7

ಪಕ್ಷಿಗಳಿಗೆ ಆಹಾರ, ನೀರುಣಿಸುವ ‘ಹೊಸ ಪರಿಕರ’!

Published:
Updated:
ಪಕ್ಷಿಗಳಿಗೆ ಆಹಾರ, ನೀರುಣಿಸುವ ‘ಹೊಸ ಪರಿಕರ’!

ಚಿತ್ರದುರ್ಗ: ‘ಬೇಸಿಗೆ ಬಂದಿದೆ.. ಪಕ್ಷಿಗಳು ಬಾಯಾರುತ್ತಿವೆ. ನಿಮ್ಮನೆ ಸುತ್ತಮುತ್ತ, ಟೆರೇಸಿನ ಮೇಲೆ ತೆರೆದ ಮಡಿಕೆ, ಹೂಜಿಯಲ್ಲಿ ನೀರಿಡಿ. ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ. ...’

– ಇಂಥ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಹೊತ್ತಿನಲ್ಲಿ, ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಕೇಂದ್ರದ ಸಿಬ್ಬಂದಿ ತ್ಯಾಜ್ಯ ವಸ್ತುಗಳನ್ನು ಬಳಸಿ ಪಕ್ಷಿಗಳಿಗೆ ನೀರು–ಆಹಾರ ಇಡುವಂತಹ ಪರಿಕರಗಳನ್ನು ಸಿದ್ಧಪಡಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಬಳಸಿ ವ್ಯರ್ಥವಾಗಿ ಉಳಿದಿದ್ದ ಪ್ಲಾಸ್ಟಿಕ್ ಕ್ಯಾನ್‌, ಮಿನರಲ್ ವಾಟರ್ ಬಾಟಲುಗಳಿಂದ ಈ ಪರಿಕರಗಳನ್ನು ತಯಾರಿಸಿದ್ದಾರೆ. ಗುರುವಾರ (ಮಾರ್ಚ್ 22) ‘ವಿಶ್ವ ಜಲ ದಿನ’ದಂದು ಈ ಪರಿಕರಗಳನ್ನು ಏಳು ಸುತ್ತಿನ ಕೋಟೆಯ ಅಂಗಳದ ಮರಗಳಲ್ಲಿ ತೂಗು ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.

ಮಣ್ಣು ಪರೀಕ್ಷಾ ಕೇಂದ್ರದಲ್ಲಿ ರಾಶಿ ಹಾಕಿದ್ದ ಕ್ಯಾನ್‌ಗಳನ್ನು ಈ ಪರಿಕರ ತಯಾರಿಕೆಗೆ ಬಳಸಿದ್ದಾರೆ. ಕ್ಯಾನ್‌ ಅನ್ನು ಅರ್ಧಕ್ಕೆ ಕತ್ತರಿಸಿ, ಕಾಳುಗಳನ್ನು ಹಾಕಲು ಜಾಗ ಮಾಡಿದ್ದಾರೆ. ಮಿನರಲ್ ವಾಟರ್ ಬಾಟಲಿಗೆ ನೀರು ತುಂಬಿ, ಮುಚ್ಚಳಕ್ಕೆ ರಂಧ್ರ ಮಾಡಿದ್ದಾರೆ. ಬಾಟಲಿಯನ್ನು ಉಲ್ಟಾ ನೇತುಹಾಕಿದರೆ, ಮುಚ್ಚಳದಿಂದ ನೀರು ತೊಟ್ಟಿಕ್ಕುತ್ತದೆ. ಕೆಳಗೆ ನೀರು ಸಂಗ್ರಹಕ್ಕೆ ಪ್ರತ್ಯೇಕ ಪ್ಲಾಸ್ಟಿಕ್ ಪಾತ್ರೆ ಇಟ್ಟಿದ್ದಾರೆ. ಆಹಾರ ಮತ್ತು ನೀರು ಇಡುವ ಎರಡೂ ವಸ್ತುಗಳನ್ನು ಗಿಡಗಳಿಗೆ ತೂಗುಹಾಕಲು ಅವಕಾಶ ಕಲ್ಪಿಸಿದ್ದಾರೆ.

ಪಕ್ಷಿಗಳಿಗೆ ನೀರು–ಆಹಾರ ಇಡುವ ಈ ಪರಿಕರದ ವಿನ್ಯಾಸ ಸೂಚಿಸಿದವರು ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಮಾಲ್ತೇಶ್ ಪುಟ್ಟಣ್ಣ. ಈ ಮಾದರಿಯನ್ನು ಅವರು ಯೂಟ್ಯೂಬ್‌ನಲ್ಲಿ ನೋಡಿದ್ದಾರೆ. ನಂತರ ಈ ವಿಷಯವನ್ನು ಸಿಬ್ಬಂದಿಯೊಂದಿಗೆ ಹಂಚಿಕೊಂಡಾಗ, ‘ನಾವು ಮಾಡಬಹುದಲ್ಲಾ’ ಎಂದು ಆಸಕ್ತಿ ತೋರಿದ ಸಿಬ್ಬಂದಿ, ಒಂದೆರಡು ಮಾದರಿಗಳನ್ನು ತಯಾರಿಸಿದ್ದಾರೆ.

‘ಬಿಡುವಿನ ವೇಳೆಯಲ್ಲಿ ಸ್ವಾಮಿ ಮಧುಸೂದನ್, ರಾಘವೇಂದ್ರ , ರಂಗಸ್ವಾಮಿ ಒಂದೆರಡು ಪರಿಕರಗಳನ್ನು ಸಿದ್ಧಪಡಿಸಿದರು. ನಾವು ಅಂದುಕೊಂಡಂತೆ ಪರಿಕರಗಳು ಚೆನ್ನಾಗಿ ಮೂಡಿಬಂದವು. ಹಾಗೆಯೇ ಮುಂದುವರಿಸಿ, ಒಂದೇ ದಿನದಲ್ಲಿ 60ಕ್ಕೂ ಹೆಚ್ಚು ಪರಿಕರಗಳನ್ನು ಸಿದ್ಧಪಡಿಸಿದರು. ಈಗೇನಿದ್ದರೂ ಅವುಗಳನ್ನು ಪಕ್ಷಿಗಳು ಬರುವಂತಹ ಸ್ಥಳಗಳನ್ನು ಹುಡುಕಿ ತೂಗು ಹಾಕಬೇಕು. ಅದಕ್ಕಾಗಿ ಕೋಟೆಯನ್ನೇ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಕೃಷಿ ಅಧಿಕಾರಿ ಪುಟ್ಟಣ್ಣ ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.

ಈ ಪರಿಕರಗಳನ್ನು ತಯಾರಿಸುವುದು ಕಷ್ಟವೇನಲ್ಲ. ತುಸು ಕೌಶಲವಿದ್ದರೆ ಇನ್ನೂ ಸರಳಗೊಳಿಸಿಯೂ ತಯಾರಿಸಬಹುದು ಎನ್ನುತ್ತಾರೆ ಪುಟ್ಟಣ್ಣ.

ಈ ಪರಿಕರಗಳನ್ನು ಕೋಟೆಯ ಅಂಗಳದಲ್ಲಿ ಗಿಡಗಳಿಗೆ ತೂಗು ಹಾಕುವ ಜತೆಗೆ, ಪರಿಕರಗಳಿಗೆ ಆಹಾರ, ನೀರು ಹೇಗೆ ಹಾಕಬೇಕೆಂದು ಮಾಹಿತಿ ನೀಡುವಂತಹ ಭಿತ್ತಿಪತ್ರವನ್ನು ಸಮೀಪದಲ್ಲೇ ಅಂಟಿಸುತ್ತಿದ್ದಾರೆ. ‘ಹೀಗೆ ಮಾಡದಿದ್ದರೆ, ಆಹಾರ, ನೀರು ಖಾಲಿಯಾದಾಗ ಹೇಗೆ ಹಾಕಬೇಕೆಂದು ಜನರಿಗೆ ತಿಳಿಯುವುದಿಲ್ಲ. ಅದಕ್ಕೇ  ಪೋಸ್ಟರ್ ಮಾಡುತ್ತಿದ್ದೇವೆ. ಮೊದಲು ಆರೇಳು ಕಡೆ ಇವುಗಳನ್ನು ತೂಗು ಹಾಕಿ ನೋಡುತ್ತೇವೆ. ಸಾಧಕ–ಬಾಧಕಗಳನ್ನು ಅರಿತುಕೊಂಡು ಮುನ್ನಡೆಯುತ್ತೇವೆ’ ಎಂದು ತಿಳಿಸಿದರು.

ಶುದ್ಧೀಕರಿಸಿದ ಕ್ಯಾನ್‌ಗಳು!

‘ಪಕ್ಷಿಗಳಿಗೆ ಆಹಾರ–ನೀರು ಇಡುವುದಕ್ಕಾಗಿ ತಯಾರಿಸಿರುವ ವಸ್ತುಗಳಲ್ಲಿ ಮೊದಲು ಔಷಧಗಳನ್ನು (ಪೌಡರ್) ತುಂಬಿರುತ್ತಾರೆ. ಹೀಗಾಗಿ, ಆ ವಸ್ತುಗಳನ್ನು ಬಳಸುವ ಮುನ್ನವೇ ಒಂದು ದಿನ ನೀರಿನಲ್ಲಿ ನೆನೆಸಿಟ್ಟು, ನಂತರ ಸೋಪಿನ ನೀರಿನಲ್ಲಿ ಶುದ್ಧಗೊಳಿಸಿದ್ದೇವೆ. ಹಾಗಾಗಿ, ಯಾವುದೇ ತೊಂದರೆಯಿಲ್ಲ’ ಎಂದು ಪುಟ್ಟಣ್ಣ ವಸ್ತುಗಳ ಶುದ್ಧತೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

–––

‘ವಿಶ್ವ ಜಲ ದಿನ’ಕ್ಕಾಗಿ ಮಾಡಿರುವ ಪ್ರಯತ್ನ

ಮಣ್ಣು ಪರೀಕ್ಷಾ ಕೇಂದ್ರ ಸಿಬ್ಬಂದಿಯ ಪರಿಶ್ರಮ

ಆಸಕ್ತರೆಲ್ಲರೂ ತಯಾರಿಸಬಹುದಾದ ಪರಿಕರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry