ರಾಜ್ಯಕ್ಕೆ ಬೇಕಿದೆ ಪರಿಣಾಮಕಾರಿ ಸೌರ ನೀತಿ: ಹರೀಶ್‌ ಹಂದೆ

7

ರಾಜ್ಯಕ್ಕೆ ಬೇಕಿದೆ ಪರಿಣಾಮಕಾರಿ ಸೌರ ನೀತಿ: ಹರೀಶ್‌ ಹಂದೆ

Published:
Updated:
ರಾಜ್ಯಕ್ಕೆ ಬೇಕಿದೆ ಪರಿಣಾಮಕಾರಿ ಸೌರ ನೀತಿ: ಹರೀಶ್‌ ಹಂದೆ

ಬೆಂಗಳೂರು: ‘ರಾಜ್ಯಕ್ಕೆ ಪರಿಣಾಮಕಾರಿ ಸೌರ ನೀತಿಯ ಅಗತ್ಯವಿದೆ. ಇದಕ್ಕಾಗಿ ನಾವು ಸಮಗ್ರವಾದ ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಜೂನ್‌ ನಂತರ ಸರ್ಕಾರದ ಮುಂದಿಡಲಿದ್ದೇವೆ’ ಎಂದು ಸೆಲ್ಕೊ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ.ಹರೀಶ್‌ ಹಂದೆ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ‘ನವೀಕರಿಸಬಹುದಾದ ಶಕ್ತಿಯ ಮೂಲಗಳು ಮತ್ತು ಬಡತನ ನಿರ್ಮೂಲನೆ’ ಕುರಿತು ಸಂವಾದದಲ್ಲಿ ಮಾತನಾಡಿದರು.

‘ರಾಜ್ಯ ಸರ್ಕಾರ ಈಗಾಗಲೇ ಸೌರ ನೀತಿ ಹೊಂದಿದೆ. ಆದರೆ, ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಸುಸ್ಥಿರ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಪೂರಕ ನೀತಿ ಅನುಷ್ಠಾನಕ್ಕೆ ತರುವ ಅಗತ್ಯವಿದೆ’ ಎಂದರು.

‘ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಬೃಹತ್‌ ಯೋಜನೆಗಳನ್ನು ಕೇಂದ್ರೀಕೃತವಾಗಿ ಆರಂಭಿಸುವುದಕ್ಕಿಂತ ವಿಕೇಂದ್ರೀಕರಣಗೊಳಿಸುವಂತಹ ನೀತಿ ಬೇಕಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸುವಂತೆ ರೂಪರೇಷೆಯನ್ನು ನಮ್ಮ ಸಂಸ್ಥೆ ಸಿದ್ಧಪಡಿಸಿದೆ’ ಎಂದರು.

ಸೌರ ವಿದ್ಯುತ್‌ನಿಂದ ಬ್ಯಾಟರಿ ರೀಚಾರ್ಜ್ ಮಾಡುವ ಮತ್ತು ಬ್ಯಾಟರಿಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಸುವ ಸ್ಟೇಷನ್‌ಗಳು ಇಸ್ರೇಲ್‌ನಲ್ಲಿ ಚಾಲ್ತಿಯಲ್ಲಿವೆ. 50ರಿಂದ 100 ಕಿ.ಮೀ. ಅಂತರದ ಸ್ಟೇಷನ್‌ಗಳಲ್ಲಿ ವಾಹನಗಳಿಗೆ ಬ್ಯಾಟರಿ ಬದಲಿಸಲಾಗುತ್ತದೆ. ಬ್ಯಾಟರಿ ಬದಲಾವಣೆ ಪ್ರಕ್ರಿಯೆ ಐದಾರು ನಿಮಿಷಗಳಲ್ಲಿ ಮುಗಿಯುತ್ತದೆ. ರೀಚಾರ್ಚ್‌ಗೆ ಕಾಯಬೇಕಾಗಿಲ್ಲ. ಇದೇ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲು ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಈ ಹಿಂದೆಯೇ ಸಲ್ಲಿಸಿದ್ದೇವೆ. ಒಪ್ಪಿಗೆ ಸಿಕ್ಕಿದರೆ ಜೆ.ಪಿ ನಗರ- ಜಯನಗರ ರಸ್ತೆ, ಯಲಹಂಕದ ಭಾಗದಲ್ಲಿ ಆಟೊಗಳಿಗೆ ಇದನ್ನು ಪ್ರಾಯೋಗಿಕವಾಗಿ ಅಳವಡಿಸುವ ಚಿಂತನೆಯೂ ಇದೆ ಎಂದರು.

‘ಜರ್ಮನಿ ಮತ್ತು ಅಮೆರಿಕದ ಮಾದರಿಗಳನ್ನು ನಮ್ಮ ದೇಶದ ಮೇಲೆ ಹೇರುವುದು ವೈಜ್ಞಾನಿಕ ಕ್ರಮವಲ್ಲ. ನಮ್ಮ ದೇಶ ಎಲ್ಲ ಬಗೆಯ ಹೊಸ ಆವಿಷ್ಕಾರಗಳಿಗೂ ಕೇಂದ್ರ ಸ್ಥಳವಾಗಿದೆ. ನಮ್ಮಲ್ಲಿ ಅಭಿವೃದ್ಧಿ ಮಾದರಿಗಳಿಗೆ ಕೊರತೆ ಇಲ್ಲ. ಎಸ್‌ಎಸ್‌ಎಲ್‌ಸಿ ನಂತರದ 5 ವರ್ಷಗಳ ಶಿಕ್ಷಣದಲ್ಲಿ ಅಭಿವೃದ್ಧಿ ಮಾದರಿಗಳನ್ನು ಪಠ್ಯವಾಗಿ ಅಳವಡಿಸಿದರೆ ಶೇ 10ರಷ್ಟು ಸಮಸ್ಯೆಗಳು ಮೂಲದಲ್ಲೇ ಪರಿಹಾರ ಕಾಣುತ್ತವೆ' ಎಂದು ಪ್ರಶ್ನೆಯೊಂದಕ್ಕೆ

ಪ್ರತಿಕ್ರಿಯಿಸಿದರು.

'ಅಮೆರಿಕದ ಅಧ್ಯಕ್ಷರನ್ನು ಎರಡು ಬಾರಿ ಭೇಟಿ ಮಾಡಿ, ನಮ್ಮ ಯೋಜನೆಗಳನ್ನು ಅವರ ಮುಂದಿಡಲು ಯಶಸ್ವಿಯಾಗಿದ್ದೇವೆ. ನಮ್ಮ ಯೋಜನೆ ಮತ್ತು ಸಲಹೆಗಳನ್ನು ವಿಶ್ವದ ಬೇರೆ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸುತ್ತಿವೆ. ಆದರೆ, ನಮಗೆ ಎರಡು ದಶಕಗಳಿಂದ ನಮ್ಮ ರಾಜ್ಯದಲ್ಲಿ ಇಂಧನ ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕಿಲ್ಲ. ಇಂಧನ ಇಲಾಖೆಗೂ ನಮ್ಮ ಹೊಸ ಆವಿಷ್ಕಾರಗಳು, ತಂತ್ರಜ್ಞಾನ ಬೇಕಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

‘ಸೌರ ವಿದ್ಯುತ್‌ ಫಲಕ, ಉಪಕರಣಗಳ ಮೇಲೆ ಈ ಹಿಂದೆ ಶೇ 12.50ರಷ್ಟು ತೆರಿಗೆ ಇತ್ತು. ಈಗ ಶೇ 5.50ರಷ್ಟು ಜಿಎಸ್‌ಟಿ ಹೇರಲಾಗಿದೆ. ಸೌರ ವಿದ್ಯುತ್‌ ಉತ್ಪಾದನಾ ಕ್ಷೇತ್ರ ಮತ್ತು ಉಪಕರಣಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇರಬೇಕು’ ಎಂದು ಸೆಲ್ಕೊ ಇಂಡಿಯಾ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಮೋಹನ್‌ ಹೆಗಡೆ ಅಭಿಪ್ರಾಯಪಟ್ಟರು.

ಸೋಲಾರ್‌ ಪಾರ್ಕ್‌ಗೆ ಎಲ್ಲಿಂದ ನೀರು?

‘ಬೃಹತ್‌ ಪ್ರಮಾಣದ ಸೋಲಾರ್‌ ಪಾರ್ಕ್‌ ನಿರ್ಮಿಸುವುದು ಅಷ್ಟೇನೂ ಕಾರ್ಯಸಾಧುವಲ್ಲ. ನೀರಿನ ಲಭ್ಯತೆ ಇಲ್ಲದಿರುವ ಪಾವಗಡದಂತಹ ಸ್ಥಳದಲ್ಲಿ ಮೆಗಾ ಸೋಲಾರ್‌ ಪಾರ್ಕ್‌ ನಿರ್ಮಿಸಲಾಗಿದೆ. ಸೌರ ಫಲಕಗಳ ಮೇಲೆ ಆವರಿಸುವ ದೂಳನ್ನು ನೀರು ಸಿಂಪಡಿಸಿ ನಿವಾರಿಸದಿದ್ದರೆ ಶೇ 30ರಷ್ಟು ವಿದ್ಯುತ್‌ ಉತ್ಪಾದನೆ ಕುಂಠಿತವಾಗುತ್ತದೆ. ನೀರಿನ ಮೂಲಗಳೇ ಇಲ್ಲದ ಇಂತಹ ಸ್ಥಳಗಳಲ್ಲಿ ಸೋಲಾರ್‌ ಪಾರ್ಕ್‌ ನಿರ್ವಹಣೆ ಅಷ್ಟು ಸುಲಭವಲ್ಲ’ ಎಂದು ಹರೀಶ್‌ ಹಂದೆ ಅಭಿಪ್ರಾಯಪಟ್ಟರು.

‘ರಾಜಸ್ಥಾನದಲ್ಲೂ ಇಂತಹದೇ ಮೆಗಾ ಸೋಲಾರ್ ಪಾರ್ಕ್‌ ಸ್ಥಾಪಿಸುವ ಯೋಜನೆಗೆ ಅಲ್ಲಿನ ಸರ್ಕಾರ ಮುಂದಾಗಿದೆ. ಮರಳುಗಾಡಿನಲ್ಲಿ ಸ್ಥಾಪಿಸುವ ಸೋಲಾರ್‌ ಪಾರ್ಕ್‌ಗೆ ನೀರಿನ ವ್ಯವಸ್ಥೆ ಮಾಡುವುದು ಸುಲಭದ ಕೆಲಸವಲ್ಲ. ಜತೆಗೆ ಇದು ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.

‘ಈ ಹಿಂದೆ ತಮಿಳುನಾಡಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ವಹಣೆಗೆ ಕುಡಿಯುವ ನೀರು ಬಳಕೆ ಮಾಡಿದಾಗ ಪರಿಸರವಾದಿಗಳಿಂದ ವಿರೋಧವೂ ವ್ಯಕ್ತವಾಗಿತ್ತು’ ಎಂದು ನೆನಪಿಸಿದರು.

3 ವರ್ಷದಲ್ಲಿ 300 ಸಂಶೋಧನಾ ಕೇಂದ್ರ ಆರಂಭ

‘2–3 ವರ್ಷಗಳಲ್ಲಿ ದೇಶದಾದ್ಯಂತ ಕನಿಷ್ಠ 300 ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ಆರಂಭಿಸುವ ಗುರಿ ಇದೆ. ಸದ್ಯ ರಾಜ್ಯದಲ್ಲಿ 8 ಮತ್ತು ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ತಲಾ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿವೆ’ ಎಂದು ಸೆಲ್ಕೊ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ.ಹರೀಶ್‌ ಹಂದೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry