ಉಕ್ಕಿನ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ

7
ತಾಲ್ಲೂಕಿನ ಕುಡಿತಿನಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ

ಉಕ್ಕಿನ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ

Published:
Updated:

ಬಳ್ಳಾರಿ: ಮಿತ್ತಲ್, ಬ್ರಹ್ಮಿಣಿ ಹಾಗೂ ಎನ್‌.ಎಂ.ಡಿ.ಸಿ ಉಕ್ಕಿನ ಕೈಗಾರಿಕೆಗಳನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ನೀಡಿದವರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ, ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯುನಿಯನ್ಸ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು ತಾಲ್ಲೂಕಿನ ಕುಡತಿನಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಪಾದಯಾತ್ರೆ ನಡೆಸಿದರು.

‘ತಾಲ್ಲೂಕಿನ ಕುಡತಿನಿ ಮತ್ತು ಹರಗಿನಡೋಣಿ, ವೇಣಿ ವೀರಾಪುರ, ಕೊಳಗಲ್ಲು, ಯರಂಗಳಿ, ಜಾನೆಕುಂಟೆ ಭಾಗದಲ್ಲಿರುವ ಸುಮಾರು 14,000 ಎಕರೆಕ್ಕಿಂತ ಹೆಚ್ಚಿನ ಕೃಷಿ ಭೂಮಿಯನ್ನು ಮಿತ್ತಲ್, ಬ್ರಹ್ಮಿಣಿ, ಮತ್ತು ಎನ್.ಎಂ.ಡಿ.ಸಿ ಉಕ್ಕಿನ ಕೈಗಾರಿಕೆಗಳ ಸ್ಥಾಪನೆಗಾಗಿ ವಶಪಡಿಸಿಕೊಳ್ಳಲಾಗಿದೆ. ಇದಾಗಿ, ಎಂಟು ವರ್ಷವಾದರೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿಲ್ಲ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು ಆಕ್ರೋಶ ವ್ಯಕ್ತಪಡಿಸಿದರು.

‘ಅಂದು ರಾಜ್ಯ ಸರ್ಕಾರ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಪಡೆದುಕೊಂಡಿದೆ. ಅಲ್ಲದೆ, ಭೂಮಿ ನೀಡಿದವರಿಗೆ ಉದ್ಯೋಗ ಕಲ್ಪಿಸಬೇಕಾಗಿತ್ತು. ಕೈಗಾರಿಕಗಳ ಸ್ಥಾಪನೆಗೊಳ್ಳದಿದ್ದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಒಪ್ಪಂದದಂತೆ ನಿಗದಿತ ಅವಧಿಯಲ್ಲಿ ಹಾಗೂ ಭೂಸ್ವಾಧೀನ ಕಾಯ್ದೆ 2013ರಡಿ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಹಾಗಾಗಿ, ರೈತರಿಗೆ ₹20 ಸಾವಿರ ಮಾಸಿಕ ಭತ್ಯೆಯನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಯಾವ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುತ್ತದೆಯೋ ಅದನ್ನು 5 ವರ್ಷದೊಳಗೆ ಸ್ಥಾಪಿಸಬೇಕು ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೈಗಾರಿಕೆಗಳು ಪ್ರಾರಂಭವಾಗಬೇಕು. ಇಲ್ಲದಿದ್ದರೆ ಭೂಮಿಯನ್ನು ರೈತರಿಗೆ ಮರಳಿ ನೀಡಬೇಕು. ಬಿ.ಟಿ.ಪಿಎಸ್ ಮತ್ತು ಎಸಿಸಿ ಸಿಮೆಂಟ್ ಕಾರ್ಖಾನೆಗಳ ಭೂಮಿಯನ್ನು ನೀಡಿರುವ ಕುಟುಂಬಗಳಿಗೆ ಕೂಡಲೇ ಉದ್ಯೋಗವನ್ನು ನೀಡಬೇಕು’ ಎಂದು ಒತ್ತಾಯಿಸಿದರು.

‘ಕೆ.ಐ.ಎ.ಡಿ.ಬಿ. ಅಭಿವೃದ್ದಿಪಡಿಸಿದ ಪ್ರದೇಶಗಳಲ್ಲಿ ಭೂ ಸಂತ್ರಸ್ತರಿಗೆ ಶೇ 50ರಷ್ಟು ನೀಡಬೇಕು. ಕೆ.ಪಿ.ಸಿ.ಎಲ್ ಹಾಗೂ ಕೆ.ಪಿ.ಟಿ.ಸಿ.ಎಲ್.ಗಳಿಗೆ ಜಮೀನು ನೀಡಿದ ರೈತರ ಕುಟುಂಬಗಳಿಗೆ ಕನಿಷ್ಠ ಒಂದು ಉದ್ಯೋಗವಾದರೂ ನೀಡಬೇಕು. ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಅದಕ್ಕಾಗಿ, ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಬೇಕು’ ಎಂದರು.

ಮುಖಂಡರಾದ ಎಂ. ಯರ್ರೆಮ್ಮ, ಹೆಚ್. ತಿಪ್ಪಯ್ಯ, ಕೆ.ಎಂ. ತಿಪ್ಪೇಸ್ವಾಮಿ, ಕೆ. ಮಹಾಂತಮ್ಮ, ರಾಗಲಪೇಟ ಸುನೀತಾ, ನೀಲಾವತಿ, ಎ.ಶ್ರೀನಿವಾಸ್, ರುದ್ರಮ್ಮ, ಮಲ್ಲಮ್ಮ ಇದ್ದರು.

**

‘ವಂಚನೆ ಬಗ್ಗೆ ತನಿಖೆಯಾಗಲಿ’

‘ಮಿತ್ತಲ್ , ಬ್ರಹ್ಮಿಣಿ ಹಾಗೂ ಎನ್.ಎಂ.ಡಿ.ಸಿ ಕೈಗಾರಿಕೆಗಳು ಭೂಮಿ ಖರೀದಿಯಲ್ಲಿ ₹ 5 ಸಾವಿರ ಕೋಟಿ ಯಷ್ಟು ವಂಚನೆ ಮಾಡಿವೆ. ಇದನ್ನು ತನಿಖೆಗೆ ಒಳಪಡಿಸಬೇಕು. ಹೊಸದರವನ್ನು ನಿಗದಿ ಮಾಡಿ, ಮತ್ತೊಮ್ಮೆ ಭೂಮಿಯನ್ನು ಖರೀದಿ ಮಾಡಬೇಕು’ ಎಂದು ಜೆ. ಸತ್ಯಬಾಬು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry