ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬಿ: ಮಾಹಿತಿ ಕೊಡದ ವೈದ್ಯರಿಗೆ ಜೈಲು

ಭಾರತೀಯ ದಂಡಸಂಹಿತೆ ಅನ್ವಯ ಶಿಕ್ಷೆ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಹೊಸ ನಿಯಮ ಜಾರಿ
Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ತಾವು ಚಿಕಿತ್ಸೆ ನೀಡುತ್ತಿರುವ ಕ್ಷಯ (ಟಿ.ಬಿ.) ರೋಗಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ಇದ್ದರೆ ಅಂಥಹ ವೈದ್ಯರನ್ನು ಜೈಲಿಗೆ ಕಳುಹಿಸುವುದಕ್ಕೆ ಅವಕಾಶ ಇರುವ ಹೊಸ ಆದೇಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದೆ.  ಪ್ರಯೋಗಾಲಯದ ಮುಖ್ಯಸ್ಥರು ಮತ್ತು ಔಷಧ ಅಂಗಡಿಗಳ ಮಾಲೀಕರಿಗೂ ಇದು ಅನ್ವಯವಾಗುತ್ತದೆ.

ಕ್ಷಯವು ಅಪಾಯಕಾರಿ ಸಾಂಕ್ರಾಮಿಕ ರೋಗ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪರಿಗಣಿಸಿದೆ. ರೋಗದ ಬಗ್ಗೆ ಮಾಹಿತಿ ಮುಚ್ಚಿಟ್ಟ ವೈದ್ಯರು ಮತ್ತು ಇತರರನ್ನು ಜೈಲಿಗೆ ಕಳುಹಿಸಲು ಭಾರತೀಯ ದಂಡ ಸಂಹಿತೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಅವಕಾಶ ಇದೆ ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.

ಈವರೆಗೆ ಇದ್ದ ನಿಯಮದ ಪ್ರಕಾರವೂ, ಖಾಸಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಾವು ಚಿಕಿತ್ಸೆ ನೀಡುತ್ತಿರುವ ಕ್ಷಯ ರೋಗಿಯ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆದರೆ ಅದರಲ್ಲಿ ಶಿಕ್ಷೆಯ ಬಗ್ಗೆ ಯಾವುದೇ ಪ್ರಸ್ತಾವ ಇರಲಿಲ್ಲ.

ಈಗ ದಂಡನೆಯ ಪ್ರಸ್ತಾವವನ್ನು ಮುಂದಿಟ್ಟಿರುವುದರಿಂದಾಗಿ ಖಾಸಗಿ ಕ್ಷೇತ್ರದಿಂದ ಆರೋಗ್ಯ ಇಲಾಖೆಗೆ ಕ್ಷಯ ರೋಗಿಗಳ ಬಗ್ಗೆ ದೊರೆಯುವ ಮಾಹಿತಿ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಸುಮಾರು 28 ಲಕ್ಷ ಕ್ಷಯರೋಗಿಗಳಿದ್ದಾರೆ. 18 ಲಕ್ಷ ರೋಗಿಗಳ ಮಾಹಿತಿ ಮಾತ್ರ ಆರೋಗ್ಯ ಇಲಾಖೆಯಲ್ಲಿ ಇದೆ.

ಉಳಿದ 10 ಲಕ್ಷ ರೋಗಿಗಳ ಚಿಕಿತ್ಸೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಿಕಿತ್ಸೆಯನ್ನು ಅರ್ಧದಲ್ಲಿ ನಿಲ್ಲಿಸಿದರೆ ಈ ಸೋಂಕು ಔಷಧಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತದೆ. ಇರಿಂದಾಗಿ ಪರಿಸ್ಥಿತಿ ಸಂಕೀರ್ಣಗೊಳ್ಳುತ್ತದೆ. ಹಾಗಾಗಿ ಕ್ಷಯ ರೋಗ ಇರುವ ಎಲ್ಲರ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಛತ್ತೀಸಗಡದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಔಷಧ ಅಂಗಡಿಗಳಿಗೆ ಭೇಟಿ ನೀಡಿ, ಔಷಧ ಚೀಟಿಯ ಪರಿಶೀಲನೆ ನಡೆಸುವ ಮೂಲಕ ಸುಮಾರು 24 ಸಾವಿರ ಕ್ಷಯ ರೋಗ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಇಂತಹ ಪರಿಶೀಲನೆ ಅಗತ್ಯ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಯಾರಿಗೆ ಮಾಹಿತಿ ನೀಡಬೇಕು

ಕ್ಷಯ ರೋಗಿಗೆ ಚಿಕಿತ್ಸೆ ನೀಡಿದ ಖಾಸಗಿ ವೈದ್ಯರು, ಕ್ಲಿನಿಕ್‌ಗಳು, ನರ್ಸಿಂಗ್‌ ಹೋಮ್‌ಗಳು ಮತ್ತು ಆಸ್ಪತ್ರೆಗಳು ತಕ್ಷಣವೇ ಜಿಲ್ಲಾ ವೈದ್ಯಾಧಿಕಾರಿ ಅಥವಾ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗೆ ಮಾಹಿತಿ ನೀಡಬೇಕು. ನಗರ ಪ್ರದೇಶದಲ್ಲಿ ನಗರಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಅಥವಾ ನಿಯೋಜಿತ ಜಿಲ್ಲಾ ಕ್ಷಯ ರೋಗ ಅಧಿಕಾರಿಗೆ ಮಾಹಿತಿ ನಿಡಬೇಕು.

ದಂಡನೆಯ ಸೆಕ್ಷನ್‌ಗಳು

ಸೆಕ್ಷನ್‌ 269: ಜೀವಕ್ಕೆ ಅಪಾಯಕಾರಿಯಾದ ಸೋಂಕು ರೋಗ ಹರಡಲು ಅವಕಾಶ ಕೊಡುವಂತಹ ನಿರ್ಲಕ್ಷ್ಯದ ಬಗ್ಗೆ ಈ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಇಂತಹ ಅಪರಾಧಕ್ಕೆ ಆರು ತಿಂಗಳು ಸಜೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.

ಸೆಕ್ಷನ್‌ 270: ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡುವಂತಹ ಕೃತ್ಯ ಈ ಸೆಕ್ಷನ್‌ನ ಅಡಿಯಲ್ಲಿ ಬರುತ್ತದೆ. ಈ ಅಪರಾಧಕ್ಕೆ ಎರಡು ವರ್ಷ ಸಜೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇದೆ

28 ಲಕ್ಷ – ದೇಶದಲ್ಲಿರುವ ಕ್ಷಯರೋಗಿಗಳ ಅಂದಾಜು ಸಂಖ್ಯೆ 

4.23 ಲಕ್ಷ–  ಕ್ಷಯರೋಗದಿಂದ ಪ್ರತಿ ವರ್ಷ ಸಾಯುವವರ ಸಂಖ್ಯೆ 

ಗಮನಿಸಬೇಕಾದ ಅಂಶಗಳು

*ಆರಂಭದಲ್ಲಿಯೇ ರೋಗ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ ಮೂಲಕ ಸೋಂಕು ನಿವಾರಣೆ ಸಾಧ್ಯ

*ಅಸಮರ್ಪಕ ಚಿಕಿತ್ಸೆ, ಅಪೂರ್ಣ ಚಿಕಿತ್ಸೆಯಿಂದ ಕ್ಷಯದ ಸೋಂಕು ಔಷಧಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತದೆ

*ಇದರಿಂದಾಗಿ ಕ್ಷಯರೋಗದ ಹರಡುವಿಕೆ ಇನ್ನಷ್ಟು ತ್ವರಿತಗೊಳ್ಳುತ್ತದೆ

*ಭಾರತದಲ್ಲಿ ಇತರ ಎಲ್ಲ ರೋಗಗಳಿಗಿಂತ ಕ್ಷಯದಿಂದ ಸಾಯುವವರ ಸಂಖ್ಯೆ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT