‘ಸಮುದ್ರ’ ಸಾಂಬಾರು

7

‘ಸಮುದ್ರ’ ಸಾಂಬಾರು

Published:
Updated:
‘ಸಮುದ್ರ’ ಸಾಂಬಾರು

ಅಮ್ಮನಿಗೆ ನಾನೆಂದರೆ ಅಚ್ಚುಮೆಚ್ಚು. ಅಡಿಗೆ ಮನೆಯ ಕೆಲಸವನ್ನು ನನ್ನಿಂದ ಮಾಡಿಸುತ್ತಿರಲಿಲ್ಲ. ನನ್ನ ಓದು, ನೌಕರಿಯ ತಯಾರಿಯಲ್ಲಿಯೇ ಸಮಯ ನನಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ಅಡುಗೆಯ ಪ್ರಾಯೋಗಿಕ ಜ್ಞಾನ ಅಷ್ಟಕ್ಕಷ್ಟೆ.

ಒಂದು ಸಲ ನಮ್ಮಮ್ಮ ನೆಂಟರ ಮದುವೆಗೆ ಬೆಳಿಗ್ಗೆಯೇ ಹೋಗಬೇಕಾಗಿತ್ತು. ಅದಕ್ಕೆ ಅಮ್ಮ ಕುಕ್ಕರ್‌ನಲ್ಲಿ ಬೇಳೆ, ತರಕಾರಿ ಸೇರಿಸಿ ಬೇಯಿಸಿ ಇಟ್ಟಿದ್ದಳು. ಒಗ್ಗರಣೆ ಮಾಡಬೇಕನ್ನುವಷ್ಟುರಲ್ಲಿ ಮನೆಯ ಮುಂದೆ ಮದುವೆ ದಿಟ್ಟಣದ ಗಾಡಿ ಬಂತು. ನನಗೆ ಸಾಂಬಾರು ಮಾಡಿಕೊಳ್ಳಲು ಹೇಳಿ ಮದುವೆ ದಿಬ್ಬಣದಲ್ಲಿ ಸೇರಿಕೊಂಡಳು.

ಅಮ್ಮನೂ ಇಲ್ಲ ನಾನೊಬ್ಬಳೆ ತಾನೇ ಊಟ ಮಾಡುವುದು! ನಂತರ ಮಾಡಿದರಾಯ್ತು ಎಂದು ಕುಳಿತೆ. ಆದರೆ ಚುರುಗುಟ್ಟುವ ಹೊಟ್ಟೆ ಅಡುಗೆ ಮನೆಗೆ ಹೋಗಲು ಒತ್ತಾಯಿಸಿತು. ನನಗೆ ಸಾಂಬಾರು ಮಾಡುವ ರೀತಿ ಗೊತ್ತಿದೆಯಲ್ಲಾ ಪ್ರಯೋಗಿಸೋಣ ಎಂದು ಟೊಮೆಟೊ, ಬೆಳ್ಳುಳ್ಳಿ, ಕರಿಬೇವು ಒಗ್ಗರಣೆಗೆ ಹಾಕಿದೆ. ಪುಡಿಮಾಡಿದ ಕೊಬ್ಬರಿ, ಸಾಂಬಾರು ಮಸಾಲೆ, ಖಾರದಪುಡಿ ಸೇರಿಸಿ ಕತ್ತರಿಸಿಟ್ಟ ಕೊತ್ತಂಬರಿ ಹಾಕಿದೆ. ‘ರುಚಿಗೆ ತಕ್ಕಷ್ಟು’ ಉಪ್ಪು ಹಾಕಿದೆ. ಕುದಿಯುತ್ತಿರುವ ಸಾಂಬಾರು ಘಂ ಎನ್ನುವ ಪರಿಮಳ ಮನೆಪೂರ್ತಿ ತುಂಬಿತು. ಸಾಂಬಾರ್ ರೆಡಿ. ಸ್ವಯಂ ಪಾಕದ ಸ್ವಾದ ಸವಿಯಲು ಮುಂದಾದ ಕ್ಷಣದಲ್ಲಿಯೇ ನನ್ನ ಗೆಳತಿಯರಿಬ್ಬರು ನಮ್ಮ ಮನೆಗೆ ಬಂದರು. ‘ಊಟ ಮಾಡೋಣ’ ಎಂದು ಅವರನ್ನು ಆಹ್ವಾನಿಸಿ ಎಲೆ ಹಾಕಿದೆ. ಇನ್ನೇನು ಒಬ್ಬಳು ಅನ್ನ ಕಲಸಿ ಬಾಯಿಗಿಟ್ಟಿದ್ದಾಳೆ ಅಷ್ಟೇ ‘ಸಾಂಬಾರ್ ಸಮುದ್ರವಾಗಿದೆ’ ಎಂದು ಬಾಯಿಂದ ತುತ್ತನ್ನು ಹೊರಗಿಟ್ಟಳು. ‘ಸಾಂಬಾರಿಗೆ ಉಪ್ಪು ಹಾಕಿದ್ದೀಯಾ ಅಥವಾ ಕಡಾಯಿಯಲ್ಲಿ ಸಮುದ್ರವನ್ನೇ ತುಂಬಿದ್ದೀಯಾ’ ಎಂದು ಬೈಯಲು

ಆರಂಭಿಸಿದಳು.

ಅಮ್ಮ ಉಪ್ಪು ಹಾಕಿದ್ದು ನನಗೆ ಗೊತ್ತಿಲ್ಲದೇ ನಾನು ಮತ್ತಷ್ಟು ಉಪ್ಪು ಸಾಂಬಾರಿಗೆ ಸುರಿದಿದ್ದೇ ಈ ಅವಾಂತರಕ್ಕೆ ಕಾರಣವಾಗಿತ್ತು. ಅನಂತರ ಆ ಗೆಳತಿಯೇ ಸಮಾಧಾನ ಮಾಡಿದಳು. ಅನ್ನ, ಸಾಂಬಾರಿಗೆ ಮೊಸರು ಹಾಕಿಕೊಂಡು ಮೂವರೂ ಊಟ ಮುಗಿಸಿದೆವು. ಅಮ್ಮನಿಗೆ ಆಮೇಲೆ ವಿಷಯ ಗೊತ್ತಾಯಿತು. ಎಲ್ಲರೂ ನಕ್ಕು ಸಂದರ್ಭವನ್ನು ಸಿಹಿಗೊಳಿಸಿಗೊಂಡೆವು.

–ಅಂಬವ್ವ ಚಿಕಾಲಗುಡ್ಡ, ಬಸವೇಶ್ವರನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry