ಬದುಕಿಗೆ ಭದ್ರತೆ ನೀಡದ ಅಭಿವೃದ್ಧಿ ವ್ಯರ್ಥ

7
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್.ಟಿ. ಬಳಿಗಾರ್ ಅಭಿಮತ

ಬದುಕಿಗೆ ಭದ್ರತೆ ನೀಡದ ಅಭಿವೃದ್ಧಿ ವ್ಯರ್ಥ

Published:
Updated:

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ, ಕಟ್ಟಡ ನಿರ್ಮಿಸಲಾಗಿದೆ. ಆದರೆ, ಜನರ ಬದುಕಿಗೆ ಭದ್ರತೆ ನೀಡುವ ಯೋಜನೆಗಳು ಸಾಕಾರಗೊಂಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಬಳಿಗಾರ್ ದೂರಿದರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತತ 6 ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದರೂ, ಶಾಶ್ವತ ಯೋಜನೆಗಳನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಶೇ 85ರಷ್ಟು ಜನರು ಕೃಷಿಕರು. ಆದರೆ, ವ್ಯವಸಾಯಕ್ಕೆ ಪೂರಕವಾದ ನೀರಾವರಿ ಸೌಲಭಗಳಿಲ್ಲ. 1.82 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಂಜನಾಪುರ ಹಾಗೂ 0.72 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಅಂಬಳಿಗೊಳ್ಳ ಜಲಾಶಯ ಹೊರತುಪಡಿಸಿದರೆ. ಹೊಸ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ವ್ಯಾಪಾರ, ಉದ್ಯೋಗದ ಮೇಲೂ ದುಷ್ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಕ್ಕುಪತ್ರ ಕೋರಿ 11ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇದುವರೆಗೂ ನಿರೀಕ್ಷೆಯಷ್ಟು ಹಕ್ಕುಪತ್ರ ನೀಡಿಲ್ಲ ಎಂದರು.

ಈ ಬಾರಿ ಬದಲಾವಣೆ ಗಾಳಿ ಬೀಸಲಿದೆ. ಶಿಕಾರಿಪುರದ ಜನತೆ ಅವಕಾಶ ನೀಡಿದರೆ ಕುಮಾರಸ್ವಾಮಿ ಅವರ ಕೈ ಬಲಪಡಿಸಬಹುದು. ಅವರು ಮುಖ್ಯಮಂತ್ರಿಯಾದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವರು. ರೈತನ ಬೆಳೆಗೆ ಉತ್ತಮ ಬೆಲೆ ಕಲ್ಪಿಸುವರು ಎಂದು ಭರವಸೆ ನೀಡಿದರು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

‘ಸಿರಿಗೆರೆ ಶ್ರೀ ಆಶಯದಂತೆ ನಡೆಯಲಿ’

ಸಿರಿಗೆರೆ ಸ್ವಾಮೀಜಿ ಹೇಳಿದಂತೆ ಕ್ಷೇತ್ರದಲ್ಲಿ ಯಾವುದೇ ಆಮಿಷಕ್ಕೆ ಅವಕಾಶ ಇರಬಾರದು. ಪ್ರಾಮಾಣಿಕ ಚುನಾವಣೆ ನಡೆಸಲು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರಚಾರ ಮುಗಿಸಿದ ನಂತರ ಮಠದಲ್ಲಿ ವಾಸ್ತವ್ಯ ಹೂಡಬೇಕು. ಯಡಿಯೂರಪ್ಪ ಅವರೂ ಈ ಸಲಹೆಗೆ ಸಮ್ಮತಿಸಿ ಮೇಲ್ಪಂಕ್ತಿ ಹಾಕಬೇಕು ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry