ಜನರ ನಿರೀಕ್ಷೆಗೆ ತಕ್ಕಂತೆ ಪ್ರಣಾಳಿಕೆ ತಯಾರಿ

7
ಜನಮತ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ

ಜನರ ನಿರೀಕ್ಷೆಗೆ ತಕ್ಕಂತೆ ಪ್ರಣಾಳಿಕೆ ತಯಾರಿ

Published:
Updated:

ಶಿವಮೊಗ್ಗ: ಬಿಜೆಪಿ ಜನರ ನಿರೀಕ್ಷೆಗೆ ತಕ್ಕಂತೆ ಪ್ರಣಾಳಿಕೆ ರೂಪಿಸಲಿದೆ. ಪ್ರಣಾಳಿಕೆಯಂತೆಯೇ ಅಭಿವೃದ್ಧಿ ಕೆಲಸ ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಗೋಪಿ ವೃತ್ತದಲ್ಲಿ ಮಂಗಳವಾರ ಶಿವಮೊಗ್ಗ ನಗರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪ್ರಣಾಳಿಕೆ ಕುರಿತು ಮಾಹಿತಿ, ಜನಮತ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿದ್ದವು. ಕಾಂಗ್ರೆಸ್ ಆಧಿಕಾರ ಹಿಡಿದ ನಂತರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಈ ಬಾರಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ, ಯೋಜನೆ ಕೈಗೊಳ್ಳುವುದು ಪಕ್ಷದ ಆದ್ಯತೆ ಹಾಗಾಗಿ, ಪ್ರಣಾಳಿಕೆ ರೂಪಿಸಲು ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಜನರು ತಮ್ಮ ಕ್ಷೇತ್ರದ ಅಭಿವೃದ್ಧಿ ಹೇಗೆ ಇರಬೇಕು ಎಂದು ಅಭಿಪ್ರಾಯ ನೀಡಿದ್ದಾರೆ ಎಂದರು.

ಪ್ರತಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲು ಪ್ರಣಾಳಿಕೆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿ ಕಾರ್ಯಗತಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ಎಂ. ಶಂಕರ್, ನಗರ ಸಂಚಾಲಕ ಸಂತೋಷ್ ಬಳ್ಳೇಕೆರೆ, ಮುಖಂಡರಾದ ಎನ್.ಜೆ. ರಾಜಶೇಖರ್, ಜ್ಞಾನೇಶ್ವರ್, ರಮೇಶ್, ರೇಣುಕಾ ನಾಗರಾಜ್, ಸುರೇಖಾ ಮುರಳೀಧರ್, ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು.

‘ಧರ್ಮ ವಿವಾದ: ಜನರಿಂದ ತಕ್ಕ ಪಾಠ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರ ರಾಜಕಾರಣವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ವೀರಶೈವ–ಲಿಂಗಾಯತ ವಿವಾದ ಹುಟ್ಟುಹಾಕಿದ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತರ ಮಧ್ಯೆ ಬಿರುಕು ಮೂಡಿಸಿದರೆ ಮತವಾಗಿ ಪರಿವರ್ತನೆಯಾಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಸಮಾಜ ಒಡೆದವರು ಅದರ ಫಲ ಅನುಭವಿಸುತ್ತಾರೆ’ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry