ಬ್ಯಾಂಕ್‌ ಖಾಸಗೀಕರಣಕ್ಕೆ ನಂದನ್‌ ಬೆಂಬಲ

7

ಬ್ಯಾಂಕ್‌ ಖಾಸಗೀಕರಣಕ್ಕೆ ನಂದನ್‌ ಬೆಂಬಲ

Published:
Updated:
ಬ್ಯಾಂಕ್‌ ಖಾಸಗೀಕರಣಕ್ಕೆ ನಂದನ್‌ ಬೆಂಬಲ

ಮುಂಬೈ: ‘ಬ್ಯಾಂಕ್‌ಗಳ ರಾಷ್ಟ್ರೀಕರಣದ ಹಿಂದಿರುವ ಮೂಲ ಚಿಂತನೆ ಈಗ ತನ್ನ ಪ್ರಸ್ತುತತೆ ಕಳೆದುಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬೇಕಾಗಿದೆ’ ಎಂದು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಹೇಳಿದ್ದಾರೆ.

‘ಬ್ಯಾಂಕ್‌ಗಳು ಬರೀ ದೊಡ್ಡ ಉದ್ಯಮಿಗಳಿಗೆ ಮಾತ್ರ ಸಾಲ ನೀಡುತ್ತ, ಸಣ್ಣ – ಪುಟ್ಟ ವಹಿವಾಟುದಾರರನ್ನು ನಿರ್ಲಕ್ಷಿಸುತ್ತಿದ್ದ ಕಾರಣಕ್ಕೆ ಐದು ದಶಕಗಳ ಹಿಂದೆ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಕಾಲಾನಂತರದಲ್ಲಿ ರಾಷ್ಟ್ರೀಕರಣದ ಉದ್ದೇಶ ತನ್ನ ಮಹತ್ವ ಕಳೆದುಕೊಂಡಿದೆ. ಮಾರುಕಟ್ಟೆ ಶಕ್ತಿಗೆ ಅನುಗುಣವಾಗಿ ಬ್ಯಾಂಕ್‌ಗಳು ಈಗ ಕಾರ್ಯನಿರ್ವಹಿಸುತ್ತಿವೆ.  ಬ್ಯಾಂಕ್‌ಗಳು ಈಗಲೂ ದೊಡ್ಡ ಕಂಪನಿಗಳಿಗೆ ಸಾಲ ನೀಡಿ ಭಾರಿ ನಷ್ಟಕ್ಕೆ ಗುರಿಯಾಗಿವೆ. ತೆರಿಗೆದಾರರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದೇ ಒಳಿತು’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮಾರುಕಟ್ಟೆ ಪಾಲು ಶೇ 70ರಷ್ಟಿದೆ. ಮುಂದಿನ 10 ವರ್ಷಗಳಲ್ಲಿ ಈ ಪಾಲು ಶೇ 10ಕ್ಕೆ ಇಳಿಯಲಿದೆ. ರಾಷ್ಟ್ರೀಕರಣದ ಮುಂಚೆ ನಿರ್ಲಕ್ಷಕ್ಕೆ ಗುರಿಯಾಗಿದ್ದ ಸಣ್ಣ – ಪುಟ್ಟ ಸಾಲಗಾರರ ಅಗತ್ಯಗಳನ್ನೆಲ್ಲ ಒದಗಿಸಲು ಈಗ ತಂತ್ರಜ್ಞಾನವೂ ನೆರವಿಗೆ ಬಂದಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೀಡಾ ಖರೀದಿಗೂ ಮೊಬೈಲ್‌ ಮೂಲಕ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸುವುದು ಒಂದು ವರ್ಷದ ಒಳಗೆ ಜಾರಿಗೆ ಬರಲಿದೆ. ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಬಳಸಿ ಕ್ಯುಆರ್‌ ಕೋಡ್‌  ಆಧರಿಸಿದ ಹಣ ಪಾವತಿ ವ್ಯವಸ್ಥೆಯು ದೇಶದಲ್ಲಿ ತ್ವರಿತವಾಗಿ ಬಳಕೆಗೆ ಬರುತ್ತಿದೆ’ ಎಂದರು.

‘ಎಸ್‌ಎಂಇ’ಗಳ ಸಾಲದ ಹೊರೆ

‘ಸಣ್ಣ ಉದ್ದಿಮೆದಾರರ ವಸೂಲಾಗದ ಸಾಲದ ಪ್ರಮಾಣವು ಮುಂಬರುವ ದಿನಗಳಲ್ಲಿ ದೇಶಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೊಸ ಸಮಸ್ಯೆಯಾಗಿ ಕಾಡಲಿದೆ’ ಎಂದು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಉದಯ್‌ ಕೋಟಕ್‌ ಎಚ್ಚರಿಸಿದ್ದಾರೆ.

‘ಆರ್‌ಬಿಐ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ಜಾರಿಗೆ ತರಲು ಮುಂದಾಗುತ್ತಿದ್ದಂತೆ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಸ್‌ಎಂಇ) ವಸೂಲಾಗದ ಸಾಲದ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಲಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry