ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರುಚಿ ಸ್ವಾದಕ್ಕೆ ‘ಮಾಮಾಗೊಟೊ’

Last Updated 16 ಜೂನ್ 2018, 10:58 IST
ಅಕ್ಷರ ಗಾತ್ರ

ಮಧ್ಯಾಹ್ನದ ಬಿಸಿಲು ನೆತ್ತಿಯ ಸುಡುತ್ತಿತ್ತು. ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಇಂದಿರಾನಗರದ 12ನೇ ಮುಖ್ಯರಸ್ತೆ ಕಡೆ ಸಾಗುತ್ತಿದ್ದ ನಾನು ಯಾವುದಾದರೂ ಹೋಟೆಲ್‌ ಇದೆಯೇ ಎಂದು ಕಣ್ಣು ಹಾಯಿಸಿದೆ. ‘ಮಾಮಾಗೊಟೊ ರೆಸ್ಟೊರೆಂಟ್‌’ ಎಂಬ ವಿಚಿತ್ರವಾದ ಹೆಸರಿನ ಬಗ್ಗೆ ಯೋಚನೆ ಮಾಡುತ್ತಲೇ ಒಳಗೆ ಹೋದೆ. ಬಾಗಿಲು ತೆಗೆಯುತ್ತಿದ್ದಂತೆ ಕೆಂಪು ಲಿಪ್‌ಸ್ಟಿಕ್‌ನ ಚೆಲುವೆ ಮುಗುಳುನಗುತ್ತಾ ಸ್ವಾಗತಿಸಿದಳು. ಒಳಗೆ ನಸುಗತ್ತಲು ಇದ್ದಿದ್ದರಿಂದ ಅಲ್ಲಲ್ಲಿ ಮೂನ್‌ ಲೈಟ್‌ಗಳನ್ನು ಅಳವಡಿಸಿದ್ದು, ಆಕಾಶದಲ್ಲಿನ ನಕ್ಷತ್ರಗಳಂತೆ ಕಾಣುತ್ತಿದ್ದವು. ಕುಳಿತುಕೊಳ್ಳಲು ಮರದ ಕುರ್ಚಿ ಹಾಗೂ ದೊಡ್ಡ ಸೋಫಾಗಳಿದ್ದವು.

‘ಹೊಸ ಮೆನು ಪ್ರಾರಂಭಿಸಿದ್ದೇವೆ, ಮೊದಲು ಅದನ್ನೇ ನೋಡಿ’ ಎಂದು ಕೆಂಪು ಚೆಲುವೆ ನಗು ಬೀರಿದಳು. ಜ್ಯೂಸ್‌ ಕುಡಿಯೋಣ ಎಂದು ‘ಕಿವಿ ಅಂಡ್‌ ಮಿಂಟ್‌ ಕಾಲಿನ್ಸ್‌’ ತರಲು ಹೇಳಿದೆ. ಕಿವಿ ಹಣ್ಣು, ನಿಂಬೆರಸ, ಸಕ್ಕರೆ, ಸೋಡಾ ಹಾಗೂ ಪುದಿನಾ ಎಲೆಗಳಿಂದ ಮಿಶ್ರಮಾಡಿದ್ದ ಪಾನೀಯವನ್ನು ದೊಡ್ಡ ಗ್ಲಾಸ್‌ನಲ್ಲಿ ತಂದಿಟ್ಟರು. ಗಾಢ ಬಿಸಿಲಿಗೆ ತಣ್ಣಗಿನ ಆ ಪಾನೀಯ ಹಿತನೀಡಿತು.

ಮೆನು ನೋಡಿ ‘ಶ್ರಿಂಪ್‌ ವಿಥ್‌ ಡ್ರೈ ರೆಡ್‌ ಚಿಲ್ಲಿ’ ತರಲು ಹೇಳಿದೆ. ಮೈದಾಹಿಟ್ಟಿನಲ್ಲಿ ಹಾಕಿ ಮಿಶ್ರಮಾಡಿ, ಒಲೆ ಮೇಲಿನ ಕಡಾಯಿಯಲ್ಲಿನ ಬಿಸಿ ಎಣ್ಣೆಯಲ್ಲಿ ಸುರಿದ ಸಿಗಡಿಗಳನ್ನು ಪ್ಲೇಟ್‌ನಲ್ಲಿ ತಂದರು. ಪಿಂಗಾಣಿಯ ಮತ್ತೊಂದು ಪ್ಲೇಟ್‌ಗೆ ಅವುಗಳನ್ನು ಜೋಡಿಸಿ ಅದರ ಮೇಲೆ ಎಣ್ಣೆಯಲ್ಲಿ ಕರಿದ ಕೆಂಪು ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ತಂದು ಕೊಟ್ಟ. ಅದನ್ನು ಒಂದೊಂದೆ ತುಂಡನ್ನು ಬೆಣ್ಣೆಯ ಸಾಸ್‌ನಲ್ಲಿ ತಿನ್ನುತ್ತಿದ್ದರೆ ವಾವ್ಹ್‌ ಅದರ ರುಚಿನೇ ಬೇರೆ. ಮೀನುಪ್ರಿಯರಿಗೆ ಹೇಳಿ ಮಾಡಿಸಿದ ಆಹಾರವಿದು.

ನಂತರ ರುಚಿ ನೋಡಿದ್ದು ‘ಅನ್‌ಬಿಲಿವ್‌ ಬೊ’. ಇದು ಇಡ್ಲಿ ರೀತಿಯಲ್ಲಿರುತ್ತದೆ. ಆದರೆ, ಇಡ್ಲಿ ಅಲ್ಲ. ರೋಸ್ಟ್‌ ಮಾಡಿದ ಎರಡು ಚಿಕನ್‌ ಪೀಸ್‌, ಅರೆಗುಲ್‌ ಎಲೆ, ಚಿಕ್ಕದಾಗಿರುವ ಕತ್ತರಿಸಿದ ಈರುಳ್ಳಿ ಎಲೆ, ಸೌತೆಕಾಯಿಯನ್ನು ಅದರೊಳಗೆ ಇಟ್ಟು ಮಡಿಚಿದ ಮೂರು ‘ಅನ್‌ಬಿಲಿವ್‌ ಬೊ’ ಸ್ವಾದ ವಿಭಿನ್ನವಾಗಿತ್ತು.

ನನಗೆ ಹೆಚ್ಚು ಇಷ್ಟವಾಗಿದ್ದು ‘ಅರೊಮ್ಯಾಟಿಕ್‌ ರೈಸ್‌ ಮೀಲ್‌ ಫಿಶ್‌’. ಫ್ರೈಡ್‌ ರೈಸ್‌ನ ಸುತ್ತ ಮಸಾಲೆಯಿಂದ ತಯಾರಿಸಿದ ಸಾಸ್‌ ಹಾಕಿ ಅದರ ನಡುವೆ ರೈಸ್‌ನ್ನಿಟ್ಟು ಫ್ರೈ ಮಾಡಿದ ಮೀನು ಹಾಗೂ ರಾಕೆಟ್‌ ಎಲೆಗಳನ್ನಿಟ್ಟು ದೊಡ್ಡ ಪ್ಲೇಟ್‌ನಲ್ಲಿ ತಂದಿಟ್ಟರು. ಮೀನು ಮಾತ್ರ ಬಾಯಲ್ಲಿಡುತ್ತಿದ್ದಂತೆ ಕರಗಿ ಹೋಗುತ್ತದೆ ಎಂಬಂತೆ ರುಚಿಯಿತ್ತು. ಇದನ್ನು ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ ಎಂದು ಹೋಟೆಲ್‌ ಮ್ಯಾನೇಜರ್‌ ರೋಶನ್‌ ಹೇಳಿದರು.

ಚಿಕ್ಕ ಚಿಕ್ಕದಾಗಿ ಕತ್ತರಿಸಿದ ಕೋಳಿ ಮಾಂಸವನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಕರಿದು, ಕೆಲ ಮಸಾಲೆ ಪದಾರ್ಥ ಬೆರೆಸಿ ಅದನ್ನು ಐಸ್‌ಬಾಯ್‌ ಲೆಟಿಸ್‌ (ವಿದೇಶದಲ್ಲಿ ಸಿಗುವ ಎಲೆ) ಎನ್ನುವ ಸಣ್ಣದಾದ ನಾಲ್ಕು ಎಲೆಗಳ ಮೇಲೆ ಇಟ್ಟು ಕೊಡುತ್ತಾರೆ. ‘ಚಿಕನ್‌ ಬೇಸಿಲ್‌ ಕಪ್ಸ್‌’ ಕೂಡ ನಾಲಿಗೆಯ ಸ್ವಾದವನ್ನು ಹೆಚ್ಚು ಮಾಡಿತು. ಇದನ್ನು ಐಸ್‌ಬಾಯ್‌ ಲೆಟಿಸ್‌ ಎಲೆ ಸಮೇತ ಎಲೆಅಡಿಕೆ ತಿಂದಂತೆ ತಿನ್ನಬೇಕು. ಇದಲ್ಲದೇ ಇಲ್ಲಿ ಜಾಸ್ಮಿನ್‌ ಫ್ರೈಡ್‌ರೈಸ್‌, ಟೊಫು ಮೀಲ್ಸ್‌, ರಾಕೆಟ್‌ ಸಲಾಡ್‌ಗಳು ಆಹಾರಪ್ರಿಯರಿಗೆ ಇಷ್ಟವಾಗುತ್ತವೆ.

ಈ ರೆಸ್ಟೋರೆಂಟ್‌ ಅನ್ನು ನಗರದಲ್ಲಿ 2014 ಆಗಸ್ಟ್‌ ತಿಂಗಳಲ್ಲಿ ರಾಹುಲ್‌ ಖನ್ನಾ ಅವರು ಪ್ರಾರಂಭಿಸಿದರು. ದೇಶದಾದ್ಯಂತ ಒಟ್ಟು 35 ಮಾಮಾಗೊಟೊ, ಸ್ಲಾಗ್ರ್ಯಾನ್‌ (ಪಬ್‌), ಇಂಡಿಯಾ ಡಾಬಾಗಳನ್ನು ಹೊಂದಿದ್ದಾರೆ ಎಂದು ವ್ಯವಸ್ಥಾಪಕ ಆಶಿಕ್‌ ಶಿವಾನಂದಂ ತಿಳಿಸಿದರು.

ಹೆಸರು: ಮಾಮಾಗೊಟೊ ರೆಸ್ಟೋರೆಂಟ್‌
ಸ್ಥಳ: 12ನೇ ಮುಖ್ಯರಸ್ತೆ, 949, ಗ್ರೌಂಡ್‌ ಫ್ಲೋರ್‌, ಇಂದಿರಾನಗರ.
ಸಮಯ: ಮ.12 ಗಂಟೆಯಿಂದ ರಾತ್ರಿ 11:30ರ ವರೆಗೆ
ಸಂಪರ್ಕಕ್ಕೆ: mamagotofunasian/Facebook,
ಮೊಬೈಲ್‌ ನಂ: 80339 99610
ಇಬ್ಬರಿಗೆ– ₹1,600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT