ಮೋಸುಲ್:‌ದುರಂತ ಅಂತ್ಯ ಅಸೂಕ್ಷ್ಮತೆಯ ಪ್ರದರ್ಶನ

7

ಮೋಸುಲ್:‌ದುರಂತ ಅಂತ್ಯ ಅಸೂಕ್ಷ್ಮತೆಯ ಪ್ರದರ್ಶನ

Published:
Updated:
ಮೋಸುಲ್:‌ದುರಂತ ಅಂತ್ಯ ಅಸೂಕ್ಷ್ಮತೆಯ ಪ್ರದರ್ಶನ

ಇರಾಕ್‍ನ ಮೋಸುಲ್‍ನಲ್ಲಿ ಐಎಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಎಲ್ಲಾ 39 ಭಾರತೀಯರೂ ಮೃತಪಟ್ಟಿದ್ದಾರೆ ಎಂಬ ಸಂಗತಿ ದೃಢಪಟ್ಟಿದೆ. ಇವರೆಲ್ಲಾ ವಾಪಸಾಗಬಹುದೆಂಬುದು ಅವರ ಕುಟುಂಬದವರ ನಿರೀಕ್ಷೆಯಾಗಿತ್ತು. ಆದರೆ ಅದು ಹುಸಿಯಾದದ್ದು ವಿಷಾದದ ಸಂಗತಿ. ಈ ಹುಸಿ ನಿರೀಕ್ಷೆಗೆ ಸರ್ಕಾರವೂ ನೀರೆರೆಯುತ್ತಾ ಬಂತು ಎಂಬುದನ್ನು ಅಲ್ಲಗಳೆಯಲಾಗದು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಎದುರಾದ ಮೊದಲ ಬಿಕ್ಕಟ್ಟು ಇದು. ಯುದ್ಧಪೀಡಿತ ಪ್ರದೇಶದಲ್ಲಿ ಐಎಸ್ ಉಗ್ರರ ಸೆರೆಯಿಂದ ಈ ಕಾರ್ಮಿಕರನ್ನು ರಕ್ಷಿಸಿ ಕರೆತರುವ ಕಷ್ಟಗಳ ಬಗ್ಗೆ ಸರ್ಕಾರ ಮಾತನಾಡಲೇ ಇಲ್ಲ. ಬದಲಿಗೆ ಅವರು ಜೀವಂತವಾಗಿದ್ದು ಸುರಕ್ಷಿತವಾಗಿದ್ದಾರೆ ಎಂಬಂತಹ ಹೇಳಿಕೆಗಳನ್ನೇ ಕಳೆದ ನಾಲ್ಕು ವರ್ಷಗಳಲ್ಲಿ ಪದೇ ಪದೇ ನೀಡುತ್ತಾ ಬಂತು. ಹೀಗಾಗಿ, ಸಂತ್ರಸ್ತ ಕುಟುಂಬಗಳಲ್ಲಿ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿತ್ತು. ಸಂಘರ್ಷ ವಲಯವಾಗಿದ್ದ ಮೋಸುಲ್‍ನಲ್ಲಿ ಯುದ್ಧ ನಡೆಯುತ್ತಿರುವವರೆಗೂ ಮಾಹಿತಿಗಳ ಸೋರಿಕೆಯೂ ಕಷ್ಟವಾಗಿತ್ತು ಎಂಬುದೂ ನಿಜ. ಇದರಿಂದ, ಅಪಹೃತರ ಪೈಕಿ ಒಬ್ಬರಾಗಿ ಬದುಕುಳಿದ ಹರ್‍ಜೀತ್‍ ಮಸೀಹ್ ಅವರ ಹೇಳಿಕೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬಂದಿಲ್ಲ. ಮಸೀಹ್ ಅವರ ಹೇಳಿಕೆಯಲ್ಲಿ ಅಸ್ಪಷ್ಟತೆ ಇತ್ತು ಎಂದು ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಐಎಸ್ ಉಗ್ರರನ್ನು ಹೊಡೆದೋಡಿಸಿ ಮೋಸುಲ್ ನಗರವನ್ನು ಇರಾಕ್ ಸೇನೆ ಕಳೆದ ವರ್ಷ ವಶಕ್ಕೆ ಪಡೆದ ನಂತರವಷ್ಟೇ ನಾಪತ್ತೆಯಾದ 39 ಭಾರತೀಯರಿಗಾಗಿ ಶೋಧ ಕಾರ್ಯ ತೀವ್ರಗೊಂಡಿತ್ತು. ಆ ನಂತರ, ಸಾಮೂಹಿಕ ಸಮಾಧಿ ಪತ್ತೆಯಾದ ನಂತರ ಇವರೆಲ್ಲಾ ಮೃತಪಟ್ಟಿರಬಹುದೆಂಬ ಸಂಶಯದ ಎಳೆ ಸಿಕ್ಕಿತ್ತು. ಆದರೆ ಈ ಅನುಮಾನವನ್ನು ಡಿಎನ್‍ಎ ಮಾದರಿ ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸಿದ್ದು ಸರಿಯಾದ ಕ್ರಮ. ಸಾಕ್ಷ್ಯಗಳ ಆಧಾರದಲ್ಲಿ ಸಾವುಗಳನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಬಹಿರಂಗಪಡಿಸಿದ್ದೂ ಸರಿಯಾದದ್ದೇ. ಆದರೆ ಸಾವಿನ ವಿಷಯವನ್ನು ಸಂತ್ರಸ್ತ ಕುಟುಂಬಗಳಿಗೆ ಮೊದಲೇ ದೃಢಪಡಿಸದೇ ಇದ್ದದ್ದು ಅಸೂಕ್ಷ್ಮವಾದದ್ದು. ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದಲೇ ಈ ದುಃಖದ ವಿಷಯವನ್ನು  ಸತ್ತವರ ಬಂಧುಗಳು ತಿಳಿಯುವಂತಾದದ್ದು ಮಾನವೀಯವಾದ ನಡೆಯಲ್ಲ. ಸತ್ತವರು ಬಡ ಕಾರ್ಮಿಕರಾಗಿರದೆ  ಶ್ರೀಮಂತ ವೃತ್ತಿಪರರಾಗಿದ್ದಲ್ಲಿ ಈ ಬಗೆಯಲ್ಲಿ ಸರ್ಕಾರ ವರ್ತಿಸುತ್ತಿತ್ತೇ ಎಂಬುದು ಪ್ರಶ್ನೆ. ’ಸಂಸತ್ತಿಗೆ ಮೊದಲು ಮಾಹಿತಿ ನೀಡುವುದು ಸಂಸದೀಯ ಪ್ರಜಾಸತ್ತೆಯ ಶಿಷ್ಟಾಚಾರವಾಗಿದೆ’ ಎಂದು ಸುಷ್ಮಾ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಎಷ್ಟೋ ಬಾರಿ ಶಿಷ್ಟಾಚಾರ ಬದಿಗೊತ್ತಿ ಭಾವನೆಗಳನ್ನು ಅಭಿವ್ಯಕ್ತಿಸುವ ಪರಂಪರೆಯೂ ನಮ್ಮಲ್ಲಿದೆ ಎಂಬುದು ಸಚಿವೆಗೆ ನೆನಪಿರಬೇಕು.

ಬಹುಶಃ ಈ ಪ್ರಕರಣದ ಬೆಳವಣಿಗೆಗಳ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಇನ್ನಷ್ಟು ವಿವರಗಳನ್ನು ನೀಡಬೇಕು. ಆದರೆ ಇಂತಹ ದುರಂತದ ವಿಚಾರವನ್ನೂ ರಾಜಕೀಯಗೊಳಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದು ಸರಿಯಲ್ಲ. ಶೋಧ ಕಾರ್ಯದಲ್ಲಿ ಇರಾಕ್‍ನ ಸರ್ಕಾರೇತರ ಸಂಸ್ಥೆಯೊಂದು ಸಕ್ರಿಯವಾಗಿ ಭಾರತದ ಜೊತೆ ಕೆಲಸ ಮಾಡಿದೆ. ಇಂತಹ ಸಂದರ್ಭದಲ್ಲಿ ಮಾಹಿತಿಯನ್ನು ಪ್ರಕಟಿಸುವುದು ಸರ್ಕಾರಕ್ಕೆ ಅನಿವಾರ್ಯವೂ ಆಗಿತ್ತು. ಈ ದುರಂತ ಅಂತ್ಯದ ಅನುಸಂಧಾನದ ಜೊತೆಗೆ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸಂತ್ರಸ್ತ ಕುಟುಂಬಗಳಿಗೆ ನೆರವಾಗುವುದಕ್ಕಾಗಿ ಪೂರ್ಣ ವಿವರಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ.

ಇನ್ನು,  ಹಣ ಗಳಿಸಲು ಜೀವವನ್ನೇ ಅಪಾಯಕ್ಕೊಡ್ಡಿ ಸಂಘರ್ಷ ವಲಯಗಳಿಗೆ ದುಡಿಮೆ ಅರಸಿ ಹೋಗುವಂತಹ  ಭಾರತೀಯರು, ಸಮಸ್ಯೆಯ ಮತ್ತೊಂದು ಆಯಾಮಕ್ಕೆ ಪ್ರತೀಕ. ಯುದ್ಧ ಸಂತ್ರಸ್ತ ಪ್ರದೇಶಗಳಿಂದ ನಾಗರಿಕರನ್ನು ತೆರವುಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಅನುಭವದ ಕೊರತೆ ಏನೂ ಇಲ್ಲ. ಹೀಗಿದ್ದೂ ಒಂದಿಷ್ಟು ಹೆಚ್ಚಿನ ಹಣ ಗಳಿಕೆಗಾಗಿ ಅಪಾಯಕಾರಿ ಪ್ರದೇಶಗಳಿಗೆ ವಲಸೆ ಹೋಗುವುದರ ಬಗ್ಗೆ ಜಾಗೃತಿ ಮೂಡಿಸುವುದು ಸಾಧ್ಯ. ವಲಸೆ ಹೋಗುವ ಸಂದರ್ಭದಲ್ಲಿ  ಅಪಾಯಕಾರಿ ಪ್ರದೇಶಗಳ ಬಗ್ಗೆ ವಿದೇಶಾಂಗ ಕಚೇರಿಗಳೂ ಮಾಹಿತಿ ನೀಡಬೇಕು, ಆ ಮೂಲಕ  ಇಂತಹ ದುರಂತಗಳನ್ನು ಕಡಿಮೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry