ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

7
ಇಡೀ ದಿನ ಕಾಯ್ದರೂ ಸಿಗುವುದು ಐದಾರು ಬಿಂದಿಗೆ ನೀರು; ಸ್ಪಂದಿಸದ ಜಿಲ್ಲಾಡಳಿತ

ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

Published:
Updated:
ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

ಧಾರವಾಡ: ಬೇಸಿಗೆ ಆರಂಭದಲ್ಲೇ ಮಲೆನಾಡ ಸೆರಗಿನ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಈ ಭಾಗದ ಯಾವುದೇ ಊರುಗಳಿಗೆ ಹೋದರೂ ವಾರಸುದಾರರ ಹೆಸರು ಬರೆದ ನೂರಾರು ಖಾಲಿ ಕೊಡಗಳು ಸರತಿ ಸಾಲಿನಲ್ಲಿ ಇಟ್ಟಿರುವ ದೃಶ್ಯ ಕಂಡುಬರುತ್ತದೆ.

ಕಲಘಟಗಿ ಕ್ಷೇತ್ರ ವ್ಯಾಪ್ತಿಯ ದೇವರಹುಬ್ಬಳ್ಳಿ, ಮನಸೂರು, ಮನಗುಂಡಿ, ಸಲಕಿನಕೊಪ್ಪ, ಬಾಡ, ನಿಗದಿ, ಹಳ್ಳಿಗೇರಿ, ಹೊಲ್ತಿಕೋಟಿ ಇತ್ಯಾದ ಊರುಗಳಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಊರಿನಲ್ಲಿರುವ ಕೊಳವೆಬಾವಿ ಅಥವಾ ತೊಟ್ಟಿಯ ಎದುರು ದಿನಗಟ್ಟಲೇ ನೀರಿಗಾಗಿ ಕಾದು ಕೂರುವವರಿಗೆ ಸಿಗುವುದು ಐದರಿಂದ ಆರು ಬಿಂದಿಗೆ ನೀರು ಮಾತ್ರ.

ಗ್ರಾಮದ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ದೇವರಹುಬ್ಬಳ್ಳಿಯ ರುದ್ರಪ್ಪ ಕುಂದಗೋಳ, ‘ಎರಡು ಅವಧಿಗೆ  ಸಂತೋಷ ಲಾಡ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದಕ್ಕೂ, ಹಿಂದೆ ಇತರ ಪಕ್ಷಗಳ ಮುಖಂಡರೂ ಗೆದ್ದಿದ್ದಾರೆ. ಆದರೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಮನವಿ ಕೊಟ್ಟಿದ್ದಾಯ್ತು, ಹೋರಾಟ ಮಾಡಿದ್ದಾಯ್ತು. ಜಿಲ್ಲಾಧಿಕಾರಿಗೂ ಬೇಡಿಕೊಂಡಿದ್ದಾಯ್ತು. ಇನ್ನೇನಿದ್ದರೂ ರೊಟ್ಟಿ ಬುತ್ತಿ ಕಟ್ಟಿಕೊಂಡು ಧರಣಿ ನಡೆಸುವುದೊಂದೇ ಇರುವ ಮಾರ್ಗ’ ಎಂದರು.

‘ಐದಾರು ಕೊಡ ನೀರು ತರಲು 24 ಗಂಟೆ ಕಾಯಬೇಕು. ಮುಂಜಾನೆಯಿಂದ ಸಂಜೆವರೆಗೂ ನೀರು ತರುವುದೇ ಒಬ್ಬರ ಕೆಲಸವಾಗಿದೆ. ಕೂಲಿ ಮಾಡುವವರ ಕಥೆ ಏನಾಗಬೇಕು ಹೇಳಿ. ಕೂಲಿ ಬಿಟ್ಟು ನೀರುತರುವುದೇ ಕಾಯಕವಾಗಿದೆ’ ಎಂದು ಚಂದ್ರವ್ವ ಆರೇರ ತಮ್ಮ ಅಳಲು ತೋಡಿಕೊಂಡರು.

ಇದು ಈ ಗ್ರಾಮದ ಸಮಸ್ಯೆ ಮಾತ್ರವಲ್ಲ. ಸುತ್ತ–ಮುತ್ತಲಿನ ಬಹುತೇಕ ಗ್ರಾಮಗಳ ಕುಡಿಯುವ ನೀರಿನ ಬವಣೆ ಇದೇ ತೆರನಾಗಿದೆ. ಶಿವನಗರದ ಗೌಳಿಯರ ಬಡಾವಣೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ತೀವ್ರ ಜಲಕ್ಷಾಮ ಉಂಟಾಗಿದೆ. ಸಮೀಪದ ಕುಂಬರಕೊಪ್ಪದ ಡೋರಿ ಕೆರೆ ಬತ್ತಿದೆ. ಇದೇ ಪರಿಸ್ಥಿತಿಯಲ್ಲಿ ಇನ್ನು ಮೂರು ತಿಂಗಳು ಕಳೆಯುವುದು ಹೇಗೆ ಎಂದು ಊರಿನ ಹಿರಿಯರು ಪ್ರಶ್ನಿಸುತ್ತಾರೆ.

ಮಧ್ಯಾಹ್ನದ ಬಿಸಿಯೂಟದ ನಂತರ ಶಾಲಾ ಮಕ್ಕಳು ತಟ್ಟೆ ತೊಳೆಯಲು ಶಾಲೆಯಲ್ಲಿ ನೀರಿಲ್ಲದಿರುವುದರಿಂದ ತಟ್ಟೆಯನ್ನು ತಮ್ಮ ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಿ ತೊಳೆದುಕೊಂಡು ಬರುತ್ತಿದ್ದ ದೃಶ್ಯ ಮನಗುಂಡಿಯಲ್ಲಿ ಕಂಡುಬಂತು.

‘ಊಟ ಮಾಡಿದ ತಟ್ಟೆ ತೊಳೆಯಲು ಶಾಲೆಯಲ್ಲಿ ನೀರಿನ ಕೊರತೆ ಇದೆ. ನಮ್ಮ ಮನೆ ಸ್ವಲ್ಪ ದೂರವಿದೆ. ಹೀಗಾಗಿ, ಇಲ್ಲೇ ಸಮೀಪದ ಸ್ನೇಹಿತರ ಮನೆಗೆ ಹೋಗಿ ತಟ್ಟೆ ತೊಳೆದು ತರುತ್ತೇವೆ’ ಎಂದು ಶಾಲಾ ಬಾಲಕ ಬಸವರಾಜ ಹೇಳಿದನು.

ಈ ಭಾಗದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಾಳಿ ನದಿ ನೀರನ್ನು ಈ ಭಾಗದ ಕೆರೆಗಳಿಗೆ ಹರಿಸಲು ಒತ್ತಾಯಿಸಿ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಸಂತೋಷ ಲಾಡ್‌ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು, ಕರೆ ಸ್ವೀಕರಿಸಲಿಲ್ಲ.

**

ನೀರಿನ ಸಮಸ್ಯೆ ಇರುವಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಖರೀದಿಸಲು ಸೂಚನೆ ನೀಡಲಾಗಿದೆ. ನೀರಿನ ತೀವ್ರ ಅಭಾವ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪ್ರಸ್ತಾವವೂ ಇದೆ.

– ಪ್ರಕಾಶ ಕುದರಿ, ತಹಶೀಲ್ದಾರ್‌, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry