ಸಮಸ್ಯೆ ತಂದೊಡ್ಡಿದ ಕಸಾಯಿಖಾನೆ ತ್ಯಾಜ್ಯ

7
ಪುರಸಭೆ ಮತ್ತು ಆರೋಗ್ಯಾಧಿಕಾರಿಗಳ ವರ್ತನೆಗೆ ಸಾರ್ವಜನಿಕರ ತೀವ್ರ ಅಸಮಾಧಾನ

ಸಮಸ್ಯೆ ತಂದೊಡ್ಡಿದ ಕಸಾಯಿಖಾನೆ ತ್ಯಾಜ್ಯ

Published:
Updated:

ಬಾಗೇಪಲ್ಲಿ: ಕಸಾಯಿಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಪಟ್ಟಣದಲ್ಲಿಬೀದಿ ನಾಯಿಗಳು, ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿ ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿವೆ.

ಪಟ್ಟಣದ ಹೃದಯ ಭಾಗದಲ್ಲಿರುವ ಕುಂಬಾರಪೇಟೆ ಮುಖ್ಯರಸ್ತೆಯಲ್ಲಿರುವ ಕಸಾಯಿಖಾನೆಗಳ ಮಾಲೀಕರು ಅಂಗಡಿಯ ಮುಂಭಾಗದಲ್ಲಿ ಕುರಿ, ಕೋಳಿ, ಮೇಕೆ,

ಮೀನುಗಳನ್ನು ವಧೆ ಮಾಡುವ ಜತೆಗೆ ತ್ಯಾಜ್ಯವನ್ನು ಅಂಗಡಿ ಮುಂಭಾಗದಲ್ಲಿಯೇ ಬಿಸಾಡುತ್ತಿದ್ದಾರೆ. ಇದನ್ನೆಲ್ಲ ಕಂಡರೂ ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ಪುರಸಭೆ ಮತ್ತು ಆರೋಗ್ಯಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಸಾಯಿಖಾನೆಗಳ ಬಳಿ ಸ್ವಚ್ಛತೆ ಮರೀಚಿಕೆಯಾಗಿದೆ. ಕಸಾಯಿಖಾನೆ ಮಾಲೀಕರು ಯಾವುದೇ ನಿಯಮಗಳು ಪಾಲಿಸದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಕೆಲ ಕಸಾಯಿಖಾನೆ ಮಾಲೀಕರು ರೋಗಗ್ರಸ್ಥ ಪ್ರಾಣಿಗಳನ್ನು ವಧೆ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಂತಹ ಮಾಂಸ ಸೇವನೆಯಿಂದ ಜ್ವರ, ವಾಂತಿ, ಭೇದಿ, ಕೈಕಾಲು–ಮಂಡಿಗಳಲ್ಲಿ ನೋವು ಕಾಣಿಸಿಕೊಂಡು, ಪ್ರತಿನಿತ್ಯ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ಚನ್ನರಾಯಪ್ಪ ತಿಳಿಸಿದರು.

‘ಈ ಹಿಂದೆ ಪಶು ವೈದ್ಯರು ಕುರಿ, ಮೇಕೆಗಳನ್ನು ಪರೀಕ್ಷೆ ಮಾಡಿ ದೃಢೀಕರಣ ನೀಡಿದ ಬಳಿಕ ಪ್ರಾಣಿಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಿ ಕತ್ತರಿಸಲಾಗುತ್ತಿತ್ತು. ಜತೆಗೆ ಮಾಂಸವನ್ನು ಸ್ವಚ್ಛ ಸ್ಥಳದಲ್ಲಿಟ್ಟು ಮಾರಾಟ ಮಾಡುತ್ತಿದ್ದರು. ಆದರೆ ಇವತ್ತು ಅಧಿಕಾರಿಗಳಂತೂ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಇದರಿಂದ ಕಸಾಯಿಖಾನೆಯವರಿಗೆ ಮತ್ತಷ್ಟು ಅನುಕೂಲವಾಗಿದೆ’ ಎಂದು ಸ್ಥಳೀಯ ನಿವಾಸಿ ಕಾರಕೂರಪ್ಪ

ಹೇಳಿದರು.

‘ಅಸುರಕ್ಷಿತ ಮಾಂಸ ಸೇವನೆಗೆ ಸಾರ್ವಜನಿಕರು ಬಲಿಯಾಗುವ ಮುನ್ನ ಕೂಡಲೇ ಪುರಸಭೆಯವರು ಪಟ್ಟಣದ ನಿಗದಿತ ಸ್ಥಳದಲ್ಲಿ ಮಾತ್ರ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕು. ಸ್ವಚ್ಛತೆ ಮತ್ತು ಗುಣಮಟ್ಟದ ಮೇಲೆ ನೀಗಾ ಇಡಬೇಕು. ಇಲ್ಲದಿದ್ದರೆ ಪುರಸಭೆ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry