ನಮೋ ಎಂದರೆ ನಮಗೇ ಮೋಸ

7
ರಾಹುಲ್ ಕೈ ಬಲಪಡಿಸಿ: ಪ್ರಮೋದ್ ಮಧ್ವರಾಜ್

ನಮೋ ಎಂದರೆ ನಮಗೇ ಮೋಸ

Published:
Updated:

ಉಡುಪಿ: ‘ದೇಶದಲ್ಲಿ ಹೊಸ ಗಾಳಿ ಬೀಸುತ್ತಿದ್ದು ಇಡೀ ದೇಶ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಡೆ ನೋಡುತ್ತಿದೆ. ಎಲ್ಲರೂ ಸೇರಿ ಯುವ ನಾಯಕನ ಕೈಯನ್ನು ಬಲಪಡಿಸೋಣ’ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಕಾಂಗ್ರೆಸ್ ಹಮ್ಮಿಕೊಂಡಿರುವ ಮೂರನೇ ಹಂತದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಪಡುಬಿದ್ರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ನಮೋ ಎಂದರೆ ನರೇಂದ್ರ ಮೋದಿ ಎಂದು ಅರ್ಥವಲ್ಲ, ನಮಗೇ ಮೋಸ ಎಂದು ಅವರು ಹೇಳಿದರು.

ಇಡೀ ವಿಶ್ವವೇ ಒಂದು ಕುಟುಂಬ ಎಂಬುದು ಭಾರತ ದೇಶದ ಆದರ್ಶವಾಗಿದೆ. ಅದನ್ನು ಅನುಷ್ಠಾನ ಮಾಡುವ ಕುಟುಂಬ ಇದ್ದರೆ ಅದು ನೆಹರೂ ಕುಟುಂಬ. ದೇಶದ 130 ಕೋಟಿ ಜನರನ್ನು ಒಟ್ಟಿಗೆ ಕರೆದುಕೊಂಡು ಮುಂದೆ ಹೋಗುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದು ಅವರು ಹೇಳಿದರು.

ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿನಿಧಿಸುತ್ತಿದ್ದ ಗೋರಖ್‌ಪುರ ಕ್ಷೇತ್ರದ ಉಪ ಚುನಾವಣೆಯಲ್ಲಿಯೇ ಬಿಜೆಪಿ ಸೋತಿದೆ. ಅವರ ಕ್ಷೇತ್ರವನ್ನೇ ಉಳಿಸಿಕೊಳ್ಳಲಾಗದು ಆದಿತ್ಯನಾಥ್ ಅವರು ಇಲ್ಲಿಗೆ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅವರ ಪರವಾಗಿ ಜನರು ಒಲವು ತೋರಿಸುತ್ತಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಶ್ರಮದ ಫಲವಾಗಿ ಉತ್ತಮ ಫಲಿತಾಂಶ ಬಂತು. ಆದರೆ ಕೇವಲ 9 ಸೀಟುಗಳ ಅಂತರದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಬಿಜೆಪಿ ಬಗ್ಗೆ ವಿಶ್ವಾಸ ಇಲ್ಲ ಎಂದು ಜನರು ಚುನಾವಣಾ ಫಲಿತಾಂಶದ ಮೂಲಕ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲ ಬ್ಲಾಕ್‌ಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಕಾಪುವಿನ ಎಲ್ಲ 203 ಬೂತ್‌ಗಳಿಂದಲೂ ಕಾರ್ಯಕರ್ತರು ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry