ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ

7

ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ

Published:
Updated:
ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ

ಏಳೆಂಟು ವರ್ಷದ ತುಂಟ ಪೋರನೊಬ್ಬ ದಿಲ್ಲಿಯ ಸುಜಾನ್ ಸಿಂಗ್ ಪಾರ್ಕಿನ ನಾಲ್ಕನೇ ಮಜಲಿನ ಮನೆಯ ಬಾಲ್ಕನಿಯಲ್ಲಿ ಆಡುತ್ತಿದ್ದಾನೆ. ಕೈಯಲ್ಲಿ ಚೆಂಡಿದೆ. ಕೆಳಗಿನ ಮನೆಯ ಸರ್ದಾರ್‌ಜಿ ಆಗಷ್ಟೇ ಸ್ನಾನ ಮುಗಿಸಿ ತಮ್ಮ ನೀಳಕೇಶರಾಶಿಯನ್ನು ಒಣಗಿಸಲು ಹಿತ್ತಲಿನ ಬೆತ್ತದ ಕುರ್ಚಿಯಲ್ಲಿ ಕುಳಿತಿದ್ದಾರೆ. ಸುತ್ತಲೂ ಗಿಡಮರಗಳು. ಹಕ್ಕಿಗಳಿಗೆ, ಬೆಕ್ಕುಗಳಿಗೆ ನೀರುಣಿಸಲು ಇಟ್ಟ ಪುಟ್ಟ ದೋಣಿ. ಬಿಸಿಲು ನೆರಳಿನ ಉಯ್ಯಾಲೆ. ಸರ್ದಾರ್‌ಜಿ ಅಂಕಲ್ ಕಣ್ಣಿಗೆ ಬಿದ್ದದ್ದೇ ತುಂಟಾಟ ಶುರು. ಕೈಯಲ್ಲಿನ ಚೆಂಡನ್ನು ನೇರ ಗುರಿಯಿಟ್ಟು ಕೆಳಕ್ಕೆಸೆಯುತ್ತಾನೆ ತರಲೆ ಹುಡುಗ. ಅವರು ಚೆಂಡನೆತ್ತಿಕೊಂಡು ಕತ್ತೆತ್ತಿ ನೋಡುತ್ತಾರೆ. ಹುಡುಗ ‘ಸಾರಿ ಅಂಕಲ್’ ಎನ್ನುತ್ತಾನೆ. ಸರ್ದಾರ್‌ಜಿ ಬೈಯುವುದಿಲ್ಲ! ಚೆಂಡನ್ನು ಮೇಲಕ್ಕೆ ಎಸೆಯುತ್ತಾರೆ. ಹುಡುಗನಿಗೆ ಹುಡುಗಾಟ. ಬೇಕೆಂದೇ ಮತ್ತೆ ಚೆಂಡನ್ನು ಕೆಳಕ್ಕೆಸೆಯುತ್ತಾನೆ. ಆಕಸ್ಮಿಕವಾಗಿ ಬಿತ್ತು ಎನ್ನುವಂತೆ ಜೋಲು ಮುಖ ನಟಿಸಿ ಹೇಳುತ್ತಾನೆ ‘ಸಾರಿ ಅಂಕಲ್!’ ಅವರು ಚೆಂಡನ್ನು ಪುನಃ ಎತ್ತಿ ಮೇಲೆ ಎಸೆಯುತ್ತಾರೆ. ಈ ಆಟ ತುಸು ಹೊತ್ತು ನಡೆದು, ಕಡೆಗೆ ಹುಡುಗನೇ ಬೇಸತ್ತು ನಿಲ್ಲಿಸುತ್ತಾನೆ.

ಆ ಸರ್ದಾರ್‌ಜಿ ಬೇರೆ ಯಾರೂ ಅಲ್ಲ. ಒಂದು ತಲೆಮಾರನ್ನು ಗಾಢವಾಗಿ ಪ್ರಭಾವಿಸಿದ ಖ್ಯಾತ ಪತ್ರಕರ್ತ, ಕಾದಂಬರಿಕಾರ, ಚಿಂತಕ ಹಾಗೂ ದಿಲ್ಲಿಯ ಹಳೆ ಬೇರಿನಂತಿದ್ದ ನನ್ನ ಮೆಚ್ಚಿನ ಖುಶ್ವಂತ್ ಸಿಂಗ್. ಅವರಿಗೆ ಮಕ್ಕಳೆಂದರೆ ಜೀವ. ಪ್ರಾಣಿಗಳ ಮೇಲೂ ಅಷ್ಟೇ ಪ್ರೀತಿ. ದಿಲ್ಲಿಯಲ್ಲಿ ಬೆಕ್ಕುಗಳೇ ಇಲ್ಲವೇನೋ ಅಂದುಕೊಂಡರೆ ಈಗಲೂ ಅವರ ಮನೆಯ ಸುತ್ತಲೂ ಹಿಂಡು ಬೆಕ್ಕುಗಳನ್ನು ಕಾಣಬಹುದು. ತನ್ನ ಬಾಲ್ಯದ ಈ ಘಟನೆಯನ್ನು ನೆನಪಿಸಿಕೊಂಡಿದ್ದು ವಿಪುಲ್ ಶಾಸ್ತ್ರಿ, ನನ್ನ ಮಗನ ಚಡ್ಡಿ ದೋಸ್ತ್!

ಖುಶ್ವಂತ್ ಬರಹಗಳಂತೆಯೇ ಅವರು ಬದುಕಿ ಬಾಳಿದ ವಸತಿ ಸಮುಚ್ಚಯ ಸುಜಾನ್ ಸಿಂಗ್ ಪಾರ್ಕ್ ನನಗೆ ಬಹು ಪ್ರಿಯ ತಾಣ. ಒಂದು ಕಾಲಕ್ಕೆ ಅವರನ್ನು ಕಾಣಲು, ‘ಅಪಾಯಿಂಟ್‌ಮೆಂಟ್ ಕೊಡಿಸಿ’ ಎಂದು ದಿವಂಗತ ಎನ್.ಜೆ. ಕಾಮತ್‍ರನ್ನು ಪೀಡಿಸಿದ್ದೆ (1974ರಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಯಾಗಿದ್ದ ಕನ್ನಡಿಗರು). ಖುಶ್ವಂತ್ ಮನೆಯ ಹಸಿರುಬಾಗಿಲು ಆಗಂತುಕರಿಗಾಗಿ ಎಂದೋ ಮುಚ್ಚಿಹೋಗಿತ್ತು. 99ರ ಹರೆಯದಲ್ಲಿ ಕೊನೆಯುಸಿರೆಳೆದ ಈ ಜೀವ ಪಂಚಭೂತಗಳಲ್ಲಿ ವಿಲೀನವಾಗುವಾಗ ನಿಂತುಹೋದ ಟ್ರ್ಯಾಫಿಕ್ಕಿನಲ್ಲಿ ದಿಲ್ಲಿಯೂ ದುಃಖಿಸಿ ಬಿಕ್ಕುತ್ತಿದ್ದಂತೆ ತೋರಿತ್ತು. ಇತ್ತೀಚೆಗೆ ಸುಜಾನ್ ಸಿಂಗ್ ಪಾರ್ಕಿಗೆ ಹೋದಾಗಲೂ ಅವರ ಇ-49 ಮನೆಯೆದುರು ಮುಚ್ಚಿದ ಹಸಿರು ಬಾಗಿಲಿನೊಳ ಹೊರಗೆ ಸುಳಿದಾಡುವ ಗಾಳಿಯಾದರೂ ಪಿಸುಗುಡಬಹುದೇನೋ ಎನ್ನುವಂತೆ ಕ್ಷಣ ನಿಂತು ಮತ್ತೆ ಮೆಟ್ಟಿಲೇರತೊಡಗಿದೆ. ಮಾರ್ಚ್ 20ಕ್ಕೆ ಖುಶ್ವಂತಜ್ಜ ತೀರಿಹೋಗಿ ನಾಲ್ಕು ವರುಷಗಳು. ಅವರ ಆತ್ಮ ಅವರ ಪ್ರೀತಿಯ ದಿಲ್ಲಿಯಲ್ಲಿ ಇಲ್ಲಿಯೇ ಎಲ್ಲೋ ಸುಳಿದಾಡುತ್ತಿರಬಹುದು.

‘ಫ್ಯಾಸಿಸಮ್’ ಸುಳಿವಿನ ಅದೇ ಹಳೆಯ ಕರಾಳ ಹದ್ದು ತನ್ನ ಚೂಪಾದ ಕಾಲುಗುರುಗಳನ್ನು ಹೊರಚಾಚಿ ಆಳವಾಗಿ ಈ ದೇಶದ ಎದೆಯ ಮೇಲೂರಿ ಅಟ್ಟಹಾಸದಿಂದ ರೆಕ್ಕೆಬಡಿಯುತ್ತಿರುವ ಇಂದಿನ ದುರಿತ ಕಾಲದಲ್ಲಿ ಖುಶ್ವಂತ್ ಸಿಂಗ್ ಇರಬೇಕಿತ್ತು ಅನಿಸುತ್ತದೆ.

ಅವರ ಜನಪ್ರಿಯ ಅಂಕಣ ಬರಹ ‘ With malice towards one and all’ ಇಂಗ್ಲಿಷ್ ದಿನಪತ್ರಿಕೆಗಳಲ್ಲೂ ಮತ್ತು ‘ನಾ ಕಾಹೂ ಸೇ ದೋಸ್ತಿ ನಾ ಕಾಹೂ ಸೆ ಬೈರ್’ (ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ) ಎಲ್ಲಾ ಹಿಂದಿ ನಿಯತಕಾಲಿಕಗಳಲ್ಲಿ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿತ್ತು. ಜಾತಿ –ಮತ, ವರ್ಗ-ಸಿದ್ಧಾಂತ, ಪೂರ್ವಗ್ರಹಗಳನ್ನು ಮೀರಿ ವಸ್ತುನಿಷ್ಠವಾಗಿಯೋಚಿಸಬಲ್ಲ ದೊಡ್ಡ ಓದುಗವರ್ಗವನ್ನು ಅವರ ಬರಹಗಳು ಬೆಳೆಸಿದವು. ಅವರ ಓದು ಕೇವಲ ಓದಾಗಲಿಲ್ಲ. ಅದು ಇತಿಹಾಸವನ್ನೂ ವರ್ತಮಾನವನ್ನೂ ಏಕಕಾಲದಲ್ಲಿ ತೆರೆದುತೋರುವ ಕನ್ನಡಿಯಾಯಿತು. ಒಂದು ಅರ್ಥದಲ್ಲಿ ಭಾರತದ ಪತ್ರಿಕೋದ್ಯಮವನ್ನು ಆಳುವವರ ಅರಮನೆಗಳ ಒಳಕೋಣೆಗೆ ಕರೆದೊಯ್ದ ಮೊದಲ ಪತ್ರಕರ್ತ ಅವರು.

ಬರೀ ಕಾಮುಕತೆಯನ್ನೇ ತಲೆಯಲ್ಲಿ ತುಂಬಿ ಕೊಂಡ ಗಲೀಜು ಮುದುಕ, ಪಾಕಿಸ್ತಾನಿ ಏಜೆಂಟ್, ದರಬಾರಿ, ಮುಸ್ಲಿಂಮೋಹಿ, ಸಂಜಯ್ ಗಾಂಧಿಯ ‘ಗೊಬೆಲ್’, ಇಂದಿರಾ ಗಾಂಧಿಯ ಕಟ್ಟಾ ಅಭಿಮಾನಿ! ತುರ್ತುಪರಿಸ್ಥಿಯನ್ನು ಸಮರ್ಥಿಸಿ ಛೀಮಾರಿ ಹಾಕಿಸಿಕೊಂಡವರು ಎಂದೆಲ್ಲ ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಬರೆದ ಪತ್ರಗಳಿಗೂ ಅವರು ಮುತುವರ್ಜಿಯಿಂದ ಉತ್ತರಿಸುತ್ತಿದ್ದರಂತೆ. ಹೊಗಳಿಕೆ-ತೆಗಳಿಕೆಯನ್ನು ಸಮಚಿತ್ತದಿಂದ ತಮಾಷೆಯಾಗಿಯೇ ಸ್ವೀಕರಿಸಿದ ಪ್ರಾಮಾಣಿಕ ಮನುಷ್ಯ. ಖುಶ್ವಂತ್ ಸಿಂಗರ ಜೋಕುಗಳನ್ನು ಓದದವರೇ ಇಲ್ಲ. ಕಾನೂನು ಬಲ್ಲ ವಕೀಲ, ರಾಜಕೀಯವನ್ನೂ ಅರೆದುಕುಡಿದ ಮುತ್ಸದ್ದಿ, ಸ್ವಾತಂತ್ರ್ಯಪೂರ್ವ ಭಾರತದ ಬ್ರಿಟಿಷರ ಒಳ್ಳೆತನಗಳನ್ನು, ಅವಗುಣಗಳನ್ನೂ, ನೆಹರೂ, ಜಿನ್ನಾರ ಸ್ವಾರ್ಥ– ಅಧಿಕಾರದಾಹ- ಮಹತ್ವಾಕಾಂಕ್ಷೆಗಳನ್ನೂ ಮುಲಾಜಿಲ್ಲದೇ ಅನಾವರಣಗೊಳಿಸಿದವರು.

ತಮಗನಿಸಿದ್ದನ್ನು ನೇರವಾಗಿ, ನಿಷ್ಠುರವಾಗಿ ಹೇಳಿಬಿಡುತ್ತಿದ್ದರು ಖುಶ್ವಂತ್. ಲೋಪ ದೋಷಗಳು, ದೌರ್ಬಲ್ಯಗಳಿಗೆ ಅವರೂ ಹೊರತಾಗಿರಲಿಲ್ಲ. ಪತ್ರಿಕೋದ್ಯಮದೊಂದಿಗೆ ತಮ್ಮ ಸೃಜನಶೀಲತೆಯನ್ನು ಕಾಪಿಟ್ಟುಕೊಂಡು ಕತೆ, ಕಾದಂಬರಿಗಳನ್ನು ಬರೆದ ವಿರಳ ವ್ಯಕ್ತಿತ್ವ.

ತೊಂಬತ್ತರ ದಶಕದ ನಂತರ ಸಮಾಜದ ಧಮನಿಗಳಿಗೆ ನುಸುಳತೊಡಗಿದ ಅಸಹಿಷ್ಣುತೆ ಮತ್ತು ಪಾಚಿಯಂತೆ ಹಬ್ಬತೊಡಗಿದ ‘ಫ್ಯಾಸಿಸಂ’ ಕುರಿತು ಎಚ್ಚರಿಸಿದವರು. ಹಿಂದೂ ಮೂಲಭೂತವಾದಿಗಳಷ್ಟೇ ಅಪಾಯಕಾರಿ ಈ ಮುಸ್ಲಿಂ ಮೂಲಭೂತವಾದಿಗಳೆಂದು ಸಾರಿ ಎಲ್ಲ ಬಗೆಯ ಮೂಲಭೂತವಾದಿಗಳ ವಿರುದ್ದ ಸಿಡಿದೆದ್ದವರು. ಕೋಮು ಧ್ರುವೀಕರಣಕ್ಕೆ ನಾಂದಿಹಾಡಿದ ಅಡ್ವಾಣಿಯವರ ರಥಯಾತ್ರೆ, ಧ್ವಂಸಗೊಂಡ ಬಾಬ್ರಿ ಮಸೀದಿ, ಗುಜರಾತ್ ದಂಗೆ- ಹಿಂದೂ- ಮುಸ್ಲಿಮರ ಮಾರಣಹೋಮದ ದಳ್ಳುರಿಯನ್ನು ತಮ್ಮ ‘Absolute Khushwant’ ಪುಸ್ತಕದಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. 1984ರಲ್ಲಿ ಇಂದಿರಾ ಹತ್ಯೆಯ ನಂತರ ಸಿಖ್ಖರನ್ನು ಕಂಡಕಂಡಲ್ಲಿ ತರಿದು ಕೊಂದ ಕಪ್ಪುಚರಿತ್ರೆಯನ್ನು ಮನುಜಕುಲವೆಂದೂ ಕ್ಷಮಿಸಲಾರದು ಎಂಬ ಕುದಿನುಡಿಗಳನ್ನು ಆಡಿದ್ದಾರೆ.

ನೆಹರೂಗಿಂತಲೂ ಸರಳ ಸಜ್ಜನಿಕೆಯ ಮನಮೋಹನ್‌ ಸಿಂಗ್ ಬಗ್ಗೆ ಅಪಾರವಾದ ಗೌರವ ಅವರಿಗೆ. 1999ರಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಖುಶ್ವಂತ್‌ರಿಂದ ಎರಡು ಲಕ್ಷ ರೂಪಾಯಿಗಳನ್ನು ಪಡೆದಿರುತ್ತಾರೆ ಮನಮೋಹನ್ ಸಿಂಗ್ ಅವರ ಅಳಿಯ. ಮನಮೋಹನ್ ಸಿಂಗ್ ಚುನಾವಣೆಯಲ್ಲಿ ಸೋಲುತ್ತಾರೆ. ಅಲ್ಲಿಯ ತನಕ ಮನಮೋಹನ್- ಖುಶ್ವಂತ್ ನಡುವೆ ನೇರ ಪರಿಚಯ ಇರುವುದಿಲ್ಲ. ಭೇಟಿಗಾಗಿ ಸಮಯ ಪಡೆಯುವ ಮನಮೋಹನ್, ಖುದ್ದು ಖುಶ್ವಂತ್ ಮನೆಗೆ ತೆರಳುತ್ತಾರೆ. ಪಡೆದಿದ್ದ ಹಣವನ್ನು ಬಳಸಲಿಲ್ಲವೆಂದು ಹೇಳಿ ಹಿಂತಿರುಗಿಸಿದ ಅವರ ಪ್ರಾಮಾಣಿಕತೆಯನ್ನು ವಿರಳವೆಂದು ನೆನೆದಿದ್ದಾರೆ ಖುಶ್ವಂತ್.

ಹೊಸದಿಲ್ಲಿ ಎಂದು ಕರೆಯಲಾಗುವ ಲುಟ್ಯನ್ಸ್ ದಿಲ್ಲಿಯನ್ನು ಕಟ್ಟಿದವರೇ ಖುಶ್ವಂತ್ ಸಿಂಗ್‌ರ ಅಜ್ಜ ಸರ್ದಾರ್ ಸುಜಾನ್ ಸಿಂಗ್ ಹಾಗೂ ತಂದೆ ಸರ್ದಾರ್ ಶೋಭಾ ಸಿಂಗ್. ಬ್ರಿಟಿಷ್ ಆಳ್ವಿಕೆಯಲ್ಲಿ ಕಂಟ್ರ್ಯಾಕ್ಟರ್ ಆಗಿದ್ದವರು. ಆ ಕಾಲಕ್ಕೆ ಇಡೀ ಅರ್ಧ ದಿಲ್ಲಿಯ ಆಸ್ತಿಗೆ ಒಡೆಯರು ಎನಿಸಿಕೊಂಡಿದ್ದವರು. ಬ್ರಿಟಿಷರನ್ನು ಓಲೈಸಿಕೊಂಡು ಅವರ ವಿಶ್ವಾಸ, ಆಪ್ತತೆಯನ್ನು ಗಳಿಸಿಕೊಂಡು ಲಾಭ ಪಡೆದುಕೊಂಡ ಭಾರತೀಯರ ಸಾಲಿಗೆ ಸೇರಿದ್ದವರು. ಈಗಿನ ಪಾಕಿಸ್ತಾನದ ಲಾಹೋರಿನ ಹದಳಿ ಗ್ರಾಮದಲ್ಲಿ ಹುಟ್ಟಿದ ಖುಶ್ವಂತ್‌ರಿಗೆ ಸಹಜವಾಗಿಯೇ ಹುಟ್ಟಿದ ನೆಲದ ಮೋಹ ಬಿಟ್ಟಿದ್ದಿಲ್ಲ. ಮುಸ್ಲಿಮರೊಂದಿಗೆ ಸಹಜ ಪ್ರೇಮ. ಪಾಕಿಸ್ತಾನದಿಂದ ಬಂದವರು ಖುಶ್ವಂತ್ ಸಿಂಗ್‌ರನ್ನು ಭೇಟಿಯಾಗದೆ ವಾಪಸು ಹೋಗುತ್ತಿರಲಿಲ್ಲವಂತೆ. ಲಾಹೋರಿನಲ್ಲಿ ಅವರು ಬಿಟ್ಟು ಬಂದ ಮನೆ ಇಲ್ಲಿಂದ ಹೋದ ಮುಸ್ಲಿಂ ಕುಟುಂಬಕ್ಕೆ ಹಂಚಿಹೋಗಿದ್ದು – ಆ ಮನೆಯೆದುರು – ಖ್ಯಾತ ಕಾದಂಬರಿಕಾರ, ಇತಿಹಾಸಕಾರ, ಭಾರತ-ಪಾಕ್ ಸ್ನೇಹದ ಪ್ರತಿಪಾದಕ ಖುಶ್ವಂತ್‌ ಸಿಂಗ್ ಹುಟ್ಟಿದ್ದು ಇದೇ ಹವೇಲಿಯಲ್ಲಿ’ ಎಂಬ ಫಲಕ ಈಗಲೂ ಇದೆಯಂತೆ.

ಕಾಲ ಎಲ್ಲ ನೋವುಗಳನ್ನೂ ಮರೆಸುತ್ತದಂತೆ. ಆದರೆ ಖುಶ್ವಂತ್‌ ಸಿಂಗ್‌ರನ್ನು ದಿಲ್ಲಿ ಎಂದೂ ಮರೆಯಲಾರದು. ಭಾಗಮತಿ ಮರೆಯಲಾರಳು! ಏನೇ ಆಗಲಿ, ಇತಿಹಾಸದ ಕಿತಾಬಿನಲ್ಲಿ ಹೀಗೊಂದು ಪುಟವನ್ನು ಮುಂಬರುವ ತಲೆಮಾರುಗಳು ಓದುತ್ತಿರುತ್ತವೆ- ‘ಖುಶ್ವಂತ್ ಸಿಂಗ್ ಗತಿಸಿದ ನಂತರ ದಿಲ್ಲಿಯಲ್ಲಿ...’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry