ ನೀಡಿ ಪೀಠೋಪಕರಣ ಜಪ್ತಿಗೆ ಮುಂದಾದರು. ಕೂಡಲೇ ಜಪ್ತಿ ಮಾಡದಂತೆ ಮನವಿ ಮಾಡಿದ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿತ ಸಭೆ ನಡೆಸಿ
ಸಿಬ್ಬಂದಿಯ ಮರುನೇಮಕ ಹಾಗೂ ಬಾಕಿವೇತನ ನೀಡುವುದಾಗಿ ತಿಳಿಸಿದರು.

ತಕ್ಷಣಕ್ಕೆ ₹ 3.05 ಲಕ್ಷ ಮೊತ್ತದ ಚೆಕ್‌ ನೀಡಿದರು. ಹಾಗಾಗಿ, ಅಮೀನರು ಜಪ್ತಿ ಮಾಡಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT