ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಲ್ಲೊಂದು ಬೃಹತ್‌ ಬಾವಿ!

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಡ್ಸನ್‌ ವೃತ್ತದ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಕೆಲ ವರ್ಷಗಳ ಹಿಂದೆ ಈಜುಕೊಳವಾಗಿದ್ದ ಜಾಗದಲ್ಲೀಗ ಮಳೆ ನೀರು ಕೊಯ್ಲು ಘಟಕ ತಲೆ ಎತ್ತಿದೆ.

ದಶಕಗಳ ಹಿಂದೆಲ್ಲಾ ಅಲ್ಲಿನ ಸುತ್ತಲಿನ ಜನರಿಗೆ ಅದು ನೆಚ್ಚಿನ ಈಜುಕೊಳವಾಗಿತ್ತು. ಆದರಿಂದ ಆ ಈಜುಕೊಳ ಮಳೆ ನೀರು ಸಂಗ್ರಹ ಘಟಕವಾಗಿ ಪರಿವರ್ತನೆಯಾಗಿದೆ.

ಬೇಸಿಗೆಯಲ್ಲಿ ಸಮರ್ಪಕ ನೀರಿನ ಪೂರೈಕೆಯಾಗದೆ ಸೊರಗುತ್ತಿದ್ದ ಈಜುಕೊಳಕ್ಕೆ ಹೊಸ ಕಾಯಕಲ್ಪ ನೀಡಿರುವ ಪಾಲಿಕೆ 2010ರಲ್ಲಿ ₹ 45 ಲಕ್ಷ ಅಂದಾಜು ವೆಚ್ಚದಲ್ಲಿ ಮಳೆ ನೀರು ಸಂಗ್ರಹ ಘಟಕವನ್ನು ನಿರ್ಮಿಸಿದೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್. ಶಿವಕುಮಾರ್ ಅವರ ನಿರ್ದೇಶನದಲ್ಲಿ ಆರಂಭಗೊಂಡಿರುವ ಈ ಘಟಕ 7.5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಪಾಲಿಕೆಯ ಕಟ್ಟಡಗಳ ಪುನರ್‌ನಿರ್ಮಾಣ, ನವೀನ ಕಟ್ಟಡಗಳು, ರಸ್ತೆ ಅಗಲೀಕರಣ ಸೇರಿದಂತೆ ಬಿಬಿಎಂಪಿ ಆವರಣದಲ್ಲಿ ವಿವಿಧ ಅಭಿವೃದ್ದಿ ಚಟುವಟಿಕೆಗಳು ಗರಿಗೆದರಿದಾಗ ಈಜಕೊಳಕ್ಕೆ ಮೀಸಲಾಗಿದ್ದ ಜಾಗ ಕಿರಿದಾಯಿತು.

ಈಜುಕೊಳವನ್ನು ಮುಚ್ಚುವ ಪರಿಸ್ಥಿತಿ ಎದುರಾದಾಗ ಅದನ್ನು ನೀರು ಸಂಗ್ರಹಕ್ಕೆ ಮೀಸಲಿರಿಸಲು ಪಾಲಿಕೆ ನಿರ್ಧರಿಸಿತು. ಟ್ಯಾಂಕ್‌ನ್ನು ಕಾಂಕ್ರೀಟ್‌ನಿಂದ ಮುಚ್ಚಲಾಗಿದೆ. ಪಾಲಿಕೆಯ ಮುಖ್ಯಕಟ್ಟಡ, ಅನೆಕ್ಸ್‌ 1 ಮತ್ತು 2 ಹಾಗೂ ಹೊಸ ಕೌನ್ಸಿಲ್ ಸಭಾಂಗಣದ ಛಾವಣಿ ಮೇಲೆ ಬೀಳುವ ಮಳೆನೀರು ಪೈಪ್‌ ಮೂಲಕ ಈ ಸಂಗ್ರಹಾಗಾರ ಸೇರುತ್ತದೆ. ಘಟಕದ ಸುತ್ತಲಿನ ಜಾಗವನ್ನು ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ.

‘ಸದ್ಯ ಪಾಲಿಕೆಯ ಆವರಣದಲ್ಲಿ ಒಟ್ಟು ಮೂರು ಮಳೆನೀರುಕೊಯ್ಲು ಘಟಕಗಳಿವೆ. ಅವುಗಳಲ್ಲಿ ಪಾಲಿಕೆಯ ಉತ್ತರ ಪ್ರವೇಶದ್ವಾರದ ಪಕ್ಕದಲ್ಲಿರುವ ಈ ಈಜುಕೊಳ ಘಟಕವೇ ಅತಿಹೆಚ್ಚು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆವರಣದಲ್ಲಿನ ವಿವಿಧ ಕಟ್ಟಡಗಳನ್ನು ವಿಭಜಿಸಿ ಒಂದೊಂದು ಕಟ್ಟಡದ ನೀರು ಬೇರೆ ಬೇರೆ ಘಟಕಗಳಲ್ಲಿ ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪಾಲಿಕೆ ಉದ್ಯಾನದಲ್ಲಿನ ಮಳೆನೀರು ಸಂಗ್ರಹ ಘಟಕ 15 ಸಾವಿರ ಲೀಟರ್ ಹಾಗೂ ಕೌನ್ಸಿಲ್ ಕಟ್ಟಡದ ಪಕ್ಕದ ಘಟಕ 5 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ’ ಎಂದು ಮಾಹಿತಿ ನೀಡುತ್ತಾರೆ ಮಲ್ಟಿ ಪರ್ಪಸ್‌ ಎಂಜಿನಿಯರ್ ವಿಭಾಗದ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್ ಸುರೇಶ್.

‘ಈಜುಕೊಳದ ನೀರು ಸಂಗ್ರಹಣಾ ಘಟಕದ ಕಾರಣದಿಂದಾಗಿ ಪಕ್ಕದಲ್ಲಿರುವ ಬೋರ್‌ವೆಲ್‌ನಲ್ಲಿ ಸದಾಕಾಲ 5 ರಿಂದ 6 ಇಂಚು ನೀರು ಇದ್ದೇ ಇರುತ್ತದೆ. ಪಾಲಿಕೆ ಆವರಣದಲ್ಲಿನ ಬಹುತೇಕ ಎಲ್ಲ ಬೋರ್‌ವೆಲ್‌ಗಳು ವಿಫಲವಾದರೂ ಇದರಲ್ಲಿ ನೀರು  ಬತ್ತುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣವೇ ಈ ನೀರು ಸಂಗ್ರಹ ಘಟಕ. 2010ರ ನಂತರ ಅದರಲ್ಲಿ ನೀರಿನ ಕೊರತೆಯೇ ತಲೆದೂರಿಲ್ಲ’ ಎನ್ನುವುದು ಅವರ ಅಂಬೋಣ.

‘ಪಾಲಿಕೆಯ ಆವರಣದಲ್ಲಿನ ಹನಿ ನೀರು ಪೋಲಾಗಬಾರದು ಎನ್ನುವುದು ಇದರ ಮಹತ್ತರ ಉದ್ದೇಶ. ಇದರ ನಿರ್ವಹಣೆ ಸಹ ಸುಲಭ ಸಾಧ್ಯ. ಸುತ್ತಲಿನ ಗಿಡ, ಮರಗಳ ಕಸದ ಪರಿಣಾಮ ವರ್ಷದಲ್ಲಿ ಕೆಲವು ಬಾರಿ ವಾಲ್‌ ಕಟ್ಟಿಕೊಳ್ಳುತ್ತದೆ. ಅದನ್ನು ಸ್ವಚ್ಛಗೊಳಿಸಿದರೆ, ಸಾಕು. ಅದರ ಹೊರತಾದ ಯಾವುದೇ ವಿಶೇಷ ನಿರ್ವಹಣೆಯ ಅಗತ್ಯವಿಲ್ಲ’ ಎನ್ನುವುದು ಸುರೇಶ್‌ ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT