ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸವಾಲು

7
ಜೂಲನ್‌, ಮಿಥಾಲಿ ರಾಜ್ ಮೇಲೆ ಭರವಸೆ

ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸವಾಲು

Published:
Updated:
ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸವಾಲು

ಮುಂಬೈ: ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಎದುರು ಹೀನಾಯ ಸೋಲು ಅನುಭವಿಸಿದ್ದ ಭಾರತ ಮಹಿಳೆಯರ ತಂಡ ತ್ರಿಕೋನ ಟ್ವೆಂಟಿ–20 ಸರಣಿಯಲ್ಲಿ ಗುರುವಾರ ಶುಭಾರಂಭ ಮಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.

ಹರ್ಮನ್‌ಪ್ರೀತ್ ಬಳಗ ಹಿಂದಿನ ಸೋಲು ಮರೆತು ಆಸ್ಟ್ರೇಲಿಯಾಕ್ಕೆ ತಕ್ಕ ಪೈಪೋಟಿ ನೀಡಲು ಸಜ್ಜಾಗಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಕೂಡ ಆಡಲಿದೆ.

ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಭಾರತ 3–1ರಲ್ಲಿ ಜಯ ದಾಖಲಿಸಿತ್ತು. ಇದೇ ತಂಡ ಈಗ ಆಸ್ಟ್ರೇಲಿಯಾಕ್ಕೆ ಸವಾಲು ಒಡ್ಡಲಿದೆ.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಸ್ಮೃತಿ ಮಂದಾನ ಹೆಚ್ಚು ರನ್ ದಾಖಲಿಸಿದ್ದರು.

ಹರ್ಮನ್‌ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್‌ ಎದುರಾಳಿ ತಂಡದ ವೇಗದ ಬೌಲಿಂಗ್ ಶಕ್ತಿಗೆ ಸವಾಲಾಗಬಲ್ಲರು.

ಕರ್ನಾಟಕದ ವೇದಾ ಕೃಷ್ಣಮೂರ್ತಿ ಹಾಗೂ ಆಲ್‌ ರೌಂಡರ್‌ ಪೂಜಾ ವಸ್ತ್ರಕರ್‌ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸಿ ಮಿಂಚಿದ್ದರು. ಮುಂಬೈನ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ ತಮ್ಮ ನೈಜ ಆಟದಿಂದಾಗಿ ಈಗಾಗಲೇ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಅವರು 42 ರನ್ ಗಳಿಸಿದ್ದರು.

ಬೌಲಿಂಗ್‌ನಲ್ಲಿ ಅನುಭವಿ ಜೂಲನ್ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಇದ್ದಾರೆ.

ಗಾಯಗೊಂಡಿರುವ ಏಕ್ತಾ ಬಿಷ್ಠ್‌ ಅವರ ಬದಲಿಗೆ ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರಿಗೆ ಅವಕಾಶ ಸಿಕ್ಕಿದೆ. ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಹಾಗೂ ಪೂನಮ್ ಯಾದವ್‌ ದಕ್ಷಿಣ ಆಫ್ರಿಕಾ ಎದುರಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮೆಗ್ ಲ್ಯಾನಿಂಗ್‌ ಹಿಂದಿನ ಸರಣಿಯಲ್ಲಿ ಹೆಚ್ಚು ರನ್‌ ಕಲೆಹಾಕಿಲ್ಲ. ಈ ಪಂದ್ಯದಲ್ಲಿ ಅವರು ಫಾರ್ಮ್‌ಗೆ ಮರಳುವ ನಿರೀಕ್ಷೆ ಇದೆ. ವಿಕೆಟ್ ಕೀಪರ್ ಅಲಿಸಾ ಹೆಲೆ ಅಂತಿಮ ಏಕದಿನ ಪಂದ್ಯದಲ್ಲಿ 133ರನ್‌ ಸಿಡಿಸುವ ಮೂಲಕ ಮಿಂಚಿದ್ದರು.

ಎಡಗೈ ಸ್ಪಿನ್ನರ್ ಜೆಸ್‌ ಜೊನಾಸೆನ್‌ ಭಾರತದ ಬೌಲರ್‌ಗಳನ್ನು ಕಾಡಬಲ್ಲರು. ಏಕದಿನ ಸರಣಿಯಲ್ಲಿ ಅವರು ಒಟ್ಟು ಎಂಟು ವಿಕೆಟ್ ಕಬಳಿಸಿದ್ದರು.

ವೆಲ್ಲಿಂಗ್ಟನ್‌ ಮತ್ತು ಗಾರ್ಡನರ್ ಕೂಡ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ.

ತಂಡ ಇಂತಿದೆ

ಭಾರತ: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ ಮಿಥಾಲಿರಾಜ್‌, ವೇದಾ ಕೃಷ್ಣ ಮೂರ್ತಿ, ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ದೀಪ್ತಿ ಶರ್ಮಾ, ತಾನ್ಯಾ ಭಾಟಿಯಾ (ವಿಕೆಟ್ ಕೀಪರ್‌), ಪೂನಮ್ ಯಾದವ್‌, ರಾಜೇಶ್ವರಿ ಗಾಯಕ ವಾಡ್‌, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್‌, ರುಮೇಲಿ ಧರ್‌, ಮೋನಾ ಮೆಷ್ರಮ್‌. ಆಸ್ಟ್ರೇಲಿಯಾ: ಮೆಗ್‌ ಲ್ಯಾನಿಂಗ್‌ (ನಾಯಕಿ), ರಾಚೆಲ್‌ ಹೇನ್ಸ್‌, ನಿಕೋಲಾ ಕೇರೆ, ಆಷ್ಲೆ ಗಾರ್ಡನರ್‌, ಅಲಿಸಾ ಹೆಲೆ, ಜೆಸ್‌ ಜೊನಾಸೆನ್‌, ದಿಲಿಸಾ ಕಿಮಿನ್ಸ್‌, ಸೋಫಿ ಮೊಲಿನಕ್ಸ್‌, ಬೆತ್‌ ಮೂನಿ, ಎಲಿಸಾ ಪೆರೆ, ಮೇಗನ್‌ ಸಚ್‌, ನವೊಮಿ ಸ್ಟಲೆನ್‌ಬರ್ಗ್‌, ಎಲಿಸಾ ವಿಲ್ಲನಿ, ಅಮಂಡ–ಜೇಡ್ ವೆಲ್ಲಿಂಗ್ಟನ್‌.

---------

ಏಕದಿನ ಸರಣಿಯಲ್ಲಿ ಹೆಚ್ಚು ರನ್ ಕಲೆಹಾಕಿದ್ದ ಸ್ಮೃತಿ ಮಂದಾನ ಭರವಸೆ

ಜೆಮಿಮಾ ರಾಡ್ರಿಗಸ್‌ ಮಿಂಚುವ ವಿಶ್ವಾಸ

ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ಗೆ ಸ್ಥಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry