ನುಡಿದಂತೆ ನಡೆಯದ ನರೇಂದ್ರ ಮೋದಿ: ಟೀಕೆ

7
ಜಿಲ್ಲೆಯೊಂದಿಗಿನ ಕುಟುಂಬದ ನಂಟು ನೆನಪಿಸಿಕೊಂಡ ರಾಹುಲ್‌ ಗಾಂಧಿ

ನುಡಿದಂತೆ ನಡೆಯದ ನರೇಂದ್ರ ಮೋದಿ: ಟೀಕೆ

Published:
Updated:
ನುಡಿದಂತೆ ನಡೆಯದ ನರೇಂದ್ರ ಮೋದಿ: ಟೀಕೆ

ಚಿಕ್ಕಮಗಳೂರು: ‘ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಪುರಾತನ ನಂಟು ಇದೆ. ನಮ್ಮ ಅಜ್ಜಿ ಇಂದಿರಾಗಾಂಧಿ ಅವರನ್ನು ರಾಜಕೀಯ ದಮನ ಮಾಡುವ ಪ್ರಯತ್ನ ನಡೆಯುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಜನರು ಅವರನ್ನು ಕೈಹಿಡಿದಿದ್ದರು. ಇಲ್ಲಿನ ಜನರು ಯಾವಾಗ ಕರೆದರೂ ನಾನು ಬರುತ್ತೇನೆ’ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿ, ‘ಇಂದಿರಾಗಾಂಧಿ ಅವರಿಗೆ ಶಕ್ತಿ ತುಂಬಿದ ಜಿಲ್ಲೆ ಇದೆ. ಜಿಲ್ಲೆಯ ಜನರ ಪ್ರೀತಿಗೆ ಎಂದಿಗೂ ಅಭಾರಿಯಾಗಿರುತ್ತೇನೆ. ಸಾರ್ವಜನಿಕ ಬದುಕಿನಲ್ಲಿ ನೀವು ನೀಡುವ ಸಂಪೂರ್ಣ ಸಾಮರ್ಥ್ಯವನ್ನು ದೇಶದ ಬಡವರ, ಶೋಷಿತರ ಏಳಿಗೆಗಾಗಿ ಬಳಸಿಕೊಳ್ಳುತ್ತೇನೆ’ ಎಂದು ಹೇಳಿದರು.

‘ನುಡಿದಂತೆ ನಡೆ’ ಎಂದು ಬಸವಣ್ಣ ಹೇಳಿದ್ದಾರೆ. ಪ್ರಧಾನಿ ಮೋದಿ ಅವರೂ ಬಸವಣ್ಣನ ಹೆಸರು ಹೇಳುತ್ತಾರೆ. ಆದರೆ ಅವರು ನುಡಿದಂತೆ ನಡೆಯುವುದಿಲ್ಲ. ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ ₹ 15 ಲಕ್ಷ ಜಮೆ ಮಾಡುವುದಾಗಿ 2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಹೇಳಿದ್ದರು. ₹ 15 ಲಕ್ಷ ಇರಲಿ, ₹ 10 ಆದರೂ ಯಾರಿಗಾದರೂ ಹಾಕಿದ್ದಾರಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಅವರು ಪ್ರಧಾನಿಯಾಗಿ ನಾಲ್ಕು ವರ್ಷಗಳಾಗಿದೆ, ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಒದಗಿಸುವುದಾಗಿ ಮೋದಿ ಅವರು ರೈತರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಅವರು ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿದ್ದಷ್ಟೂ ಬೆಂಬಲ ಬೆಲೆಯನ್ನು ಅವರು ನೀಡುತ್ತಿಲ್ಲ. ಅಷ್ಟೇ ಅಲ್ಲ ಭಾರತದ ಶ್ರೀಮಂತ ಕೈಗಾರಿಕೋದ್ಯಮಿಗಳ ₹ 2.5 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಆದರೆ, ಭಾರತದ ರೈತರ ಸಾಲಮನ್ನಾ ಮಾಡಲು ಅವರಿಗೆ ಮನಸ್ಸಿಲ್ಲ’ ಛೇಡಿಸಿದರು.

ಪ್ರಧಾನಿ ಕಚೇರಿಗೆ ಹೋಗಿ ರೈತರ ಸಾಲಮನ್ನಾ ಮಾಡುವಂತೆ ಮೋದಿ ಅವರನ್ನು ಮನವಿ ಮಾಡಿದ್ದೆ. ಆದರೆ, ಅವರು ಉತ್ತರ ನೀಡಲೇ ಇಲ್ಲ. ರಾಜ್ಯದ ರೈತರ ಸಾಲಮನ್ನಾ ಮಾಡಲು ಸಾಧ್ಯವೇ ಎಂದು ಕರ್ನಾಟಕದ ಕಾಂಗ್ರೆಸ್‌ ನಾಯಕರಿಗೆ ಕೇಳಿದ್ದೆ. ರೈತರು ಸಹಕಾರ ಬ್ಯಾಂಕುಗಳಲ್ಲಿ ಪಡೆದ ₹ 50 ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಿದರು’ ಎಂದು ಹೇಳಿದರು.

‘ನಿಮ್ಮ ಖಾತೆಗೆ ₹15 ಲಕ್ಷ ಹಣ ಹಾಕುತ್ತೇನೆ ಎಂಬ ಸುಳ್ಳನ್ನು ನಾನು ಹೇಳುವುದಿಲ್ಲ. ನಿಮ್ಮ ಸಮಯವನ್ನು ಗೌರವಿಸುತ್ತೇನೆ. ಆರೋಗ್ಯ, ಶಿಕ್ಷಣ, ಕೃಷಿ ಯಾವುದೇ ವಿಚಾರಗಳ ಬಗ್ಗೆ ಬರಿ ಮಾತನಾಡುವುದಿಲ್ಲ. ಅವಕಾಶ ಸಿಕ್ಕಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ. ಮಾತಿಗೊಂದು ಬೆಲೆ, ತೂಕ ಇರಬೇಕು. ನಾಯಕರ ಮಾತಿಗೆ ಗೌರವ ಇರಬೇಕು’ ಎಂದು ಹೇಳಿದರು.

‘ರಕ್ಷಣೆ, ಉದ್ಯೋಗ, ಆರೋಗ್ಯ, ಶಿಕ್ಷಣ ಈ ಯಾವ ವಿಚಾರದ ಬಗ್ಗೆಯೂ ಪ್ರಧಾನಿ ಚಕಾರ ಎತ್ತುತ್ತಿಲ್ಲ. ನಾವು ಆಶ್ವಾಸನೆ ಕಡಿಮೆ ಮಾಡಿಕೊಟ್ಟಿದ್ದೇವು. ಹೆಚ್ಚು ಸಾಧಿಸಿದ್ದೆವು. ಕರ್ನಾಟಕದಲ್ಲಿ ಅನ್ನಭಾಗ್ಯ ಜಾರಿಗೊಳಿಸಿದ್ದರಿಂದ ಒಂದು ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ವಿದ್ಯಾರ್ಥಿನಿಯರಿಗೆ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ಗುಜರಾತಿನಲ್ಲಿ ಬಿಜೆಪಿಯು ಶೇ 90ರಷ್ಟು ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಖಾಸಗೀಕರಣಗೊಳಿಸಿದೆ. ಗುಜರಾತ್‌ನಲ್ಲಿ ಶಿಕ್ಷಣ ಪಡೆಯಲು ಒಬ್ಬ ವಿದ್ಯಾರ್ಥಿ ₹ 15 ಲಕ್ಷದವರೆಗೆ ವೆಚ್ಚ ಮಾಡಬೇಕು. ಈ ಹಣವೆಲ್ಲ ಗುಜರಾತಿನ 20 ಶ್ರೀಮಂತರ ಪಾಲಾಗಿದೆ’ ಎಂದು ಆರೋಪಿಸಿದರು.

‘ಮೋದಿ ಅವರು ರಾಜ್ಯದಲ್ಲಿ ವೇದಿಕೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಆಪಾದನೆ ಹೊಂದಿದ ನಾಲ್ಕೈದು ಮಂದಿ ಆ ವೇದಿಕೆಗಳಲ್ಲಿ ಇರುತ್ತಾರೆ. ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಹೋಗಿ ರಫಾಲ್‌ ಯುದ್ಧ ವಿಮಾನದ ಡೀಲ್‌ ಮಾಡಿ ಸಹಸ್ರಾರು ಕೋಟಿ ರೂಪಾಯಿ ಲಾಭವನ್ನು ಅವರ ಉದ್ಯಮಿ ಸ್ನೇಹಿತರಿಗೆ ಮಾಡಿಕೊಟ್ಟಿದ್ದಾರೆ’ ಎಂದು ಲೇವಡಿ ಮಾಡಿದರು.

‘ಭಾರತದಲ್ಲಿ 60 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಮೋದಿ ಹೇಳಿದ್ದಾರೆ. ಪೂರ್ವಿಕರನ್ನು ಅಪಮಾನಗೊಳಿಸುವ ಹೇಳಿಕೆ ಇದು. ಮೋದಿ ಪ್ರಧಾನಿ ಆಗುವುದಕ್ಕೆ ಮುಂಚೆ ಈ ದೇಶದ ಜನರು ಅಭಿವೃದ್ಧಿಗೆ ಏನು ಮಾಡಿಲ್ಲವಾ? ಒಬ್ಬ ವ್ಯಕ್ತಿ ಈ ದೇಶವನ್ನು ಕಟ್ಟಲು ಸಾಧ್ಯ ಇಲ್ಲ. ಹೃದಯದಲ್ಲಿ ಕರುಣೆ, ಪ್ರೀತಿ ಇದ್ದ ಪ್ರಧಾನಿಗಳು ದೇಶದಲ್ಲಿ ಯಶಸ್ವಿಯಾಗಿದ್ದಾರೆ. ಗೌರವ, ಪ್ರೀತಿ ಇಲ್ಲದಿದ್ದರೆ ಈ ದೇಶ ಮುನ್ನಡೆಸಲು ಸಾಧ್ಯ ಇಲ್ಲ’ ಎಂದು ಅವರು ಹೇಳಿದರು.

‘ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಕಟೀಬ ದ್ಧರಾಗಿ ಶ್ರಮಿಸುತ್ತಿದ್ದಾರೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಹರಿಪ್ರಸಾದ್‌, ವೇಣು ಗೋಪಾಲ್‌, ವಿಷ್ಣುನಾಥನ್‌, ಬಿ.ಎಲ್‌.ಶಂಕರ್‌, ಎಸ್‌.ಆರ್‌.ಪಾಟೀಲ್‌, ಜಿ.ಎಚ್‌.ಶ್ರೀನಿವಾಸ್‌, ಡಾ.ಡಿ.ಎಲ್‌.ವಿಜಯಕುಮಾರ್‌, ಡಾ.ಜಿ.ಪರಮೇಶ್ವರ್‌, ಮೋಟಮ್ಮ, ಗಾಯತ್ರಿಶಾಂತೇಗೌಡ, ಡಿ.ಕೆ.ತಾರಾದೇವಿ, ಎಂ.ಸಿ.ಶಿವಾನಂದಸ್ವಾಮಿ ಅವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry