ಕುಮುದ್ವತಿ ನದಿ ಪಾತ್ರದಲ್ಲಿ ಹೆಚ್ಚಿದ ಅಂತರ್ಜಲ

7

ಕುಮುದ್ವತಿ ನದಿ ಪಾತ್ರದಲ್ಲಿ ಹೆಚ್ಚಿದ ಅಂತರ್ಜಲ

Published:
Updated:
ಕುಮುದ್ವತಿ ನದಿ ಪಾತ್ರದಲ್ಲಿ ಹೆಚ್ಚಿದ ಅಂತರ್ಜಲ

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರವು ಕೈಗೊಂಡಿರುವ ಕುಮುದ್ವತಿ ನದಿಯ ಪುನಶ್ಚೇತನ ಕಾಮಗಾರಿಯು ಶೇ 45ರಷ್ಟು ಪೂರ್ಣಗೊಂಡಿದೆ. ನದಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಕೊಳವೆ ಬಾವಿಗಳು, ಕಲ್ಯಾಣಿಗಳಲ್ಲಿ ನೀರು ಬಂದಿದೆ.

ನದಿ ಪುನಶ್ಚೇತನ ಸಂಬಂಧ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆಗಾಗಿ ಸುದ್ದಿಗಾರರನ್ನು ನೆಲಮಂಗಲ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಬುಧವಾರ ಕರೆದೊಯ್ಯಲಾಯಿತು.

ಈಗಾಗಲೇ 900ಕ್ಕೂ ಹೆಚ್ಚು ಮರುಪೂರಣ ಬಾವಿಗಳನ್ನು ನಿರ್ಮಿಸಲಾಗಿದೆ. ನದಿ ಪಾತ್ರದಲ್ಲಿ 39 ಸಾವಿರ ಮರಗಳನ್ನು ಬೆಳೆಸಲಾಗಿದೆ. ಇದರಿಂದ ಗ್ರಾಮಾಂತರ ಜಿಲ್ಲೆಯ 100 ಹಳ್ಳಿಗಳ ಸುಮಾರು 66,504 ಜನರಿಗೆ ಪ್ರಯೋಜನವಾಗಿದೆ. ಒಟ್ಟು 278 ಹಳ್ಳಿಗಳ 2.5 ಲಕ್ಷ‌ ಜನರಿಗೆ ಪ್ರಯೋಜನ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಶಿವಗಂಗೆ ಬೆಟ್ಟದಲ್ಲಿ ಹುಟ್ಟುವ ಕುಮುದ್ವತಿ ನದಿ, 54 ಕಿ.ಮೀ. ಹರಿದು ತಿಪ್ಪಗೊಂಡನಹಳ್ಳಿ ಬಳಿ ಅರ್ಕಾವತಿ ನದಿಯನ್ನು ಸೇರುತ್ತದೆ. ಈ ನದಿಯ ಜಲಾನಯನ ಪ್ರದೇಶ ಒಟ್ಟು 460 ಚದರ ಕಿ.ಮೀ. ಇದೆ. ಅದರಲ್ಲಿ 326 ಚದರ ಕಿ.ಮೀ. ಜಲಾನಯನ ಪ್ರದೇಶ ನೆಲಮಂಗಲ ತಾಲ್ಲೂಕಿನಲ್ಲಿದೆ. ಉಳಿದ 134 ಚದರ ಕಿ.ಮೀ. ಪ್ರದೇಶ ಮಾಗಡಿ ತಾಲ್ಲೂಕಿನಲ್ಲಿದೆ. ಹೀಗಾಗಿ ಪುನಶ್ಚೇತನಕ್ಕೆ ನೆಲಮಂಗಲ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಜಲಾನಯನ ಪ್ರದೇಶದಲ್ಲಿ ಒಟ್ಟು 278 ಗ್ರಾಮಗಳಿವೆ. ಅದರಲ್ಲಿ ನೆಲಮಂಗಲ ತಾಲ್ಲೂಕಿನಲ್ಲಿ 195 ಮತ್ತು ಮಾಗಡಿ ತಾಲ್ಲೂಕಿನಲ್ಲಿ 83 ಗ್ರಾಮಗಳು ಬರುತ್ತವೆ. ನದಿಯ ಪುನಶ್ಚೇತನಕ್ಕಾಗಿ ಜಲಾನಯನ ಪ್ರದೇಶವನ್ನು ಒಟ್ಟು 18 ಕಿರು ಜಲಾನಯನ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ.

ಈ ನದಿಯನ್ನು ಪುನಶ್ಚೇತನಗೊಳಿಸುವ ಕನಸು ಕಂಡವರು ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದ ನದಿ ಪುನಶ್ಚೇತನ ಯೋಜನೆಯ ನಿರ್ದೇಶಕ ಡಾ.ವೈ.ಲಿಂಗರಾಜು. 2013ರ ಫೆಬ್ರುವರಿಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ನೆರವಿನಿಂದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಜತೆಗೆ, ಇಂಗುಗುಂಡಿ, ಮರುಪೂರಣ ಬಾವಿಗಳನ್ನು ನಿರ್ಮಿಸಲಾಯಿತು.

ಇದು ಹೂವಿನ ಹಾಸಿಗೆ ಆಗಿರಲಿಲ್ಲ: ‘ಮೊದಮೊದಲಿಗೆ ಹಳ್ಳಿಯ ಜನರು ಸ್ವಯಂಸೇವಕರನ್ನು ಸಂದೇಹದಿಂದ‌ ನೋಡುತ್ತಿದ್ದರು. ನಿರ್ಮಾಣಗೊಂಡ ಮರುಪೂರಣ ರಚನೆಗಳನ್ನು ರಾತ್ರೋರಾತ್ರಿ ನಾಶಪಡಿಸುತ್ತಿದ್ದರು. ನಿರ್ಮಾಣ ಸಾಮಗ್ರಿಗಳನ್ನು ಕದ್ದೊಯ್ಯುತ್ತಿದ್ದರು. ಎಲ್ಲವನ್ನೂ ಮತ್ತೆ ಮೊದಲಿನಿಂದ ‌ಪ್ರಾರಂಭಿಸಬೇಕಾಗುತ್ತಿತ್ತು. ಯೋಜನೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ನೀರಿನ ಸಮಸ್ಯೆಯ ಅರಿವಾಗುತ್ತಿದ್ದಂತೆ ಪುನರುಜ್ಜೀನವ ಕಾರ್ಯದಲ್ಲಿ ಅವರೂ ತೊಡಗಿಸಿಕೊಂಡರು ಎಂದು ಯೋಜನೆಯ ವ್ಯವಸ್ಥಾಪಕ ಪಾಂಡುರಂಗ ತಿಳಿಸಿದರು.

ನದಿ ಪುನಶ್ಚೇತನ ಹೇಗೆ?

‘ನದಿಯ ಜಲಾನಯನ ಪ್ರದೇಶದಲ್ಲಿ ನೀರಿನ ಓಟಕ್ಕೆ ತಡೆಗೋಡೆಗಳ ನಿರ್ಮಾಣ, 15-20 ಅಡಿ ಆಳವಿರುವ ಮರುಪೂರಣ ಬಾವಿಗಳು, ದೇಸೀ ತಳಿಯ ಮರಗಳು, ಹುಲ್ಲು ಮತ್ತು ಗಿಡಗಳನ್ನು ಬೆಳೆಸುವುದು, ಹಳ್ಳಿಗಳಲ್ಲಿರುವ ಪುರಾತನ‌ ಕಲ್ಯಾಣಿಗಳ ಹೂಳೆತ್ತುವುದು ಸೇರಿದಂತೆ ಅನೇಕ ಕೆಲಸಗಳ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ತನ್ಮೂಲಕ ನದಿಯು ಪುನಃ ಹರಿಯುವಂತೆ ಮಾಡಬಹುದು’‌‌‌ ಎಂದು ಡಾ.ವೈ.ಲಿಂಗರಾಜು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry