7

ಎಣ್ಣೆ ಕುದಿಯುವ ಮೊದಲೇ ಗೋಬಿ ಹಾಕಿದ್ದೆ

Published:
Updated:
ಎಣ್ಣೆ ಕುದಿಯುವ ಮೊದಲೇ ಗೋಬಿ ಹಾಕಿದ್ದೆ

ನಾನು ಒಬ್ಬಳೇ ಮಗಳು. ನನ್ನ  ಅಪ್ಪನಿಗೆ ಅವರು ವಿದ್ಯಾರ್ಥಿಯಾಗಿದ್ದಾಗ ಶೆಫ್‌ ಆಗಬೇಕು ಎಂದು ಆಸೆಯಿತ್ತಂತೆ. ಆದರೆ 20–25 ವರ್ಷಗಳ ಹಿಂದೆ ಶೆಫ್‌ ಕೆಲಸಕ್ಕೆ ಈಗಿನ ಹಾಗೆ ಬೇಡಿಕೆ ಇರಲಿಲ್ಲ. ಹಾಗಾಗಿ ಅಪ್ಪ ಕಾರ್ಪೊರೇಟ್‌ ಕಂಪೆನಿಗೆ ಸೇರಿಕೊಂಡರು. ಆದರೆ ಅಪ್ಪನಿಗೆ ವಿಭಿನ್ನವಾಗಿ ಅಡುಗೆ ಮಾಡುವ ಕ್ರೇಜ್‌.

ರಜೆ ಸಮಯದಲ್ಲಿ ಮನೆಯಲ್ಲೇ ಅವರ ಹೊಸ ಹೊಸ ಅಡುಗೆ ಪ್ರಯೋಗ ಇರುತ್ತಿತ್ತು. ನಾನು ಸ್ವತಂತ್ರವಾಗಿ ಒಬ್ಬಳೇ ಅಡುಗೆ ಮಾಡಿದ್ದು 8ನೇ ಕ್ಲಾಸಿನಲ್ಲಿದ್ದಾಗ. ಅಪ್ಪ ಒಂದು ಸಾರಿ ಕಿಚನ್‌ ಕೊಲ್ಹಾಪುರಿ ಮಾಡಿದ್ರು. ನಾನು ರುಚಿ ಕೆಟ್ಟದಾಗಿದೆ ಎಂದೆ. ಅಪ್ಪ ‘ನೀನೇ ಒಂದು ಬಾರಿ ಯಾವುದಾದರೂ ಅಡುಗೆ ಮಾಡು’ ಎಂದು ಸವಾಲು ಹಾಕಿದರು.

ನಾನು ಅದೇ ದಿನ ಸಂಜೆ ಮಾರ್ಕೆಟ್‌ಗೆ ಹೋಗಿ ಬೇಕಾದ ಸಾಮಾನುಗಳನ್ನು ತಗೊಂಡು ಬಂದು ಗೋಬಿ ಮಂಚೂರಿ ಮಾಡಲು ಹೊರಟೆ. ಹೂಕೋಸು ಕಟ್‌ ಮಾಡುವಾಗ ‘ಅಪ್ಪ ಹುಳ ಇರಬಹುದು’ ಎಂದು ಹೆದರಿಸಿದರು. ಆಮೇಲೆ ಹೇಗೋ ಕತ್ತರಿಸಿದೆ. ಅದಕ್ಕೆ ಮಸಾಲಾ ಮಾಡಿ ಮಿಶ್ರ ಮಾಡಿಟ್ಟೆ. ಗ್ಯಾಸ್‌ನಲ್ಲಿ ಎಣ್ಣೆ ಬಾಣಲೆ ಇಟ್ಟು ಅದು ಕುದಿಯುತ್ತಿದೆಯೇ ಎಂದು ಪರೀಕ್ಷೆ ಮಾಡದೇ ಹಾಗೇ ಗೋಬಿ ಹಾಕಿಬಿಟ್ಟೆ. ತಣ್ಣಗಿನ ಎಣ್ಣೆಗೆ ಹಾಕಿದ್ದಕ್ಕೆ ನೊರೆ ಜಾಸ್ತಿ ಬಿಡಲಾರಂಭಿಸಿತು. ಅಮ್ಮ ಬಂದು ಎಣ್ಣೆ ಕುದಿ ಹತ್ತಿದ ಮೇಲೆ ಹಾಕು ಅಂದರು. ಹೇಗೋ ಸರಿಯಾಯ್ತು. ಆಮೇಲೆ ಟೊಮೆಟೊ, ಈರುಳ್ಳಿ ಸಣ್ಣದಾಗಿ ಕತ್ತರಿಸಿ, ಸಾಸ್‌ ಹಾಕಿ ಎಲ್ಲಾ ರೆಡಿ ಮಾಡಿಕೊಂಡು ಗೋಬಿ ಮಂಚೂರಿ ರೆಡಿಯಾಯಿತು.

ಕೊನೆಗೆ ಗೋಬಿಯನ್ನು ಒಂದು ಪ್ಲೇಟ್‌ನಲ್ಲಿ ಅಪ್ಪನಿಗೆ ಹಾಕಿಕೊಟ್ಟೆ. ‘ಅಪ್ಪ ಚೆನ್ನಾಗಿದೆ. ಆದ್ರೆ ಉಪ್ಪು ಕಮ್ಮಿ’ ಅಂತ ಕಮೆಂಟ್‌ ಮಾಡಿದರು. ಅದಾದ ಮೇಲೆ ನಾನು ಆಗಾಗ ಹೊಸ ಅಡುಗೆ ಕಲಿಯುವ ಪ್ರಯತ್ನ ಮಾಡಿದೆ. ನಾನು ಹಸಿವಾದಾಗಲೆಲ್ಲಾ ಮ್ಯಾಗಿ ಮಾಡಿಕೊಂಡು ತಿಂತೀನಿ. ಒಂದು ಬಾರಿ ತರಕಾರಿ, ಚಿಕನ್‌, ಮೊಟ್ಟೆ ಹೀಗೆ ಬೇರೆ ಬೇರೆ ಪ್ರಯೋಗ ಮಾಡ್ತೀನಿ. ಎಲ್ಲವೂ ಚೆನ್ನಾಗಿರುತ್ತೆ. ನಾನು ಮಾಡುವ ಅಡುಗೆಯಲ್ಲಿ ಮ್ಯಾಗಿಯೇ ಅಪ್ಪ– ಅಮ್ಮನಿಗೆ ಇಷ್ಟ. ನಾವು ಹಬ್ಬದ ಸಮಯದಲ್ಲಿ ಮಾಡುವ ಶಾಹಿ ತುಕಡ ರೆಸಿಪಿಯನ್ನು ಇಲ್ಲಿ ಹೇಳುತ್ತೇನೆ.

ಶಾಹಿ ತುಕಡ ಮಾಡುವ ವಿಧಾನ

ಬೇಕಾದ ಸಾಮಗ್ರಿಗಳು:
ಬ್ರೆಡ್,ತುಪ್ಪ, ಹಾಲು 4 ಕಪ್, ಕೇಸರಿ ದಳ ಸ್ವಲ್ಪ, ಸಕ್ಕರೆ ಅರ್ಧ ಕಪ್, ಕಂಡೆನ್ಸ್ಡ್‌ ಹಾಲು 1 ಕಪ್, ಏಲಕ್ಕಿ ಪುಡಿ

ಮಾಡುವ ವಿಧಾನ: ಬಾಣಲೆಯಲ್ಲಿ ಅರ್ಧ ಕಪ್ ಸಕ್ಕರೆ ಹಾಕಿ ಅರ್ಧ ಕಪ್ ನೀರು ಹಾಕಿ ಸ್ವಲ್ಪ ಕೇಸರಿ ದಳ ಸೇರಿಸಿ ಕುದಿಸಿ. ಬಳಿಕ ಮೊದಲು ಬ್ರೆಡ್ಡನ್ನು ಅಂಚು ಕತ್ತರಿಸಿ ತ್ರಿಕೋನಾಕಾರದಲ್ಲಿ ಕತ್ತರಿಸಿ. ಅದನ್ನು ಸಣ್ಣ ಉರಿಯಲ್ಲಿ ತುಪ್ಪದಲ್ಲಿ ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಕರಿದ ಬ್ರೆಡ್ ತುಂಡುಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ. ಮೊದಲು ಚೂರು ಹಾಲಿಗೆ ಕೇಸರಿ ದಳಗಳನ್ನು ಹಾಕಿ ನೆನೆಯಲು ಬಿಡಿ.

ಒಂದು ಬಾಣಲೆಯಲ್ಲಿ 4 ಕಪ್ ಹಾಲನ್ನು ಹಾಕಿ ಬಿಸಿ ಮಾಡಿ. ಕುದಿಯುವಾಗ ಕಂಡೆನ್ಸ್‌ ಹಾಲು ಹಾಕಿ ಕೈಯಾಡುತ್ತಾ ಕುದಿಸಿ. ಹಾಲು ಗಟ್ಟಿಯಾಗುತ್ತಿದ್ದಂತೆ ಕೇಸರಿ ನೆನಸಿದ ಹಾಲನ್ನು ಹಾಕಿ ಏಲಕ್ಕಿ ಪುಡಿ ಹಾಕಬೇಕು. ಹಾಲು ಗಟ್ಟಿಯಾಗಿ ಮೊಸರಿನ ಹದಕ್ಕೆ ಬಂದಾಗ ಸ್ಲಿಮ್‌ ಗ್ಯಾಸ್‌ನಲ್ಲಿ ಕುದಿಸಬೇಕು. ಈಗ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದ ಬ್ರೆಡ್ ತುಂಡುಗಳನ್ನು ಹಾಲಿನಿಂದ ತಯಾರಿಸಿದ ಮಿಶ್ರಣದ ಜೊತೆಗೆ ಅದ್ದಬೇಕು. ಮೇಲಿಂದ ಒಣಹಣ್ಣುಗಳನ್ನು ಉದುರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry