ಮಕ್ಕಳಿಗೆ ಶುದ್ಧ ನೀರು ಕೊಡುತ್ತಿದ್ದೇವೆಯೇ?

7
ವಿಶ್ವ ಜಲ ದಿನಾಚರಣೆಯಲ್ಲಿ ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಎಸ್. ಸ್ವಾಮಿ

ಮಕ್ಕಳಿಗೆ ಶುದ್ಧ ನೀರು ಕೊಡುತ್ತಿದ್ದೇವೆಯೇ?

Published:
Updated:

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶುದ್ಧ ನೀರು ಕೊಡುತ್ತಿದ್ದೇವೆಯೇ ಎಂಬುದರ ಕುರಿತು ಎಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಎಸ್. ಸ್ವಾಮಿ ತಿಳಿಸಿದರು.

ಇಲ್ಲಿನ ಋುಷಿ ಸಂಸ್ಕೃತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಲ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ, ಶುದ್ಧ ಪರಿಸರ ಮಕ್ಕಳ ಹಕ್ಕಲ್ಲವೇ ಎಂದು ಪ್ರಶ್ನಿಸಿದ’ ಅವರು, ‘ಬಡ, ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ನಾವು ಕಲುಷಿತ ವಾತಾವರಣದಲ್ಲಿ ಬೆಳೆಸಬಾರದು. ಅವರ ಹಕ್ಕುಗಳನ್ನು ರಕ್ಷಿಸಲು ನಾವೆಲ್ಲರೂ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕೆಲ ಶಾಲೆಗಳು ಕೆರೆಗಳ, ಚರಂಡಿಗಳ, ರಾಜಕಾಲುವೆಗಳ, ಕಾರ್ಖಾನೆಗಳ ಪಕ್ಕ ನಿರ್ಮಾಣವಾಗಿವೆ. ಅಂಥ ಶಾಲೆಗಳಲ್ಲಿ ಓದುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲವೊಮ್ಮೆ ಉತ್ತಮ ವಾತಾವರಣದಲ್ಲಿ ಶಾಲೆಗಳಿದ್ದರೂ ಪರಿಸರ ಮಾಲಿನ್ಯವಾಗುತ್ತಿದೆ. ಆದ್ದರಿಂದ ಕಲುಷಿತ ನೀರನ್ನು ಸಂಸ್ಕರಿಸುವ ಘಟಕ ಆರಂಭಿಸಬೇಕು ಎಂದು ಹೇಳಿದರು.

ಚಿತ್ರ ಕಲಾವಿದ ಬೇದ್ರೆ ನಾಗರಾಜ್ ಮಾತನಾಡಿ, ‘ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕಲು ಶುದ್ಧವಾದ ಕುಡಿಯುವ ನೀರಿನ ಅವಶ್ಯಕತೆ ಇದೆ. ಅದರ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗ್ರತೆ ಮೂಡಿಸಬೇಕು’ ಎಂದರು.

ವಿಶ್ವ ಜಲ ದಿನಾಚರಣೆಯೂ ಜನರಲ್ಲಿ ಮಾಲಿನ್ಯ ನಿಯಂತ್ರಣ, ಪರಿಸರದ ಉಳಿವಿನ ಕುರಿತು ಚಿಂತನೆ ಹುಟ್ಟಿಸಬೇಕು. ಮುಂದಿನ ತಲೆಮಾರು ಆರೋಗ್ಯವಾಗಿ ಬದುಕಬೇಕೆಂದರೆ ಕೆರೆ, ಕಟ್ಟೆ, ಬಾವಿ, ಕಲ್ಯಾಣಿಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯ ಶಿಕ್ಷಕಿ ನೇತ್ರಾವತಿ, ಸಂಧ್ಯಾ, ಶಾಲಿನಿ, ಮಂಜುಳಾ, ಶ್ವೇತಾ, ಜೆ.ಎಚ್. ಶಂಭು ಇದ್ದರು.

ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು ‘ಮಾಲಿನ್ಯ ನಿಯಂತ್ರಿಸಿ, ಜಲ ಉಳಿಸಿ’ ಎಂದು ಘೋಷಣೆ ಕೂಗಿದರು. ಜಲ ಸಂರಕ್ಷಣೆಯ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry