ಗಂಗೇಚ ಯಮುನೇಚೈವ ಗೋದಾವರಿ ಇದೇನ್ ಗತಿ?

7

ಗಂಗೇಚ ಯಮುನೇಚೈವ ಗೋದಾವರಿ ಇದೇನ್ ಗತಿ?

ನಾಗೇಶ ಹೆಗಡೆ
Published:
Updated:
ಗಂಗೇಚ ಯಮುನೇಚೈವ ಗೋದಾವರಿ ಇದೇನ್ ಗತಿ?

ಬೇಸಿಗೆ ಬರುತ್ತಿದೆ, ನೀರಿನ ದಾಹದ ದಿನಗಳು ಬರುತ್ತಿವೆ, ಚುನಾವಣೆಯೂ ಬರುತ್ತಿದೆ. ಈ ನಡುವೆ ‘ವಿಶ್ವ ಜಲ ದಿನ’ ಇಂದು ಬಂದಿದೆ. ನೀರಿನ ನಿಭಾವಣೆ ಕುರಿತು ರಾಜಕೀಯ ನೇತಾಗಳು ಏನಾದರೂ ಹೊಸ ಆಶ್ವಾಸನೆಯನ್ನು ನೀಡಲಿದ್ದಾರೆಯೆ? ಬಿಡ್ತೂ ಅನ್ನಿ, ಪ್ರಣಾಳಿಕೆ ಬರೆಯುವವರು ಈಗಿನ್ನೂ ಪೆನ್ನು ಕಾಗದ, ಮೌಸ್ ಲ್ಯಾಪ್ ಟಾಪ್ ಕೈಗೆತ್ತಿಕೊಂಡಂತಿಲ್ಲ. ಹಾಗಾಗಿ ಏನೂ ಹೇಳುವಂತಿಲ್ಲ. ಆದರೆ ಈ ಒಂದು ದಿನವಾದರೂ ಧರ್ಮ, ಜಾತಿ, ಹಣಕಾಸು, ಭ್ರಷ್ಟಾಚಾರ ಇತ್ಯಾದಿ ವಿಷಯಗಳನ್ನು ಪಕ್ಕಕ್ಕಿಟ್ಟು, ನೀರಿನ ಬಗ್ಗೆ ಮಾತಾಡಬಹುದೆ?

ಅಂಥ ಸಂಭವ ತೀರಾ ಕಡಿಮೆ. ನಿನ್ನೆ 'ವಿಶ್ವ ಅರಣ್ಯ ದಿನ'ವಾಗಿತ್ತು. ಯಾರೂ ಅರಣ್ಯ ಕುರಿತು ಚಕಾರ ಎತ್ತಿದಂತಿಲ್ಲ. ಅರಣ್ಯವೇನೋ ದೂರದ ಸಂಗತಿ ಬಿಡಿ; ಅಲ್ಲಿ ವೋಟ್ ಬ್ಯಾಂಕ್ ಇಲ್ಲ. ಆದರೆ ನೀರಿನ ವಿಷಯ ಹಾಗಲ್ಲವಲ್ಲ. ಎಲ್ಲರಿಗೂ ಅದು ಬೇಕೇ ಬೇಕು. ಜನರ ಗಮನವನ್ನು ನೀರಿನ ಕಡೆ ತಿರುಗಿಸಬೇಕು. ನಾಳೆ ಬರಲಿರುವ ಸಮಸ್ಯೆಗಳಿಗೆ ಈಗಲೇ ಪರಿಹಾರ ಹುಡುಕೋಣವೆಂದು ಹುರಿದುಂಬಿಸಬೇಕು. ಜನರನ್ನು ಒಗ್ಗೂಡಿಸಬೇಕು. ನಾಯಕತ್ವವನ್ನು ಅಲ್ಲಿ ಪ್ರದರ್ಶಿಸಬೇಕು.

ಅಂಥ ಉದಾಹರಣೆಗಳೇ ನಮಗೆ ಸಿಗುತ್ತಿಲ್ಲ. ನೀರಿನ ವಿಷಯದಲ್ಲಿ ಜನರು ಬಡಿದಾಡುವಂತೆ ಮಾಡಬಲ್ಲವರು ಬೇಕಾದಷ್ಟು ಜನರು ಸಿಗುತ್ತಾರೆ. 'ಮಹದಾಯಿ ಹೋರಾಟವನ್ನು ತೀವ್ರಗೊಳಿಸಿ' ಎಂದು ಪಕ್ಷದ ಕಾರ್ಯಕರ್ತರಿಗೆ ಅಮಿತ್ ಶಾ ಕರೆಕೊಟ್ಟಿದ್ದು (ಈಗಲ್ಲ, ಜನವರಿ 1ರಂದು) ವರದಿಯಾಗಿತ್ತು. ಅಂಥದೇ ಕರೆಯನ್ನು ಕಾಂಗ್ರೆಸ್ ಪಕ್ಷದ ಹುರಿಯಾಳುಗಳೂ ಅನೇಕ ಬಾರಿ ಕೊಟ್ಟಿರುತ್ತಾರೆ. ಹೋರಾಟದ ಬದಲಿಗೆ ಬೇರೆ ಮಾರ್ಗ ಹುಡುಕಿರೆಂದು ವಿಜ್ಞಾನಿಗಳಿಗೆ, ಜಲತಜ್ಞರಿಗೆ, ಕೃಷಿತಜ್ಞರಿಗೆ, ಸಂಘಟಕರಿಗೆ ಕರೆಕೊಟ್ಟ ನೇತಾರರನ್ನು ಕಂಡಿಲ್ಲ ನಾವು.

ಈ ವರ್ಷದ ವಿಶ್ವ ಜಲದಿನದ ಸಂದರ್ಭದಲ್ಲಿ ‘ನೀರಿಗಾಗಿ ನಿಸರ್ಗ’ ಎಂಬ ಘೋಷವಾಕ್ಯವನ್ನು ವಿಶ್ವಸಂಸ್ಥೆ ನೀಡಿದೆ. ಅದರ ಅರ್ಥ ಏನೆಂದರೆ, ನೀರಿಗೆ ಸಂಬಂಧಿಸಿದಂತೆ ಇಂದಿನ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ನಿಸರ್ಗದಲ್ಲೇ ಉತ್ತರ ಇದೆ; ಅದನ್ನು ಅರ್ಥ ಮಾಡಿಕೊಳ್ಳೋಣ ಅಂತ. ನಿಸರ್ಗದ ಯಾವುದೇ ಘಟಕವನ್ನು ನೋಡಿದರೂ ಅಲ್ಲಿ ನೀರಿನ ವಿಷಯದಲ್ಲಿ ಪರಸ್ಪರ ಸಹಕಾರ, ಹೆಚ್ಚೆಂದರೆ ಸ್ಪರ್ಧೆ ಕಾಣುತ್ತದೆ ವಿನಾ ಹೋರಾಟವಿಲ್ಲ. ಒಂದೇ ಪ್ರಭೇದದ ಜೀವಿಗಳಲ್ಲಂತೂ ಇಲ್ಲ. ಜಿಂಕೆಗಳು, ಹುಲಿ-ಸಿಂಹಗಳು ಒಂದೇ ಕೊಳದ ನೀರನ್ನು ಏಕಕಾಲಕ್ಕೆ ಕುಡಿಯುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಅಂಥದ್ದನ್ನು ಪ್ರಕೃತಿಯಿಂದ ನಾವು ಕಲಿಯಬೇಕು. ಮೇಘಗಳಿಗೆ ಸಂದೇಶ ರವಾನಿಸಿ, ನೀರಿನ ಬಿಂದುಗಳನ್ನು ಕೆಳಕ್ಕೆ ಕರೆಯಿಸುವ ಸಸ್ಯಗಳ ಬಗ್ಗೆ ಕೇಳಿದ್ದೇವೆ. ಮೋಡಬಿತ್ತನೆಯ ಆ ತಂತ್ರದಲ್ಲಿ ಒಗ್ಗಟ್ಟಿದೆ ವಿನಾ ಪಳೆಯುಳಿಕೆ ಇಂಧನದ ಕಮಟಿನ ಹೊಗೆ ಇಲ್ಲ, ಕಾಂಚಾಣದ ಬಾಬತ್ತಿಲ್ಲ. ಹರಿಯುವ ನೀರಲ್ಲಿ ಕೊಳಕಿನ ಪ್ರಶ್ನೆಯೇ ಇಲ್ಲ. ಏಕೆಂದರೆ ಕೃತಕ ಕೆಮಿಕಲ್ ಬಳಕೆ ಇಲ್ಲ. ಭೂಕುಸಿತದಿಂದ ಅಥವಾ ಇನ್ನೇನೋ ಆಕಸ್ಮಿಕದಿಂದ ಜೀವಿಗಳು ಸತ್ತರೆ ಅದರ ಅಂಗಾಂಗಗಳನ್ನು ತಕ್ಷಣ ವಿಘಟನೆ ಮಾಡಿ ಅದನ್ನೇ ಪೋಷಕ ವಸ್ತುವಾಗಿ ಪರಿವರ್ತಿಸುವ ಚಾಕಚಕ್ಯತೆ ಅಲ್ಲಿದೆ. ಯಾವುದೇ ಬಗೆಯ ಕೃತಕ ಶಕ್ತಿಯನ್ನೂ ಬಳಸದೆ ನೀರನ್ನು ಮೇಲಕ್ಕೆತ್ತಿ ಗುರುತ್ವದ ವಿರುದ್ಧ ಪಂಪ್ ಮಾಡುವ ಅಚ್ಚರಿಯ ಕ್ಯಾಪಿಲ್ಲರಿ ತಂತ್ರ ಎಲ್ಲ ಸಸ್ಯಗಳಲ್ಲೂ ಬಳಕೆಯಲ್ಲಿದೆ. ಆ ಉಪಾಯ ಲಭಿಸಿದ್ದರಿಂದಲೇ ನೆಲದ ಮೇಲೆ ಸಸ್ಯಗಳಿವೆ, ನಾವೆಲ್ಲ ಇದ್ದೇವೆ. ಇನ್ನು ನೀರನ್ನು ಹಿತಮಿತವಾಗಿ, ಬೇಕೆಂಬಷ್ಟನ್ನೇ ಬಳಸುವುದನ್ನೂ ನಾವು ನಿಸರ್ಗದಿಂದಲೇ ಕಲಿಯಬೇಕಿದೆ. ಸಮತೋಲದ, ಸಮನ್ವಯ ಬದುಕಿನ ಎಲ್ಲ ಸೂತ್ರಗಳೂ ನಿಸರ್ಗದಲ್ಲೇ ಇವೆ. ನಾವು ಹೊಸದಾಗಿ ಪ್ರಯೋಗಶಾಲೆಯಲ್ಲಿ ಏನೇನನ್ನೋ ಮಾಡಿ ಕಲಿಯಬೇಕಾಗಿಲ್ಲ.

ನಿಸರ್ಗದ ಜೊತೆ ಸಹಬಾಳ್ವೆ ಮಾಡುತ್ತಿರುವ ಜನರಿಗೆ ಅವೆಲ್ಲ ಗೊತ್ತಿವೆ. ನಾವು ಅವರಿಂದ ತುಂಬ ದೂರ ಬಂದಿದ್ದರೂ ಅವರೇ ನಮ್ಮಿಂದ ದೂರ ಉಳಿದಿದ್ದಾರೆ ಎಂದು ನಾವು ಅಂದುಕೊಂಡಿದ್ದೇವೆ. ಹಾಗೆ ‘ದೂರ ಉಳಿದವರನ್ನು ವಿಜ್ಞಾನ ತಂತ್ರಜ್ಞಾನದ ಮೂಲಕ ತಲುಪುವುದು ಹೇಗೆ?’ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ವರ್ಷದ (105ನೇ) ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಕಳೆದ ವಾರ ಮಣಿಪುರದ ರಾಜಧಾನಿ ಇಂಫಾಲದಲ್ಲಿ ಸಂಪನ್ನವಾಯಿತು. ನೆನಪಿದೆ ತಾನೆ, ಪ್ರತಿವರ್ಷದಂತೆ ಜನವರಿ 3ರಂದು ಈ ರಾಷ್ಟ್ರೀಯ ವಿಜ್ಞಾನ ಜಂಬೂರಿ ಈ ವರ್ಷ ಹೈದರಾಬಾದಿನ  ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾಗಬೇಕಿತ್ತು. ಅಲ್ಲಿ ಸಣ್ಣದೊಂದು ಗಲಾಟೆ ನಡೆದಿದ್ದರಿಂದ ಕೊನೇ ನಿಮಿಷದಲ್ಲಿ ಅದು ರದ್ದಾಗಿ ಸಮ್ಮೇಳನವೇ ಇದೇ ಮೊದಲ ಬಾರಿಗೆ ಬೇರೊಂದು ಕಡೆ ವರ್ಗಾವಣೆಗೊಂಡಿತು.

ಆದರೆ ಉದ್ಘಾಟನಾ ಸಮಾರಂಭದಲ್ಲಿ ಒಂದು ಎಡವಟ್ಟಾಯಿತು. ಅದೇನೋ ಇದೇ ಮೊದಲ ಬಾರಿ ಅಲ್ಲ, ಬಿಡಿ. ಪ್ರಧಾನಿಯವರು ಉದ್ಘಾಟನಾ ಭಾಷಣ ಆರಂಭಿಸುವುದಕ್ಕೆ ಮೊದಲು, ಪ್ರಾಸ್ತಾವಿಕ ಮಾತಾಡಲು ನಿಂತ ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ಅವರು ಸ್ಟೀಫನ್ ಹಾಕಿಂಗ್ ಬಗ್ಗೆ ಏನೋ ಹೇಳಲು ಹೋಗಿ ವಿವಾದಕ್ಕೆ ಸಿಲುಕಿದರು. ‘ಐನ್‌ಸ್ಟೀನ್ ಸಿದ್ಧಾಂತಕ್ಕಿಂತ ಇನ್ನೂ ಮಹತ್ತರವಾದ ಸಂಗತಿಗಳು ವೇದಗಳಲ್ಲಿವೆಯೆಂದು ಸ್ಟೀಫನ್ ಹಾಕಿಂಗ್ ಹೇಳಿದ್ದರು’ ಎಂದು ವಿಜ್ಞಾನಿಗಳ ಸಮ್ಮುಖದಲ್ಲಿ ಹೇಳಿಬಿಟ್ಟರು. ‘ಹಾಕಿಂಗ್ ಈ ಮಾತನ್ನು ಯಾವಾಗ ಹೇಳಿದ್ದು?’ ಎಂದು ಮಾಧ್ಯಮದವರು ಪಟ್ಟು ಹಿಡಿದು ಕೇಳಿದರೆ ನುಣುಚಿಕೊಳ್ಳಲು ಯತ್ನಿಸಿದರು.

ಹಾಕಿಂಗ್ ಹೆಸರಿನ ಜೊತೆ ತಗುಲಿಕೊಂಡ ಈ ಹೇಳಿಕೆಯ ಮೂಲ ಎಲ್ಲಿದೆಯೆಂದು ಜಾಲಾಟತಜ್ಞರು ಹುಡುಕಿದ್ದೇ ಹುಡುಕಿದ್ದು. ಸ್ಟೀಫನ್ ಹಾಕಿಂಗ್ ಅವರ ಅಧಿಕೃತ ವೆಬ್ ಸೈಟಿನಲ್ಲಂತೂ ಇರಲಿಲ್ಲ. ನೋಡಿದರೆ ನಮ್ಮವರೇ ಹುಟ್ಟುಹಾಕಿದ್ದ ಫೇಕ್ ನ್ಯೂಸ್ (ಸುಳ್ಳು ಸುದ್ದಿ) ಅದಾಗಿತ್ತು. ಹರಿ.ಸೈಂಟಿಸ್ಟ್ ಎಂಬಾತನ ಫೇಸ್‌ಬುಕ್ ಪುಟದಲ್ಲಿ ಅದನ್ನು ಸೃಷ್ಟಿಸಲಾಗಿತ್ತು. ಆ ಹೇಳಿಕೆಯನ್ನು ಅನಾಮತ್ತಾಗಿ ಹೈದರಾಬಾದ್ ಮೂಲದ ‘ಐ ಸರ್ವ್’ ಎಂಬ ಸಂಸ್ಥೆ ತನ್ನ ಜಾಲತಾಣದಲ್ಲಿ ಮರು ಪ್ರಕಟಣೆ ಮಾಡಿತ್ತು. ವೇದಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸುತ್ತೇನೆಂದು ಹೇಳಿಕೊಳ್ಳುವ ಈ ಸಂಸ್ಥೆಗೆ ಗಣಪತಿ ಸಚ್ಚಿದಾನಂದ ಎಂಬುವರು ಪ್ರೇರಕ, ಪೋಷಕರಾಗಿದ್ದಾರಂತೆ. ಜಾಲತಾಣದ ತುಂಬ ದೇವಾನುದೇವತೆಗಳು, ಪೂಜೆ ಪ್ರಸಾದ ಸ್ವೀಕರಿಸುವ ಮಂತ್ರಿವರ್ಯರು ಎಲ್ಲ ಇದ್ದಾರೆ. ಅದರಲ್ಲಿ ಪ್ರಕಟವಾದ ಫೇಕ್ ನ್ಯೂಸನ್ನು ಅನಾಮತ್ತಾಗಿ ಎತ್ತಿದ ವಿಜ್ಞಾನ ಸಚಿವರು ಲೇವಡಿಗೆ ಗುರಿಯಾದರು. ಏನೆಲ್ಲ ರಗಳೆ ನೋಡಿ. ವೇದಗಳ ಬಗ್ಗೆ ಉತ್ಪ್ರೇಕ್ಷಿತ, ಸುಳ್ಳು ಸುದ್ದಿ ಹಬ್ಬಿಸುವವರಿಂದಾಗಿ ಅದರಲ್ಲಿನ ನಿಜವಾದ ಮಹತ್ವದ ಸಂಗತಿಗಳನ್ನೂ ನಂಬಲಾಗದ ಸ್ಥಿತಿ ಪದೇ ಪದೇ ಬರುತ್ತಿದೆ.

ಪ್ರಧಾನಿ ಮೋದಿಯವರು ಈಗ ಅಂಥ ಉತ್ಪ್ರೇಕ್ಷೆಗಳಿಂದ ದೂರವಿದ್ದಾರೆ. ಪುಷ್ಪಕ ವಿಮಾನ, ಗಣೇಶ, ಕರ್ಣ, ಕೌರವ, ಮುಂತಾದ ಉದಾಹರಣೆಗಳಿಂದ ಭಾರತದ ವಿಜ್ಞಾನ ಪರಂಪರೆಯನ್ನು ಕೊಂಡಾಡುತ್ತಿದ್ದ ಅವರು ಈಗ ನಿಖರವಾದ ವೈಜ್ಞಾನಿಕ ಸಂಗತಿಗಳ ಕುರಿತು ಮಾತಾಡುತ್ತಿದ್ದಾರೆ. ಮಣಿಪುರದ ಸಮ್ಮೇಳನದಲ್ಲಿ ಅವರು ಜನಸಾಮಾನ್ಯರಿಗೆ ಉಪಯುಕ್ತವಾಗಬಲ್ಲ ಅನೇಕ ಹೊಸ ಸಂಶೋಧನೆಗಳ ಕುರಿತು ಮಾತಾಡಿದ್ದಾರೆ. ನೀರಿನ ನಿರ್ವಹಣೆಗೆ ಸಂಬಂಧಿಸಿದ ಮೂರು ಪ್ರಮುಖ ಸಂಗತಿಗಳು ಅವರ ಮಾತಿನಲ್ಲಿದ್ದವು. ಬಿದಿರನ್ನು ಅರಣ್ಯ ಇಲಾಖೆಯ ಬಿಗಿಮುಷ್ಟಿಯಿಂದ ಬಂಧಮುಕ್ತ ಮಾಡಿದ್ದನ್ನು ಅವರು ಪ್ರಸ್ತಾಪಿಸಿದರು. ಬಿದಿರನ್ನು ಬೋಳುಗುಡ್ಡಗಳಲ್ಲಿ ಬೆಳೆಸಿದರೆ ಅದು ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ತಗ್ಗಿನಲ್ಲಿ ಬೆಳೆಸಿದರೆ ಕೊಳಕು ನೀರನ್ನು ಸೋಸುತ್ತದೆ. ಜಲಜೀವಿಗಳಿಗೆ ಬೇರಿನಲ್ಲಿ, ಇತರ ಜೀವಿಗಳಿಗೆ ಮೆಳೆಗಳಲ್ಲಿ ಆಸರೆ ನೀಡುತ್ತದೆ. ಅದಕ್ಕೇ ಬಿದಿರನ್ನು ಜೀವಲೋಕದ ಕಲ್ಪವೃಕ್ಷ ಎನ್ನಲಾಗುತ್ತದೆ. ಅದು ಸಮೃದ್ಧವಾಗಿ ಸಿಗುವುದಾದರೆ ಗ್ರಾಮಮಟ್ಟದಲ್ಲಿ ಎಷ್ಟೊಂದು ಹೊಸ ಉದ್ಯಮಗಳು ರೂಪುಗೊಳ್ಳಲು ಸಾಧ್ಯವಿದೆ. ಯಾರು ಬೇಕಾದರೂ ಅರಣ್ಯ ಇಲಾಖೆಯ ಅನುಮತಿ ಕೇಳದೇ ಕಾಡಿನ ಬಿದಿರನ್ನು ಸಾಗಿಸಿ ತಂದು ಕರಕುಶಲ ವಸ್ತುಗಳನ್ನು ತಯಾರಿಸಬಹುದು. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲೂ ಖಾಸಗಿಯವರು ಬಿದಿರನ್ನು ಬೆಳೆಸಲು ಅವಕಾಶ ನೀಡುವ ಹೊಸ ಅರಣ್ಯ ಮಸೂದೆಯೊಂದನ್ನು ಕೂಡ ನಿನ್ನೆಯಷ್ಟೇ ಸರ್ಕಾರ ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಿದೆ.

ನೀರನ್ನು ಬಳಸದೆಯೇ ಚರ್ಮವನ್ನು ಹದ ಮಾಡುವ ತಂತ್ರಜ್ಞಾನ ಇದೀಗ ಬಳಕೆಗೆ ಬರಲಿದೆ. ನಮ್ಮ ದೇಶದಲ್ಲಿ ಎರಡು ಸಾವಿರಕ್ಕೂ ಮಿಕ್ಕು ಚರ್ಮ ಸಂಸ್ಕರಣಾ ಘಟಕಗಳು ಕೆಲಸ ಮಾಡುತ್ತಿವೆ. ಎಲ್ಲವೂ ನೀರನ್ನು ಕೊಳೆ ಮಾಡುವ ನರಕ ಕೂಪಗಳೇ ಆಗಿದ್ದವು. ಕ್ರೋಮ್ ಲೆದರ್ ತಯಾರಿಸಲೆಂದು ಕ್ರೋಮಿಯಮ್ ಎಂಬ ವಿಷಭರಿತ ಭಾರಲೋಹವನ್ನು ಬಳಸಲಾಗುತ್ತಿತ್ತು. ಗಂಗೆ, ಯಮುನೆ, ಕಾವೇರಿ (ತಮಿಳುನಾಡಿನ ಭಾಗ), ಗೋದಾವರಿ, ನರ್ಮದೆ ಹೀಗೆ ಎಲ್ಲ ಪವಿತ್ರ ನದಿಗಳಿಗೂ ಅಂತರ್ಜಲಕ್ಕೂ ವಿಷ ಸೇರ್ಪಡೆ ಮಾಡುವ ಬಹುದೊಡ್ಡ ಉದ್ಯಮದ ದಿಕ್ಕನ್ನು ಈ ಹೊಸ ತಂತ್ರಜ್ಞಾನ ಬದಲಿಸುತ್ತದೊ ನೋಡಬೇಕು.

ಹಾಲಿನ ಗುಣಮಟ್ಟವನ್ನು ಮನೆಮನೆಗಳಲ್ಲಿ ಪರೀಕ್ಷೆ ಮಾಡಬಹುದಾದ ‘ಕ್ಷೀರ ಟೆಸ್ಟರ್’ ಎಂಬ ಸಲಕರಣೆಯೂ //////////////ಜನಸಾಮಾರನ್ಯರಿಗೆ ಲಭ್ಯವಾಗಲಿದೆ ಎಂದು ಮೋದಿಯವರು ಹೇಳಿದ್ದಾರೆ. ಹಾಲಿನಲ್ಲಿ ನೀರು, ಯೂರಿಯಾ, ಹಾಳು ಮೂಳು ಇದ್ದರೆ ಗೊತ್ತಾಗುತ್ತದಂತೆ. ನಾಲ್ಕಾರು ಸಾವಿರ ರೂಪಾಯಿ ಬೆಲೆಯುಳ್ಳ ಈ ಸಾಧನ ಮನೆಮನೆಯಲ್ಲಿ ಹೇಗೆ ಬಳಕೆಯಾಗುತ್ತದೊ? ಹಾಲು ಕೆಟ್ಟಿದ್ದರೆ ಹಿಂದಕ್ಕೆ ಪಡೆಯುವವರು ಬೇಕಲ್ಲ? ಶಾಲೆಗಳಲ್ಲಿ, ಹಾಸ್ಟೆಲುಗಳಲ್ಲಿ, ಡೇರಿಗಳಲ್ಲಿ ಬಳಕೆಗೆ ಬರುತ್ತದಾದರೂ ಅಲ್ಲಿ ಬೇರೊಂದು ಸಮಸ್ಯೆ ಇದೆ: ಹಿಂದೆ ಡೇರಿಗಳಲ್ಲಿ ಹಾಲಿನ ಗುಣಮಟ್ಟದ ಪರೀಕ್ಷೆಗೆಂದು ಅಂದಾಜು ತಲಾ 35 ಸಾವಿರ ರೂಪಾಯಿ ವೆಚ್ಚದ ‘ಮಿಲ್ಕ್ ಟೆಸ್ಟರ್’ ಹೆಸರಿನ ಸಲಕರಣೆಯನ್ನು ನಮ್ಮ ಕೆಎಮ್ಎಫ್ ದುಗ್ಧರ್ಶಕರು ಹತ್ತಾರು ಸಾವಿರ ಸಂಖ್ಯೆಯಲ್ಲಿ ಖರೀದಿಸಿ ಹಾಲಿನ ಸಂಗ್ರಹ ಕೇಂದ್ರಗಳಿಗೆ ವಿತರಣೆ ಮಾಡಿದ್ದರು. ಬಳಸಲು ಮನಸ್ಸಿಲ್ಲವೋ ಅಥವಾ ನಿಜಕ್ಕೂ ಕೆಟ್ಟಿವೆಯೊ ಅಂತೂ ಎಲ್ಲವೂ ಮೂಲೆಗುಂಪಾಗಿವೆ.

ಹಾಗೆ ನೋಡಿದರೆ, ಹಾಲಿಗಿಂತ ನೀರಿನ ಪರೀಕ್ಷೆಗೆ ಕಡಿಮೆ ವೆಚ್ಚದ ಸಾಧನವೊಂದು ಶ್ರಿಸಾಮಾನ್ಯನಿಗೆ ಹೆಚ್ಚು ಅಗತ್ಯವಿದೆ. ನಲ್ಲಿಯ ನೀರು ಅಶುದ್ಧವೆಂದೂ ಅದನ್ನು ಕುಡಿಯುವುದು ಆರೋಗ್ಯಕ್ಕೆ ಮಾರಕವೆಂದೂ ನಮ್ಮ ಮನಸ್ಸಿನಲ್ಲಿ ಬಿಂಬಿಸಿ ಖಾಸಗಿ ಕಂಪನಿಗಳು ತಮ್ಮ ಬಾಟಲಿಗಳಿಗೆ ಬೇಡಿಕೆ ಸತತ ಹೆಚ್ಚುವಂತೆ ಮಾಡಿವೆ. ತೆರಿಗೆದಾರನ ಹಣದಲ್ಲಿ ಜಲಮಂಡಲಿಯವರು ಅಷ್ಟೊಂದು ವಿದ್ಯುತ್ ಶಕ್ತಿ ವ್ಯಯಿಸಿ, ದೂರದ ನದಿಯಿಂದ ನೀರನ್ನು ಸಾಗಿಸಿ ತಂದು, ಫಿಲ್ಟರ್ ಮಾಡಿ, ಕ್ಲೋರಿನ್ ಬೆರೆಸಿ, ಸ್ಫಟಿಕಶುದ್ಧ ಜಲವನ್ನು ನಲ್ಲಿಯಲ್ಲಿ ಪೂರೈಸಿದರೂ ಅದನ್ನು ಮುಸುರೆ ತಿಕ್ಕಲು, ಕಕ್ಕಸು ಸ್ನಾನಕ್ಕಷ್ಟೆ ಬಳಸುವಂತಾಗಿದೆ. ಇತ್ತ ಜಲಮಂಡಲಿಯವರ ನೀರಿನ ಗುಣಮಟ್ಟವೂ ನಮಗೆ ಗೊತ್ತಿಲ್ಲ; ಅತ್ತ ಬಾಟಲಿ ನೀರಿನ ಗುಣಮಟ್ಟವೂ ನಮಗೆ ಗೊತ್ತಿಲ್ಲ. ಬೆಂಗಳೂರಿನ ಕೊಚ್ಚೆ ವೈತರಣಿ ಎಂದೇ ಖ್ಯಾತವಾದ ವೃಷಭಾವತಿಯ ದಡದಲ್ಲೇ ಖಾಸಗಿ ಕಂಪನಿಯೊಂದು ಅಂತರ್ಜಲವನ್ನು ಪಂಪ್ ಮಾಡಿ ಬಾಟಲಿ ತುಂಬಿ ಮಾರುತ್ತಿದೆ. ಈ ಕಂಪನಿಯ ವಿರುದ್ಧ ಕೇರಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ತಮಿಳುನಾಡಿನಲ್ಲಿ ಖಟ್ಲೆ, ಚಳವಳಿಗಳಾಗಿವೆ. ಅದರ ಬಾಟಲಿ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೆಮಿಕಲ್ ವಿಷಗಳೂ ಕೀಟನಾಶಕ ದ್ರವ್ಯಗಳೂ ಪತ್ತೆಯಾಗಿವೆ. ಈ ಖಾಸಗಿ ಕಂಪನಿಯ ವಿರುದ್ಧದ ಮೊದಲ ಚಳವಳಿ ಆರಂಭವಾಗಿದ್ದೇ ಆದಿವಾಸಿ ಮತ್ತು ಸಂಘಟಿತ ದಲಿತರ ಮೂಲಕ.

‘ದೂರ ಉಳಿದವರನ್ನು ವಿಜ್ಞಾನ- ತಂತ್ರಜ್ಞಾನದ ಮೂಲಕ ತಲುಪುವುದು ಹೇಗೆ?’ ಎಂಬ ಬಗ್ಗೆ ಸರ್ಕಾರಿ ವಿಜ್ಞಾನಿಗಳು ಈಗಷ್ಟೇ ಚರ್ಚೆ ಮಾಡುತ್ತಿದ್ದಾರೆ. ಖಾಸಗಿ ಕಂಪನಿಗಳು ಅವರನ್ನು ಎಂದೋ ತಲುಪಿಯಾಗಿದೆ. ಸರ್ಕಾರದ ಪರೋಕ್ಷ ಅಷ್ಟೇಕೆ, ಈಗೀಗ ಪ್ರತ್ಯಕ್ಷ ಬೆಂಬಲವೂ ಈ ಕಂಪನಿಗಳಿಗೆ ಸಿಗುತ್ತಿದೆ. ವ್ಯಂಗ್ಯ ಏನೆಂದರೆ, ನಿಸರ್ಗದ ಕರೆಗೆ ಓಗೊಡಲಿಕ್ಕೂ ಬಾಟಲಿ ಹಿಡಿದೇ ಹೋಗುವಂತಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry