ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಶಾಲೆಗಳೂ ನೀರಿನ ಪಾಠವೂ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೈಲಿರುವ ದುಡ್ಡನ್ನು ಫಿಕ್ಸೆಡ್‌ ಡೆಪಾಸಿಟ್‌ ಇಡುವಾಗಿನ ಉಮೇದು ನೀರ ಜಮಾವಣೆಯಲ್ಲಿ ಇಲ್ಲ! ಹಾಗಾಗಿ, ‘ಜಲಾಗ್ರಹ’ ಮಾಡಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದಿದೆ. ‘ಜಲಾಗ್ರಹ’ದ ಆಶಯ ಹೊತ್ತ ಕಥನಗಳು ಇಲ್ಲಿವೆ.

ಪರಿಸರ ನಾಶಕ್ಕೆ ಕಾರಣವಾಗಿರುವ ಅಂಶಗಳನ್ನು ಮನಗಂಡು ಹಲವರು ಪರಿಸರಸ್ನೇಹಿ ಮನೆಯತ್ತ ಮುಖ ಮಾಡುತ್ತಿದ್ದಾರೆ. ಪರಿಸರದ ಒಳಿತಿನ ಜೊತೆಗೆ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸುವುದು ಅಗತ್ಯ ಎಂಬ ಉದ್ದೇಶದಿಂದ ಹಲವು ಶಿಕ್ಷಣ ಸಂಸ್ಥೆಗಳು ಪರಿಸರಸ್ನೇಹಿ ಕಟ್ಟಡದ ಪರಿಕಲ್ಪನೆ ಸಾಕಾರಗೊಳಿಸಿದೆ. ಇದರ ಭಾಗವೇ ಆಗಿರುವ ಮಳೆ ನೀರು ಕೊಯ್ಲು, ಇಂಗು ಗುಂಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಜಲ ಪಾಠವನ್ನು ಮಾಡುತ್ತಿವೆ

ಆಚಾರ್ಯ ವಿದ್ಯಾಸಂಸ್ಥೆ: ಮಳೆ ನೀರು ಸಂಗ್ರಹ, ಕಟ್ಟಡದ ಸುತ್ತಮುತ್ತ ನೂರಾರು ಮರಗಳು, ಸ್ವಚ್ಛಂದ ಗಾಳಿಯ ಜೊತೆಗೆ ಸರಾಗವಾಗಿ ಒಳಬರುವ ಬೆಳಕಿನ ವ್ಯವಸ್ಥೆ, ನೀರಿನ ಮರುಬಳಕೆ, ಸೋಲಾರ್‌ ಅಳವಡಿಕೆ... ಒಟ್ಟಿನಲ್ಲಿ ಪರಿಸರಸ್ನೇಹಿ ಕಟ್ಟಡಕ್ಕೆ ಮಾದರಿಯಾಗಿರುವ ಶಿಕ್ಷಣ ಸಂಸ್ಥೆ ಮಾಗಡಿ ರಸ್ತೆಯ ಆಚಾರ್ಯ ಇನ್‌ಸ್ಟಿಟ್ಯೂಷನ್‌. ನಾಲ್ಕು ಲಕ್ಷ ಚದರ ಅಡಿಯಲ್ಲಿ ಗ್ರೀನ್‌ ಬಿಲ್ಡಿಂಗ್‌ ಪರಿಕಲ್ಪನೆಯ ಮೂಲಕ 2008ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ.

ನೈಸರ್ಗಿಕ ಗಾಳಿ–ಬೆಳಕಿನ ಬಳಕೆ ಮಾಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. 2011ರಲ್ಲಿ ಮಳೆ ನೀರಿನ ಕೊಯ್ಲು, 2012 ಎರೆಹುಳ ಗೊಬ್ಬರ ತಯಾರಿಕಾ ಘಟಕ, 2017ರಲ್ಲಿ ಸೋಲಾರ್‌ ಅಳವಡಿಕೆ... ಹೀಗೆ ಹಂತಹಂತವಾಗಿ ಹಸಿರು ಕಟ್ಟಡಕ್ಕೆ ಒಗ್ಗಿಸಿಕೊಂಡಿರುವ ಕಾಲೇಜು, ಬೆಂಗಳೂರಿನ ಕಾಂಕ್ರೀಟ್ ಕಾಡಿನಿಂದ ತುಸು ಹೊರಗುಳಿದ ಅನುಭವ ನೀಡುತ್ತದೆ.

ಒಂದು ಹನಿ ನೀರು ಸಹ ವ್ಯರ್ಥವಾಗದಂತೆ ಮುತುವರ್ಜಿ ವಹಿಸುವುದು ಸಂಸ್ಥೆಯ ಶಿಸ್ತು. ಮಳೆ ನೀರಿನ ಕೊಯ್ಲು, ನೀರಿನ ಪುನರ್ಬಳಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗೆ ಸಂಗ್ರಹವಾದ ನೀರನ್ನು ಗಿಡಕ್ಕೆ, ಬಸ್‌ ತೊಳೆಯಲು, ಶೌಚಾಲಯದ ಫ್ಲಶ್‌ಗೆ ಬಳಸಲಾಗುತ್ತದೆ. ‘ಹಸಿರಿನ ಮಹತ್ವ ಅರಿತಿರುವ ಸಂಸ್ಥೆ ವಿದ್ಯಾರ್ಥಿಗಳ ಸಹಾಯದಿಂದ ಕಾಲೇಜಿನ ಕ್ಯಾಂಪಸ್‌ನಲ್ಲಿ 600ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದೆ. ಹಾಗೆಯೇ ಪ್ರತಿವರ್ಷ ವಿದ್ಯಾರ್ಥಿಗಳಿಂದಲೇ ಗಿಡ ನೆಡುವ ಕಾರ್ಯಕ್ರಮ ಆಯೋಜಿಸುತ್ತದೆ. ಕಾಲೇಜಿನ ಪಕ್ಕದಲ್ಲಿಯೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಒಂದು ಕೆರೆಯ ಅಭಿವೃದ್ಧಿ ಮಾಡಿದೆ. ಇದರಿಂದ ಕೂಡ ಕಾಲೇಜಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ನೀರನ್ನು ಪಂಪ್‌ನಿಂದ ಎತ್ತಲೇಬಾರದು, ಮಳೆ ನೀರಿನ ಕೊಯ್ಲನ್ನೇ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬ ಗುರಿ ಇದೆ’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ವೆಂಕಟೇಶ್‌.

ಟ್ರೀಮಿಸ್‌ ವರ್ಲ್ಡ್‌ ಶಾಲೆ: ಮಕ್ಕಳಲ್ಲಿ ಪರಿಸರ ಜ್ಞಾನ ಬೆಳೆಸಬೇಕು ಎಂಬ ಉದ್ದೇಶದಿಂದ ಆರು ತಿಂಗಳಿನಿಂದ ಈ ಶಾಲೆಯಲ್ಲಿ ಪರಿಸರಸ್ನೇಹಿ ವಾತಾವರಣ ಸೃಷ್ಟಿಸಲಾಗಿದೆ. ಅರ್ಧ ಎಕರೆಯಲ್ಲಿ ಸಾವಯವ ಗೊಬ್ಬರ ಬಳಸಿ ಹಣ್ಣು, ತರಕಾರಿ ಬೆಳೆಸಲಾಗಿದೆ. ಇದನ್ನು ಮಾರಿ ಬಂದ ಹಣವನ್ನು ಗೊಬ್ಬರ, ಬೀಜಗಳನ್ನು ತರುವುದು ಹೀಗೆ ತೋಟಕ್ಕಾಗಿಯೇ ಬಳಸಲಾಗುತ್ತದೆ. ಈ ತೋಟಕ್ಕೆ ಶೌಚಾಲಯದ ನೀರನ್ನು ಪುನರ್ಬಳಕೆ ಮಾಡಿ ಬಳಸಲಾಗುತ್ತದೆ.

‘ಮಕ್ಕಳು ಈ ಚಟುವಟಿಕೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಾರೆ. ತೋಟದಲ್ಲಿ ಗಿಡಗಳನ್ನು ನೆಟ್ಟಿರುವುದು ಅವರೇ. ವಾರಕ್ಕೊಮ್ಮೆ ಅವರನ್ನು ತೋಟಕ್ಕೆ ಕರೆದುಕೊಂಡು ಬರುತ್ತೇವೆ. ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುತ್ತೇವೆ’ ಎನ್ನುತ್ತಾರೆ ಶಾಲೆಯ ಶಿಕ್ಷಕಿ ಅರ್ಚನಾ.

ಸರ್ಜಾಪುರದ ರೇಣುಕಾ ಶಾಲೆ: ಮಕ್ಕಳಿಗೆ ಮಳೆನೀರು ಕೊಯ್ಲಿನ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುವ ಉದ್ದೇಶದಿಂದ ಮಳೆ ನೀರು ಸಂಗ್ರಹ  ವ್ಯವಸ್ಥೆಯನ್ನು ಐದು ವರ್ಷಗಳ ಹಿಂದೆ ಅಳವಡಿಸಿಕೊಂಡಿದೆ ರೇಣುಕಾ ವಿದ್ಯಾಸಂಸ್ಥೆ. ಇಲ್ಲಿ 1,000 ಲೀಟರ್‌ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್‌ ಇದೆ. ಶಾಲೆಯ ಛಾವಣಿಯ ಮೇಲೆ ಸುರಿಯುವ ಮಳೆ ನೀರನ್ನು ಟ್ಯಾಂಕಿನಲ್ಲಿ ಸಂಗ್ರಹಿಸಲಾಗುತ್ತದೆ. ಟ್ಯಾಂಕು ತುಂಬಿದ ಬಳಿಕ ಆ ನೀರನ್ನು ಪಕ್ಕದಲ್ಲಿಯೇ ಕೈಕೊಂಡಹಳ್ಳಿ ಕೆರೆಗೆ ರವಾನಿಸುವ ವ್ಯವಸ್ಥೆ ಮಾಡಿದ್ದಾರೆ. ಶಾಲೆಯ ಪ್ರತಿ ಅಗತ್ಯಕ್ಕೂ ಇದೆ ನೀರನ್ನು ಬಳಸಲಾಗುತ್ತದೆ. ‘ಬಯೊಂ ಸಂಸ್ಥೆಯ ನೆರವಿನಿಂದ ಈ ವ್ಯವಸ್ಥೆ ಅಳವಡಿಸಿಕೊಂಡೆವು. ಮಳೆನೀರಿನ ಕೊಯ್ಲು ಬಗ್ಗೆ ಮಕ್ಕಳಿಗೆ ಬಾಯಲ್ಲಿ ಹೇಳಿದರೆ ಅವರಿಗೆ ತಿಳಿಯವುದಿಲ್ಲ, ಪ್ರಾಯೋಗಿಕವಾಗಿ ಬೋಧಿಸುವುದರಿಂದ ಬೇಗ ಅರ್ಥವಾಗುತ್ತದೆ. ಮಕ್ಕಳು ಥರ್ಮಾಕೋಲ್‌ನಿಂದ ಮಾದರಿಗಳನ್ನು ತಯಾರಿಸುತ್ತಾರೆ. ಇದೇ ನೀರನ್ನು ತಾರಸಿ ಗಾರ್ಡನ್‌ಗೂ ಬಳಸುತ್ತೇವೆ. ನೀರಿನ ಬಳಕೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಇದು ನೆರವಾಗಿದೆ’ ಎನ್ನುತ್ತಾರೆ ಶಾಲೆಯ ಶಿಕ್ಷಕ ನಾಗೇಶ್‌.

ಹೆಬ್ಬಿದರ ಮೆಟ್ಟಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಮಕ್ಕಳು ಪರಿಸರಸ್ನೇಹಿ ವಾತಾವರಣದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಪರಿಸರಕ್ಕೆ ಪೂರಕವಾದ ಹಲವು ಚಟುವಟಿಕೆಗಳಲ್ಲಿ ಜಕ್ಕಸಂದ್ರದ ಬಳಿಯಿರುವ  ಈ ಶಾಲೆ ತೊಡಗಿಸಿಕೊಂಡಿದೆ. ಶಾಲೆಯಲ್ಲಿ ಮಳೆನೀರು ಕೊಯ್ಲು, ಇಂಗು ಗುಂಡಿಗಳ ನಿರ್ಮಾಣ ಮಾಡಲಾಗಿದೆ. ಎಂಟು ವರ್ಷದ ಹಿಂದೆ ಇಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ತರಕಾರಿ, ಹಣ್ಣಿನ ಮರಗಳು ಇಲ್ಲಿವೆ. ಇದನ್ನು ಬಿಸಿಯೂಟ ಅಡುಗೆಗೆ ಬಳಸಲಾಗುತ್ತದೆ.

‘ಮಕ್ಕಳು ಗಿಡ ನೆಡುವುದು, ಪಾಚಿ, ಕಳೆ ತೆಗೆಯುವುದು...ಹೀಗೆ ಎಲ್ಲ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಇಲ್ಲಿ 28 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರಿದ್ದೇವೆ. ಮಳೆ ನೀರು ಸಂಗ್ರಹಕ್ಕೆ ಎರಡು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಅಳವಡಿಸಲಾಗಿದೆ’ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ. ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ಜಿಲ್ಲಾ ಮಟ್ಟದ ಪರಿಸರಮಿತ್ರ ಸ್ಪರ್ಧೆಯಲ್ಲಿ ಸತತವಾಗಿ ಮೂರು ವರ್ಷ ಈ ಶಾಲೆಗೆ ಬಹುಮಾನ ದೊರಕಿದೆ.

ಚಿಕ್ಕನಾಯಕಹಳ್ಳಿಯ ಪ್ರಕ್ರಿಯಾ ಗ್ರೀನ್‌ ವಿಸ್ಡಮ್‌ ಶಾಲೆ : ಶಾಲೆಯ ಮೇಲ್ಛಾವಣಿಯಲ್ಲಿ ಬೀಳುವ ನೀರನ್ನು ಮಳೆನೀರು ಕೊಯ್ಲು, ಕ್ರೀಡಾಂಗಣದಲ್ಲಿ ಬೀಳುವ ನೀರನ್ನು ಮರುಪೂರಣ ಮಾಡುತ್ತಾರೆ. ಅಡುಗೆ ಮನೆ ಬಳಕೆಯ ನೀರನ್ನು ತೋಟಕ್ಕೆ ಹರಿಸುವ ವ್ಯವಸ್ಥೆ ಮಾಡಿದ್ದಾರೆ.


–ಪ್ರಾಂಶುಪಾಲೆ ಸುಮಿತ್ರಾ ಅವರೊಂದಿಗೆ ಜಕ್ಕಸಂದ್ರ ಶಾಲೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT